ಅಮೆರಿಕ: 2,000 ದಾಟಿದ ದೈನಂದಿನ ಕೊರೋನವೈರಸ್ ಸಾವು
ವಾಶಿಂಗ್ಟನ್, ಎ. 11: ಅಮೆರಿಕದಲ್ಲಿ ಶುಕ್ರವಾರ ಕೋವಿಡ್-19 ಕಾಯಿಲೆಯಿಂದಾಗಿ 2,000ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ಕೊರೋನವೈರಸ್‌ಗೆ ಸಂಬಂಧಿಸಿ ಅಮೆರಿಕ ಪ್ರತಿ ದಿನ ತನ್ನ ದಾಖಲೆಗಳನ್ನು ತಾನೇ ಮುರಿಯುತ್ತಿದೆ ಹಾಗೂ ಇದು ಹೊಸ ದಾಖಲೆಯಾಗಿದೆ.
ಕಳೆದ 24 ಗಂಟೆಗಳ ಅವಧಿಯಲ್ಲಿ ಅಮೆರಿಕದಲ್ಲಿ ಕೊರೋನವೈರಸ್‌ನಿಂದಾಗಿ 2,108 ಮಂದಿ ಸಾವಿಗೀಡಾಗಿದ್ದಾರೆ ಎಂದು ಜಾನ್ಸ್ ಹಾಪ್‌ಕಿನ್ಸ್ ವಿಶ್ವವಿದ್ಯಾನಿಲಯದ ಅಂಕಿಅಂಶಗಳು ತಿಳಿಸಿವೆ.
ಇದರೊಂದಿಗೆ ಅಮೆರಿಕದಲ್ಲಿ ಈ ಮಾರಕ ಸಾಂಕ್ರಾಮಿಕ ರೋಗಕ್ಕೆ ಈವರೆಗೆ ಬಲಿಯಾದವರ ಒಟ್ಟು ಸಂಖ್ಯೆ 18,586ಕ್ಕೆ ಏರಿದೆ. ಈ ವಿಷಯದಲ್ಲಿ ಅದು ಇಟಲಿಗೆ ನಿಕಟ ಸ್ಪರ್ಧೆ ನೀಡುತ್ತಿದೆ. ಇಟಲಿಯಲ್ಲಿ ಈವರೆಗೆ 18,849 ಮಂದಿ ಕೊರೋನವೈರಸ್‌ಗೆ ಬಲಿಯಾಗಿದ್ದಾರೆ.
ಇದೇ ಅವಧಿಯಲ್ಲಿ ಅಮೆರಿಕದಲ್ಲಿ 35,098 ಹೊಸ ಸೋಂಕು ಪ್ರಕರಣಗಳು ವರದಿಯಾಗಿವೆ ಹಾಗೂ ಇದರೊಂದಿಗೆ ದೇಶದಲ್ಲಿ ದಾಖಲಾಗಿರುವ ಒಟ್ಟು ಸೋಂಕು ಪ್ರಕರಣಗಳ ಸಂಖ್ಯೆ 4,96,535ಕ್ಕೆ ಏರಿದೆ.
ನ್ಯೂಯಾರ್ಕ್: ಐಸಿಯುನಲ್ಲಿರುವ ಸೋಂಕಿತರ ಸಂಖ್ಯೆಯಲ್ಲಿ ಇಳಿಕೆ
ನ್ಯೂಯಾರ್ಕ್ ರಾಜ್ಯಾದ್ಯಂತ ತೀವ್ರ ನಿಗಾ ಘಟಕಗಳಲ್ಲಿರುವ ಕೊರೋನವೈರಸ್ ಸೋಂಕಿತರ ಸಂಖ್ಯೆಯಲ್ಲಿ ಗುರುವಾರ ಕಡಿತವಾಗಿದೆ ಎಂದು ರಾಜ್ಯದ ಗವರ್ನರ್ ಆ್ಯಂಡ್ರೂ ಕುವೋಮೊ ಶುಕ್ರವಾರ ಹೇಳಿದ್ದಾರೆ. ಇದು ಸಾಂಕ್ರಾಮಿಕದ ತೀವ್ರತೆ ಕಡಿಮೆಯಾಗಿರುವ ಸೂಚನೆಯಾಗಿರಬಹುದು ಎಂಬ ಭರವಸೆಯನ್ನು ಅವರು ವ್ಯಕ್ತಪಡಿಸಿದ್ದಾರೆ.
ನ್ಯೂಯಾರ್ಕ್‌ನ ತೀವ್ರ ನಿಗಾ ಘಟಕಗಳಲ್ಲಿ ಹಿಂದಿನ ದಿನಕ್ಕೆ ಹೋಲಿಸಿದರೆ ಗುರುವಾರ 17 ರೋಗಿಗಳು ಕಡಿಮೆಯಿದ್ದರು ಎಂದು ಅವರು ಹೇಳಿದರು. ರಾಜ್ಯದಲ್ಲಿ ಸಾಂಕ್ರಾಮಿಕ ಕಾಯಿಲೆ ಸ್ಫೋಟಗೊಂಡಂದಿನಿಂದ ಒಂದು ದಿನದಲ್ಲಿ ರೋಗಿಗಳ ಸಂಖ್ಯೆ ಕಡಿಮೆಯಾಗಿರುವುದು ಇದೇ ಮೊದಲ ಬಾರಿಯಾಗಿದೆ.
ಅಮೆರಿಕದ ಕೊರೋನವೈರಸ್ ಕೇಂದ್ರ ಬಿಂದುವಾಗಿರುವ ನ್ಯೂಯಾರ್ಕ್‌ನಲ್ಲಿ ಕೋವಿಡ್-19 ಕಾಯಿಲೆಗೆ ಈವರೆಗೆ 7,844 ಮಂದಿ ಬಲಿಯಾಗಿದ್ದಾರೆ. ಇದು ಇಡೀ ಅಮೆರಿಕದಲ್ಲಿ ದಾಖಲಾಗಿರುವ ಒಟ್ಟು ಸಂಖ್ಯೆಯ ಸುಮಾರು ಅರ್ಧದಷ್ಟಾಗಿದೆ. ನ್ಯೂಯಾರ್ಕ್ ರಾಜ್ಯದಲ್ಲಿ ಬುಧವಾರ 799 ಮಂದಿ ಕೊರೋನವೈರಸ್‌ನಿಂದಾಗಿ ಮೃತಪಟ್ಟಿದ್ದಾರೆ.