ಟರ್ಕಿ: 93 ವರ್ಷದ ಮಹಿಳೆ ಕೊರೋನದಿಂದ ಚೇತರಿಕೆ
ಇಸ್ತಾಂಬುಲ್ (ಟರ್ಕಿ), ಎ. 11: ಟರ್ಕಿಯಲ್ಲಿ ನೋವೆಲ್-ಕೊರೋನವೈರಸ್ ಸೋಂಕಿಗೆ ಒಳಗಾಗಿದ್ದ 93 ವರ್ಷದ ಮಹಿಳೆಯೊಬ್ಬರು 10 ದಿನಗಳ ಚಿಕಿತ್ಸೆಯ ಬಳಿಕ ಚೇತರಿಸಿಕೊಂಡು ಮನೆಗೆ ಮರಳಿದ್ದಾರೆ ಹಾಗೂ ಆ ಮೂಲಕ ಕೊರೋನವೈರಸ್ ರೋಗಿಗಳಲ್ಲಿ ಹೊಸ ಭರವಸೆ ತುಂಬಿಸಿದ್ದಾರೆ.
ಕೋವಿಡ್-19 ಸಾಂಕ್ರಾಮಿಕ ಕಾಯಿಲೆಯು ಹೆಚ್ಚಾಗಿ ವೃದ್ಧರಲ್ಲಿ ಗಂಭೀರ ಅಸ್ವಸ್ಥತೆಯನ್ನು ಉಂಟುಮಾಡುತ್ತದೆ ಹಾಗೂ ಅವರನ್ನೇ ಬಲಿ ತೆಗೆದುಕೊಳ್ಳುತ್ತದೆ ಎಂಬ ಸಾಮಾನ್ಯ ಕಲ್ಪನೆಯಿದೆ.
‘‘ಈ ಪ್ರಕರಣವು ಜನರಲ್ಲಿ ಭರವಸೆ ಹುಟ್ಟಿಸಿದೆ. ಯಾಕೆಂದರೆ ಗಂಭೀರ ಕಾಯಿಲೆಗಳನ್ನು ಹೊಂದಿರುವ ಈ ವಯಸ್ಸಿನ ವ್ಯಕ್ತಿಗಳು ಕೊರೋನ ವೈರಸ್ ಸೋಂಕಿಗೆ ತುತ್ತಾದರೆ ಅವರು ಚೇತರಿಸಿಕೊಳ್ಳುವುದು ಕಷ್ಟ’’ ಎಂದು ಮಹಿಳೆ ಚಿಕಿತ್ಸೆ ಪಡೆದ ಇಸ್ತಾಂಬುಲ್‌ನ ಆಸ್ಪತ್ರೆಯ ಮುಖ್ಯ ವೈದ್ಯ ಝಕಾಯ್ ಕುಟ್ಲುಬಯ್ ಎಎಫ್‌ಪಿ ಸುದ್ದಿ ಸಂಸ್ಥೆಗೆ ತಿಳಿಸಿದರು.
ಸಾವಿರಕ್ಕೂ ಅಧಿಕ ಸಾವು
ಟರ್ಕಿಯಲ್ಲಿ 47,000ಕ್ಕೂ ಅಧಿಕ ಕೋವಿಡ್-19 ಪ್ರಕರಣಗಳು ದಾಖಲಾಗಿವೆ. ಅದು ಕೊರೋನವೈರಸ್‌ನ ಅತಿ ಹೆಚ್ಚು ಸೋಂಕಿಗೆ ಒಳಗಾದ ದೇಶಗಳ ಪಟ್ಟಿಯಲ್ಲಿ 10ನೇ ಸ್ಥಾನದಲ್ಲಿದೆ.
ದೇಶದಲ್ಲಿ 1,000ಕ್ಕೂ ಅಧಿಕ ಸಾವುಗಳು ಸಂಭವಿಸಿವೆ ಹಾಗೂ ಕಾಯಿಲೆಯು ವೇಗವಾಗಿ ಹರಡುತ್ತಿದೆ. ಮೃತಪಟ್ಟವರಲ್ಲಿ ಓರ್ವ ವೈದ್ಯ ಸೇರಿದ್ದಾರೆ. 600ಕ್ಕೂ ಅಧಿಕ ಆರೋಗ್ಯ ಸಿಬ್ಬಂದಿ ಸೋಂಕಿಗೆ ಒಳಗಾಗಿದ್ದಾರೆ.