ಅನಿವಾಸಿ ಭಾರತೀಯರ ಆತಂಕ ಪರಿಹರಿಸಲು ಭಾರತ ಸರಕಾರದ ಶೀಘ್ರ‌ ಮಧ್ಯಪ್ರವೇಶ ಅಗತ್ಯ: ಐಎಸ್ಎಫ್

Update: 2020-04-11 18:08 GMT

ದಮಾಮ್ : ಕೊರೋನ ಸಮಸ್ಯೆಯ ಹಿನ್ನೆಲೆಯಲ್ಲಿ ಸೌದಿ ಅರೇಬಿಯಾದಲ್ಲಿ ಅನಿವಾಸಿ ಭಾರತೀಯರು ತೀವ್ರ ಸಂಕಷ್ಟದಲ್ಲಿರುವುದರಿಂದ ಅವರ ಸಮಸ್ಯೆಯನ್ನು ಪರಿಹರಿಸಲು ಭಾರತೀಯ ಸರಕಾರ ಮತ್ತು ರಾಯಭಾರಿ ಕಚೇರಿ ತಕ್ಷಣವೇ ಕ್ರಮಕೈಗೊಳ್ಳಬೇಕೆಂದು ಇಂಡಿಯನ್ ಸೋಶಿಯಲ್ ಫೋರಮ್ ಪೂರ್ವ ಪ್ರಾಂತ್ಯ ಕೇಂದ್ರ ಸಮಿತಿ ಒತ್ತಾಯಿಸಿದೆ.

ಸೌದಿ ಅರೇಬಿಯಾದ ಹಲವು ಪ್ರಾಂತ್ಯಗಳಲ್ಲಿ  ಕೊರೋನ ವೈರಸ್ ಪ್ರಕರಣ ಮತ್ತು ಅದರಿಂದುಂಟಾದ ಮರಣ ಸಂಖ್ಯೆ ಅಪಾಯಕಾರಿಯಾಗಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅನಿವಾಸಿಗಳಲ್ಲಿ ಆತಂಕವುಂಟಾಗಿದೆ. ಸೌದಿ ಸರಕಾರ ಮತ್ತು ಆರೋಗ್ಯ ಸಚಿವಾಲಯವು ಅತ್ಯುತ್ತಮ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುತ್ತಿವೆ. ಆದರೆ ಮುಂದಿನ ದಿನಗಳಲ್ಲಿ ಪ್ರಕರಣಗಳು ಹೆಚ್ಚುವ ಬಗ್ಗೆ ಅಂದಾಜಿಸಲಾಗಿದ್ದು, ವೈರಸ್ ತಗುಲಿದ ಅನಿವಾಸಿ ಭಾರತೀಯರ ಸಂಖ್ಯೆಯೂ ಹೆಚ್ಚುತ್ತಿರುವುದರಿಂದ ಅವರಿಗೆ ಚಿಕಿತ್ಸೆಯನ್ನು ಖಾತರಿ ಪಡಿಸುವುದಕ್ಕಾಗಿ ಭಾರತೀಯ ಸರಕಾರವು ತಕ್ಷಣವೇ ಮಧ್ಯಪ್ರವೇಶಿಸಬೇಕು ಮತ್ತು ಅನಿವಾಸಿ ಭಾರತೀಯರು ಒಟ್ಟಾಗಿ ವಾಸಿಸುವ ಕೊಠಡಿಗಳಲ್ಲಿ ಕ್ವಾರೆಂಟೈನ್ ಸೌಲಭ್ಯ ಉತ್ತಮವಿಲ್ಲದಿರುವುದರಿಂದ ಅವರಿಗೆ ಕ್ವಾರೆಂಟೈನ್ ಸೌಲಭ್ಯ ದೊರಕುವ ಕುರಿತು ಭಾರತೀಯ ರಾಯಭಾರಿ ಕಚೇರಿ ಮತ್ತು ಸರಕಾರ‌‌ ಖಾತರಿಪಡಿಸಿಕೊಳ್ಳಬೇಕು ಎಂದು ಐಎಸ್ಎಫ್ ಪೂರ್ವ ಪ್ರಾಂತ್ಯ ಅಧ್ಯಕ್ಷ ವಾಸಿಮ್ ರಬ್ಬಾನಿ ಒತ್ತಾಯಿಸಿದ್ದಾರೆ.

ತವರಿಗೆ ಮರಳ ಬಯಸುವ ಅನಿವಾಸಿ ಭಾರತೀಯರಿಗಾಗಿ ಕಡಿಮೆ ದರದ ವಿಮಾನ ಸೇವೆಯನ್ನು ಸರಕಾರ ಏರ್ಪಾಟು ಮಾಡಬೇಕು. ಅವರು ತವರಿಗೆ ಮರಳಿದರೆ  ಅವರಿಗಾಗಿ ವಿಶೇಷ ಕ್ವಾರೆಂಟೈನ್ ವ್ಯವಸ್ಥೆಯನ್ನು ಸರಕಾರ ಕಲ್ಪಿಸಬೇಕು. ಸೌದಿ ಅರೇಬಿಯಾದ ಎಲ್ಲಾ ಪ್ರಮುಖ ನಗರಗಳೂ ಲಾಕ್ ಡೌನ್ ನಲ್ಲಿರುವುದರಿಂದ ಹಲವು ಅನಿವಾಸಿಗಳು ತಮ್ಮ ಉದ್ಯೋಗವನ್ನು ಕಳೆದುಕೊಳ್ಳಲಿದ್ದಾರೆ ಅಥವಾ ಅವರ ವೇತನ ಕುಸಿಯಲಿದೆ. ಇಂತಹ ಅನಿವಾಸಿ ಭಾರತೀಯರ ಕುಟುಂಬಕ್ಕೆ ಸರಕಾರವು ತಕ್ಷಣದ ನೆರವು‌ ನೀಡಬೇಕು. ಉದ್ಯೋಗ ಕಳೆದುಕೊಂಡ ಕಾರಣಕ್ಕೆ ಆರ್ಥಿಕವಾಗಿ ದುಸ್ಥಿತಿಗೆ ತಳ್ಳಲ್ಪಟ್ಟ ಅನಿವಾಸಿಗಳಿಗೆ ಪರಿಹಾರವನ್ನು ಒದಗಿಸುವುದಕ್ಕಾಗಿ ರಾಯಭಾರಿ ಕಚೇರಿಯು ಗಂಭೀರ ಕ್ರಮವನ್ನು ತೆಗೆದುಕೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಅನಿವಾಸಿಗಳ ಸಮಸ್ಯೆಯನ್ನು ಪರಿಹರಿಸುವುದಕ್ಕಾಗಿ ಸೌದಿ ಅಧಿಕಾರಿಗಳೊಂದಿಗೆ ಸ್ವಯಂಸೇವೆಗೆ ಮುಂದಾಗುವವರಿಗೆ ಭಾರತೀಯ ರಾಯಭಾರಿ ಕಚೇರಿಯ ವತಿಯಿಂದ ಪರವಾನಿಗೆಯನ್ನು ನೀಡಬೇಕು ಎಂದು ವಾಸಿಮ್ ರಬ್ಬಾನಿ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News