ರಾಜ್ಯಗಳ ವ್ಯಾಪ್ತಿಯೊಳಗೆ ಆರ್ಥಿಕ ಚಟುವಟಿಕೆ ನಡೆಸಲು ಅವಕಾಶ ನೀಡಲು ಛತ್ತೀಸ್‌ಗಢ ಸಿಎಂ ಆಗ್ರಹ

Update: 2020-04-11 18:37 GMT

ಹೊಸದಿಲ್ಲಿ, ಎ. 11: ರಾಜ್ಯಗಳು ತಮ್ಮ ಗಡಿಯೊಳಗೆ ಸೀಮಿತವಾಗಿ ಆರ್ಥಿಕ ಚಟುವಟಿಕೆಗಳನ್ನು ನಡೆಸಲು ಅವಕಾಶ ನೀಡಬೇಕು ಎಂದು ಛತ್ತೀಸ್‌ಗದ ಮುಖ್ಯಮಂತ್ರಿ ಭೂಪೇಶ್ ಬೇಲ್ ಆಗ್ರಹಿಸಿದ್ದಾರೆ.

ಲಾಕ್‌ಡೌನ್ ಮುಂದುವರಿಸುವ ವಿಷಯದಲ್ಲಿ ಅಭಿಪ್ರಾಯ ಮತ್ತು ಸಲಹೆ ನೀಡಲು ಮುಖ್ಯಮಂತ್ರಿಗಳೊಂದಿಗೆ ಪ್ರಧಾನಿ ಮೋದಿ ನಡೆಸಿದ ವೀಡಿಯೊ ಕಾನ್ಫರೆನ್ಸ್‌ನಲ್ಲಿ ಪಾಲ್ಗೊಂಡಿದ್ದ ಬೇಲ್,ಕೊರೋನ ವೈರಸ್ ಸೋಂಕು ಪ್ರಕರಣ ಹೆಚ್ಚುತ್ತಿರುವ ಕಾರಣ ಅಂತರ್‌ರಾಜ್ಯ ರಸ್ತೆ, ವಾಯು ಮತ್ತು ರೈಲು ಪ್ರಯಾಣಕ್ಕೆ ವಿಧಿಸಿರುವ ನಿರ್ಬಂಧ ಮುಂದುವರಿಯಬೇಕು. ಆದರೆ ರಾಜ್ಯದ ಗಡಿವ್ಯಾಪ್ತಿಯೊಳಗೆ ಆರ್ಥಿಕ ಚಟುವಟಿಕೆಗಳನ್ನು ಆರಂಭಿಸುವ ನಿರ್ಧಾರವನ್ನು ರಾಜ್ಯ ಸರಕಾರಗಳಿಗೆ ಬಿಡುವುದು ಸೂಕ್ತ ಎಂದು ಹೇಳಿದ್ದಾರೆ.

ಈಗಿನ ಸಂದರ್ಭದಲ್ಲಿ ದೇಶ ತೀವ್ರ ಆರ್ಥಿಕ ಬಿಕ್ಕಟ್ಟಿನ ಸಂಕಷ್ಟದಲ್ಲಿದೆ ಎಂದ ಅವರು, ವೈಯಕ್ತಿಕ ಸುರಕ್ಷಾ ಸಾಧನಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಪೂರೈಸುವಂತೆ ಮತ್ತು ಪರೀಕ್ಷಾ ಕೇಂದ್ರಗಳ ಸಂಖ್ಯೆಯನ್ನು ಹೆಚ್ಚಿಸುವಂತೆ ಕೇಂದ್ರ ಸರಕಾರವನ್ನು ಆಗ್ರಹಿಸಿದರು.

ಲಾಕ್‌ಡೌನ್‌ನಿಂದ ತೀವ್ರ ಸಮಸ್ಯೆ ಎದುರಿಸುತ್ತಿರುವ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಆರ್ಥಿಕ ಪ್ಯಾಕೇಜ್ ಘೋಷಿಸಬೇಕು. ಸೆಂಟ್ರಲ್ ವಿವಿ ಪರೀಕ್ಷೆಗಳನ್ನು ಆನ್‌ಲೈನ್ ಮೂಲಕ ನಡೆಸಬೇಕು ಎಂದವರು ಒತ್ತಾಯಿಸಿದರು. ಪ್ರತೀದಿನ 3ರಿಂದ 5 ಸಾವಿರ ಕೊರೋನ ಸೋಂಕಿನ ಪ್ರಕರಣಗಳನ್ನು ಪರೀಕ್ಷೆ ಮಾಡಬೇಕು ಎಂದ ಅವರು, ದಿಲ್ಲಿಯಲ್ಲಿ ತಬ್ಲೀಗಿ ಜಮಾಅತ್ ನಡೆಸಿದ್ದ ಕಾರ್ಯಕ್ರಮದಲ್ಲಿ ರಾಜ್ಯದಲ್ಲಿ ಪಾಲ್ಗೊಂಡಿದ್ದ ್ಲ 7 ಸದಸ್ಯರನ್ನು ಗುರುತಿಸಿ ರಾಯ್‌ಪುರದ ಎಐಐಎಂಎಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. 107 ಜಮಾಅತ್ ಸದಸ್ಯರನ್ನು ಕ್ವಾರಂಟೈನ್‌ನಲ್ಲಿ ಇರಿಸಲಾಗಿದೆ ಎಂದವರು ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News