×
Ad

ತಬ್ಲೀಗಿ‌ ಜಮಾಅತ್ ಗೆ ಸಂಬಂಧಿಸಿ ಸುಳ್ಳು ಸುದ್ದಿ ಪ್ರಸಾರ ಮಾಡಿದ್ದಕ್ಕೆ ಕ್ಷಮೆಯಾಚಿಸಿದ ಝೀ ನ್ಯೂಸ್

Update: 2020-04-12 11:56 IST
Photo: siasat

ಹೊಸದಿಲ್ಲಿ, ಎ.12: ದೇಶಾದ್ಯಂತ ನಕಲಿ ಸುದ್ದಿಗಳ ಪಿಡುಗು ದಟ್ಟವಾಗುತ್ತಿರುವಾಗಲೇ 'ಝೀ ನ್ಯೂಸ್' ಸುದ್ದಿವಾಹಿನಿಯು ಕೊರೋನ ವೈರಸ್ ಅಥವಾ ಕೋವಿಡ್-19 ಹಾಗೂ ದಿಲ್ಲಿಯ ನಿಝಾಮುದ್ದೀನ್ ಕಾರ್ಯಕ್ರಮದ ಬಳಿಕ ಗುರಿಯಾಗುತ್ತಿರುವ ತಬ್ಲೀಗಿ ಜಮಾಅತ್‌ಗೆ ಸಂಬಂಧಿಸಿ ಮತ್ತೊಂದು ದೃಢಪಡಿಸದ ಹಾಗೂ ತಪ್ಪು ವರದಿಯನ್ನು ಪ್ರಸಾರ ಮಾಡಿದೆ.

ಎಪ್ರಿಲ್ 9ರಂದು ಪ್ರಮಾದ ಎಸಗಿರುವ ಝೀ ನ್ಯೂಸ್, ಅರುಣಾಚಲ ಪ್ರದೇಶದಲ್ಲಿ ಕೋವಿಡ್-19ಕ್ಕೆ ಸಂಬಂಧಿಸಿ 11 ಪಾಸಿಟಿವ್ ಪ್ರಕರಣ ದಾಖಲಾಗಿದೆ ಎಂದು ವರದಿ ಮಾಡಿತ್ತು. ಈ ಎಲ್ಲರನ್ನು ತಬ್ಲೀಗಿ ಸಮಾವೇಶದಲ್ಲಿ ಭಾಗಿಯಾದವರೊಂದಿಗೆ ತಳುಕು ಹಾಕಿತ್ತು.

ಖಚಿತವಲ್ಲದ ಸುದ್ದಿಯನ್ನು ಪ್ರಸಾರ ಮಾಡಿರುವ ಝೀ ನ್ಯೂಸ್ ವಾಹಿನಿ ವಿರುದ್ಧ ಕೆಂಡಕಾರಿರುವ ಅರುಣಾಚಲ ಪ್ರದೇಶ ಸರಕಾರ, ಈ ತನಕ ಅರುಣಾಚಲ ಪ್ರದೇಶದಲ್ಲಿ ಕೇವಲ ಒಂದು ಕೋವಿಡ್-19 ಪ್ರಕರಣ ದಾಖಲಾಗಿದೆ ಎಂದು ಸ್ಪಷ್ಟಪಡಿಸುತ್ತಿದ್ದೇವೆ. ಝೀ ನ್ಯೂಸ್‌ನ ವರದಿ ಸುಳ್ಳು. ಇದರಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ಟ್ವೀಟ್ ಮಾಡಿತ್ತು.

ಅರುಣಾಚಲ ಪ್ರದೇಶ ಸರಕಾರದಿಂದ ತರಾಟೆಗೆ ಒಳಗಾದ ಬಳಿಕ ಝೀ ನ್ಯೂಸ್ ಚಾನೆಲ್ ಹಿಂದಿಯಲ್ಲಿ ಸ್ಪಷ್ಟೀಕರಣ ನೀಡಿದೆ.
ಅರುಣಾಚಲ ಪ್ರದೇಶದಲ್ಲಿ ಕೇವಲ ಒಂದು ಕೊರೋನ ವೈರಸ್ ರೋಗಿ ಇರುವುದು ಖಚಿತವಾಗಿದೆ. ಮಾನವಸಹಜ ದೋಷದಿಂದಾಗಿ ಝೀ ನ್ಯೂಸ್ 11 ತಬ್ಲೀಗಿ ಜಮಾಅತ್ ನ ಸದಸ್ಯರಿಗೆ ಸೋಂಕು ದೃಢಪಟ್ಟಿದೆ ಎಂದು ವರದಿ ಮಾಡಿತ್ತು. ಈ ತಪ್ಪಿಗಾಗಿ ಕ್ಷಮೆ ಯಾಚಿಸುತ್ತೇವೆ ಎಂದು ಹೇಳಿತ್ತು.

ಕಳೆದ ಕೆಲವು ವಾರಗಳಲ್ಲಿ ವಾಸ್ತವ ಪರೀಕ್ಷಕರು, ಸರಕಾರಗಳು ಹಾಗೂ ಉತ್ತರಪ್ರದೇಶ ಪೊಲೀಸರು ತಪ್ಪು ಮಾಹಿತಿ ಹಾಗೂ ಸುಳ್ಳು ಸುದ್ದಿಗಳನ್ನು ಪ್ರಸಾರ ಮಾಡಿರುವ ಹಲವು ಮಾಧ್ಯಮಗಳನ್ನು ಕರೆಸಿಕೊಂಡಿದೆ. ಎಲ್ಲ ಸುದ್ದಿಗಳು ತಬ್ಲೀಗಿ ಜಮಾಅತ್‌ಗೆ ಸಂಬಂಧಿಸಿದ್ದಾಗಿವೆ.
ಸುಳ್ಳು ಸುದ್ದಿ ಪ್ರಸಾರ ಮಾಡಿದ್ದಕ್ಕೆ ಇದೀಗ ಎರಡನೇ ಬಾರಿ ಝೀ ನ್ಯೂಸ್ ಪೊಲೀಸರಿಂದ ಪ್ರಶ್ನಿಸಲ್ಪಟ್ಟಿದೆ. ಈ ಮೊದಲು ಫಿರೋಝಾಬಾದ್ ಪೊಲೀಸರು ಝೀ ನ್ಯೂಸ್‌ಗೆ ಸಂಬಂಧಪಟ್ಟವರನ್ನು ಕರೆಸಿಕೊಂಡು ಪ್ರಶ್ನಿಸಿದ್ದರು. ಫಿರೋಝಾಬಾದ್‌ನಲ್ಲಿ ನಾಲ್ವರು ತಬ್ಲೀಗಿ ಜಮಾಅತ್‌ನ ರೋಗಿಗಳನ್ನು ಕರೆತರಲು ಹೋಗುತ್ತಿದ್ದ ವೈದ್ಯಕೀಯ ತಂಡದ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ ಎಂಬ ತಪ್ಪು ಮಾಹಿತಿಯನ್ನು ಝೀ ನ್ಯೂಸ್ ವರದಿ ಮಾಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News