ಉಡುಪಿ ಡಿಸಿ ಕಾರ್ಯಕ್ಕೆ ಮೆಚ್ಚುಗೆಯಾಗಿ ಡಿಪಿ ಚಾಲೆಂಜ್ !
ಉಡುಪಿ, ಎ.11: ಉಡುಪಿ ಜಿಲ್ಲೆಯಲ್ಲಿ ಕೊರೋನ ವೈರಸ್ ನಿಯಂತ್ರಣಕ್ಕೆ ಸಂಬಂಧಿಸಿ ಜಿಲ್ಲಾಧಿಕಾರಿ ಜಿ.ಜಗದೀಶ್ ಕಾರ್ಯವೈಖರಿ ಬಗ್ಗೆ ಜನತೆಯಿಂದ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದ್ದು, ಜಿಲ್ಲಾಧಿಕಾರಿಗಳಿಗೆ ಗೌರವ ಸಲ್ಲಿಸುವ ನಿಟ್ಟಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಜಿಲ್ಲಾಧಿಕಾರಿಗಳ ಡಿಪಿ ಚಾಲೆಂಜ್ ಆರಂಭ ಗೊಂಡಿದೆ.
‘ನಮ್ಮ ಜಿಲ್ಲಾಧಿಕಾರಿ ನಮ್ಮ ಹೆಮ್ಮೆ’ ಹಾಗೂ ‘ನಿಮ್ಮೊಂದಿಗೆ ನಾವು ಇದ್ದೇವೆ’ ಎಂಬುದು ಈ ಅಭಿಯಾನದ ಸ್ಲೋಗನ್ ಆಗಿದ್ದು, ಜಿಲ್ಲಾಧಿಕಾರಿಗಳ ಕಾರ್ಯಕ್ಕೆ ಸಾಥ್ ಕೊಡುವವರು ಜಿಲ್ಲಾಧಿಕಾರಿಗಳ ಫೋಟೋವನ್ನು ತಮ್ಮ ವಾಟ್ಸಾಪ್ ಹಾಗೂ ಫೇಸ್‌ಬುಕ್‌ಗಳ ಡಿಪಿ ಹಾಗೂ ಸ್ಟೇಟಸ್‌ಗಳಲ್ಲಿ ಹಾಕುವಂತೆ ಇದರಲ್ಲಿ ಸೂಚಿಸಲಾಗಿದೆ.
ಈಗಾಗಲೇ ಈ ಪೋಸ್ಟ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಜನ ಇದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತಪಡಿಸುತ್ತಿದ್ದಾರೆ. ಈ ಅಭಿಯಾನ ದ ಮೂಲಕ ಜಿಲ್ಲಾಡಳಿತಕ್ಕೆ ಕೃತಜ್ಞತೆ ಸಲ್ಲಿಸುವ ಕಾರ್ಯವನ್ನು ನಡೆಸಲಾಗುತ್ತಿದೆ. ಈಗಾಗಲೇ ಜಿಲ್ಲೆಯಲ್ಲಿ ಪತ್ತೆಯಾಗಿರುವ ಮೂವರು ಕೊರೋನ ಸೋಂಕಿತರು ಗುಣಮುಖರಾಗಿದ್ದು, ಸದ್ಯ ಜಿಲ್ಲೆಯಲ್ಲಿ ಯಾರು ಕೂಡ ಆತಂಕ ಪಡುವ ಅಗತ್ಯ ಇಲ್ಲ ಎಂದು ಜಿಲ್ಲಾಧಿಕಾರಿ ಹೇಳಿಕೆ ನೀಡಿದ ಬಳಿಕ ಈ ಅಭಿಯಾನ ಆರಂಭಿಸ ಲಾಗಿದೆ.
‘ಈ ಅಭಿಯಾನವನ್ನು ಯಾರು ಮಾಡುತ್ತಿದ್ದಾರೆಂಬುದು ನನಗೆ ಮಾಹಿತಿ ಇಲ್ಲ. ನಾನು ನನ್ನ ಕರ್ತವ್ಯವನ್ನು ನಿರ್ವಹಿಸುತ್ತಿದ್ದೇನೆ. ಜನ ಈ ರೀತಿ ಮಾಡು ವುದಕ್ಕಿಂತ, ಕೊರೋನ ನಿಯಂತ್ರಣಕ್ಕಾಗಿ ಜಿಲ್ಲಾಡಳಿತದ ಜೊತೆ ಕೈಜೋಡಿಸಲಿ. ಅಲ್ಲದೆ ಜಿಲ್ಲಾಡಳಿತ ನೀಡುವ ಆದೇಶವನ್ನು ಚಾಚೂ ತಪ್ಪದೆ ಪಾಲಿಸಲಿ’
-ಜಿ.ಜಗದೀಶ್, ಜಿಲ್ಲಾಧಿಕಾರಿ ಉಡುಪಿ.