ಹಳೆಯಂಗಡಿ : ಅಗತ್ಯ ಸಾಮಗ್ರಿ ಖರೀದಿಗೂ ಪೊಲೀಸರಿಂದ ತಡೆ; ಆರೋಪ
ಮಂಗಳೂರು, ಎ.11: ಕೊರೋನ ಹಿನ್ನೆಲೆಯಲ್ಲಿ ಸರಕಾರ ಲಾಕ್‌ಡೌನ್ ಘೋಷಿಸಿದ್ದರೂ, ಬೆಳಗ್ಗೆ 7ರಿಂದ ಮಧ್ಯಾಹ್ನ 12ರವರೆಗೆ ರಿಯಾಯಿತಿ ನೀಡಿದೆ. ಆದರೂ ದಿನಸಿ, ಪಡಿತರ ಖರೀದಿಸುತ್ತಿದ್ದ ಜನರ ಬಳಿ ಮುಲ್ಕಿ ಪೊಲೀಸರು ಗೂಂಡಾಗಳಂತೆ ವರ್ತಿಸುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಕೊರೋನ ಸಾಂಕ್ರಾಮಿಕ ರೋಗ ಹಡುವುದನ್ನು ತಡೆಯುವ ನಿಟ್ಟಿನಲ್ಲಿ ರಾಜ್ಯ ಸರಕಾರ ಎರಡು ತಿಂಗಳ ಪಡಿತರವನ್ನು ಒಂದೇ ಬಾರಿ ನೀಡಲು ನಿರ್ಧರಿಸಲಾಗಿದೆ. ಅದರಂತೆ ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ಪಡೆದರೂ ಮನೆಗೆ ಒಯ್ಯುವುದು ಹೇಗೆ ಎಂದು ಚಿಂತಾಕ್ರಾಂತರಾಗಿದ್ದಾರೆ.
ಬಾಡಿಕೆ ರಿಕ್ಷಾಗಳನ್ನು ಬಳಸುವಂತಿಲ್ಲ, ಬೈಕ್, ಕಾರುಗಳನ್ನು ತಂದು ರಸ್ತೆಯ ಬದಿಯಲ್ಲಿ ನಿಲ್ಲಿಸಿ ಪಡಿತರ ದಿನಸಿ ಖರೀದಿಗೆ ತೆರಳುವಂತಿಲ್ಲ. ತೆರಳಿದ್ದರೆ ಪೊಲೀಸರು ಬಂದು ವಾಹನಗಳನ್ನು ಜಪ್ತಿ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದಾರೆ ಎಂದು ಸಾರ್ವಜನಿಕರು ಪೊಲೀಸರ ಕ್ರಮವನ್ನು ಖಂಡಿಸಿದ್ದಾರೆ.
ಹಳೆಯಂಗಡಿ ಪರಿಸರದ ಕೆಲವು ರಸ್ತೆಗಳನ್ನು ಬ್ಯಾರಿಕೇಡ್‌ಗಳ ಮೂಲಕ ಬಂದ್ ಮಾಡಿದ್ದರೆ, ಪಂಡಿತ್ ಹರಿಭಟ್ ರಸ್ತೆಯನ್ನು ಪೊಲೀಸ್ ವಾಹನ ಅಡ್ಡ ನಿಲ್ಲಿಸಿ ಬಂದ್ ಮಾಡಿದ್ದರು. ಇದರಿಂದಾಗಿ ಅಗತ್ಯ ಖರೀದಿಗೆ ಮೆಡಿಕಲ್, ನ್ಯಾಯಬೆಲೆ ಅಂಗಡಿ, ತರಕಾರಿ ಖರೀದಿಗೆ ಪೇಟೆಗೆ ಬಂದರೆ ಪೊಲೀಸರು ಕಿರಿಕಿರಿ ಜೊತೆಗೆ ಜನರ ಬಳಿ ರೌಡಿಗಳಂತೆ ವರ್ತಿಸುತ್ತಿದ್ದಾರೆ ಎಂದು ಜನ ಆರೋಪಿಸಿದ್ದಾರೆ.
