ಮಿಥುನ್ ರೈ ಹೇಳಿಕೆ ಬೆಂಬಲಿಸಲಾಗದು : ಫಾರೂಕ್ ಉಳ್ಳಾಲ್
ಮಂಗಳೂರು: ಕಾಸರಗೋಡಿನ ರೋಗಿಗಳಿಗೆ ಮಂಗಳೂರಿನ ಆಸ್ಪತ್ರೆಗಳಲ್ಲಿ ವೈದ್ಯಕೀಯ ಸೇವೆ ನೀಡುವುದನ್ನು ಆಕ್ಷೇಪಿಸುವ ಮಿಥುನ್ ರೈ ಅವರ ಹೇಳಿಕೆಯನ್ನು ಒಪ್ಪಿಕೊಳ್ಳಲಾಗದು, ಮಾನವೀಯ ತಳಹದಿಯ ಮೇಲೆ ಸ್ಥಾಪಿಸಲ್ಪಟ್ಟ ಕಾಂಗ್ರೆಸ್ ಪಕ್ಷದ ನಿಲುವಿಗೆ ಇದು ವಿರುದ್ಧವಾಗಿವೆ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಫಾರೂಕ್ ಉಳ್ಳಾಲ್ ಪ್ರತಿಕ್ರಿಯಿಸಿದ್ದಾರೆ.
ಕಾಸರಗೋಡು ಮತ್ತು ದಕ್ಷಿಣ ಕನ್ನಡ ಜಿಲ್ಲೆ ಅವಳಿ ಜಿಲ್ಲೆಯಂತೆ ತುಳುನಾಡಿನ ಅವಿಭಾಜ್ಯ ಅಂಗವಾಗಿ ಲಾಗಾಯ್ತಿನಿಂದಲೂ ಜೊತೆ ಜೊತೆಯಾಗಿ ಬದುಕಿ ಬಾಳಿದ ಪರಂಪರೆಯನ್ನು ಹೊಂದಿವೆ. ದ.ಕನ್ನಡ ಜಿಲ್ಲೆಯ ಮುಖ್ಯ ಭಾಷೆಗಳಾದ ತುಳು, ಕನ್ನಡ, ಮಲಾಮೆ ಭಾಷೆಗಳೇ ಕಾಸರಗೋಡು ಜಿಲ್ಲೆಯ ಮುಖ್ಯ ಭಾಷೆಗಳು. ವ್ಯಾಪಾರ ಶಿಕ್ಷಣ, ವೈದಕೀಯ, ಧಾರ್ಮಿಕ ಕ್ಷೇತ್ರಗಳಲ್ಲೂ ಎರಡೂ ಜಿಲ್ಲೆಗಳ ಕೊಡು -ಕೊಳ್ಳುವಿಕೆಗೆ ಅವಿನಾಭಾವ ಸಂಬಂಧವಿದೆ.
ಮಂಗಳೂರಿನ ಖಾಸಗಿ ಆಸ್ಪತ್ರೆಗಳಿಗೆ ಬರುವ ರೋಗಿಗಳ ಪೈಕಿ ಕಾಸರಗೋಡು ಜಿಲ್ಲೆಯಿಂದ ಬರುವ ರೋಗಿಗಳೇ ಹೆಚ್ಚು. ಹೀಗೆ ಬರುವವರನ್ನು ಈತನಕ ಯಾವ ಪಕ್ಷ -ಸಂಘಟನೆಗಳು ವಿರೋಧಿಸಿದ ಸಂಭವಗಳೇ ಇಲ್ಲ. ಆದರೆ ಈಗ ಕೊರೋನ ಸೋಂಕಿನ ನೆಪವೊಡಿ ಕೊರೋನ ಬಾಧಿತರಲ್ಲದ ರೋಗಿಗಳನ್ನೂ ಮಂಗಳೂರಿನ ಆಸ್ಪತ್ರೆಗೆ ಬರ ಬಾರದೆಂಬ ನಿಲುವನ್ನು ಮನುಷ್ಯತ್ವ ಇರುವವರಿಂದ ಬೆಂಬಲಿಸಲೂ ಸಾಧ್ಯವಿಲ್ಲ. ಕಾಸರಗೋಡಿನ ಜನ ವೈದಕೀಯ ಸೇವೆಗೆ ಮಂಗಳೂರನ್ನೇ ಆಶ್ರಯಿಸಿದ್ದಾರೆಂಬ ಸತ್ಯ ಗೊತ್ತಿದ್ದೂ, ಗಡಿ ಮುಚ್ಚುವವರೊಂದಿಗೆ ಸೇರಿ ಕೊಳ್ಳುವುದು, ಜನಪರ- ಮನುಷ್ಯ ಸ್ನೇಹಿ ಸಂವಿಧಾನ ಹೊಂದಿರುವ ಕಾಂಗ್ರೆಸ್ ಪಕ್ಷದಲ್ಲಿರುವವರಿಗೆ ಸೂಕ್ತವೂ ಅಲ್ಲ. ಚುನಾವಣೆಯ ಸಂದರ್ಭಗಳಲ್ಲಿ ಕಾಸರಗೋಡಿನ ಭಾಷಣಗಾರರನ್ನು ಕರೆಯಿಸಿಕೊಳ್ಳುವ ನಾವು, ಆ ನೆನಪೇ ಮರೆತಂತೆ ಮಾತನಾಡುವುದು ನಿಜಕ್ಕೂ ವಿಷಾದನೀಯ. ಪಕ್ಷದ ವರಿಷ್ಠರು ಕಾಸರಗೋಡಿನ ನೊಂದ ಜನರ ಪರವಾಗಿದ್ದಾರೆಂಬ ಆಶಾಭಾವನೆ ತನಗಿದೆ ಎಂದೂ ಫಾರೂಕ್ ಉಳ್ಳಾಲ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.