ಮಹಿಳೆಯೊಬ್ಬರು ಪಡೆದಿದ್ದ ಎರಡು ತಿಂಗಳ ಪಡಿತರ ಸಾಮಗ್ರಿಯನ್ನು ಹೊತ್ತು ಕೊಂಡಹೋಗಲಾರದೇ ಆಟೊ ರಿಕ್ಷಾಕ್ಕಾಗಿ ಕಾಯುತ್ತಿದ್ದರು. ಈ ವೇಳೆ ಪೊಲೀಸರು ರಿಕ್ಷಾಗಳು ಬಾಡಿಗೆ ಮಾಡದಂತೆ ತಡೆವೊಡ್ಡಿದರು ಎನ್ನಲಾಗಿದೆ. ಇದರಿಂದಾಗಿ ಕುಪಿತಗೊಂಡ ಮಹಿಳೆ, ರಿಕ್ಷಾ ಬಳಸಬಾರದು ಎಂದಾದರೆ ನನ್ನ ದಿನಸಿ ಸಾಮಗ್ರಿಯನ್ನು ಮನೆಗೆ ಹೇಗೆ ತಲುಪಿಸಲಿ ಎಂದು ಪೊಲೀಸರನ್ನು ಪ್ರಶ್ನಿಸಿ ದಬಾಯಿಸಿ ಘಟನೆಯೂ ಹಳೆಯಂಗಡಿ ನ್ಯಾಯಬೆಲೆ ಅಂಗಡಿಯ ಬಳಿ ನಡೆಯಿತು.
ಗ್ರಾಹಕರು ಪಡಿತರ ಪಡೆಯಲು ಬೆಳಗ್ಗೆ ಬಂದು ಸರದಿ ಸಾಲಿನಲ್ಲಿ ನಿಂತು ಕಾಯುತ್ತಿದ್ದರು. ಆದರೆ, ಸ್ಥಳಕ್ಕಾಗಮಿಸಿದ ಪೊಲೀಸರು ಸಾಲಿನಲ್ಲಿ ನಿಂತವರನ್ನು ಹಿಂದೆ ಕಳುಹಿಸಿದ್ದಾರೆ ಎಂದೂ ಜನರು ಆರೋಪಿಸಿದ್ದಾರೆ.
ಕೊಂಡು ಹೋಗಲು ಬಿಡದ ಮೇಲೆ ಪಡಿತರ ನೀಡುವುದಾದರೂ ಏಕೆ ?
ಸರಕಾರ ಪಡಿತರ ನೀಡುತ್ತಿದೆ. ಪೊಲೀಸರು ಪಡಿತರ ಕೊಂಡು ಹೋಗಲು ಬಿಡುತ್ತಿಲ್ಲ. ಹಾಗಿದ್ದರೆ ಪಡಿತರ ನೀಡುವ ನೆಪದಲ್ಲಿ ನಮ್ಮನ್ನು ಸತಾಯಿಸುವುದು ಏಕೆ ? ನಮ್ಮನ್ನು ಈ ರೀತಿ ಬಲಿಪಶುಗಳನ್ನಾಗಿ ಮಾಡುವುದು ಯಾವ ನ್ಯಾಯ ಎಂದು ಹೆಸರು ಹೇಳಲು ಇಚ್ಚಿಸದ ಮಹಿಳೆ ಯೊಬ್ಬರು ಜಿಲ್ಲಾಡಳಿತ ಸರಕಾರವನ್ನು ಪ್ರಶ್ನಿಸಿದ್ದಾರೆ.
ಸರಕಾರ ನೀಡುವ ಪಡಿತರವನ್ನು ಪೊಲೀಸರು ಕೊಂಡು ಹೋಗಲು ಪೊಲೀಸರು ನಿರಾಕರಿಸುತ್ತಿದ್ದಾರೆ. ಹಾಗಿದ್ದರೆ ಪೊಲೀಸರೇ ಸಾಮಗ್ರಿಗಳನ್ನು ಮನೆಗೆ ತಲುಪಿಸಬೇಕು. ಅಲ್ಲದಿದ್ದರೆ ಆಟೊ ರಿಕ್ಷಾದ ವ್ಯವಸ್ಥೆಯಾದರೂ ಬಳಸಲು ಅನುವು ಮಾಡಿ ಕೊಡಬೇಕು.
- ಆಲಿಖಾನ್, ಗ್ರಾಮಸ್ಥ