ಬೆಂಗಳೂರು: ಸ್ವತಃ ಸೀಲ್‍ಡೌನ್ ಮಾಡಿಕೊಂಡ ಕೆಂಪೇಗೌಡ ನಗರದ ಜನತೆ
ಬೆಂಗಳೂರು, ಎ.12: ಕೊರೋನ ವೈರಸ್ ನಗರದಲ್ಲಿ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಕೊರೋನ ವೈರಸ್ ತಡೆಗಟ್ಟಲು ದಾಸರಹಳ್ಳಿಯ ಕೆಂಪೇಗೌಡ ನಗರದ ಜನರು ಸ್ವತಃ ಸೀಲ್‍ಡೌನ್ ಮಾಡಿಕೊಂಡಿದ್ದಾರೆ.
ಕೆಂಪೇಗೌಡ ನಗರ ಹಾಗೂ ಹಾವನೂರು ಬಡಾವಣೆ, ಬಾಗಲಗುಂಟೆ ಸೇರಿದಂತೆ ಹಲವು ಕಡೆಗಳಲ್ಲಿ ಜನರು ಬ್ಯಾರಿಕೇಡ್ ಹಾಗೂ ಕಲ್ಲು ಹಗ್ಗವನ್ನು ರಸ್ತೆಗೆ, ರಸ್ತೆಯ ಮುಖ್ಯದ್ವಾರಕ್ಕೆ ಕಟ್ಟಿ ತಾವು ಮನೆಯಿಂದ ಹೊರಗೆ ಬರದೆ ಸೀಲ್‍ಡೌನ್ ಮಾಡಿದ್ದಾರೆ.
ದಾಸರಹಳ್ಳಿಯ ಮುಖ್ಯ ರಸ್ತೆಯಲ್ಲಿ ಓಡಾಡದಂತೆ ಹೇಳಿದರೂ ವಾಹನಗಳ ಸಂಚಾರ ನಿಲ್ಲುತ್ತಿಲ್ಲ. ಜನರಿಗೆ ಎಷ್ಟೇ ಹೇಳಿದರೂ ವಾಹನಗಳ ಮೂಲಕ ರಸ್ತೆಗೆ ಇಳಿಯುತ್ತಿದ್ದಾರೆ. ಆದರೆ ಕೊರೋನ ವೈರಸ್ ಹೆಚ್ಚುತ್ತಿರುವುದರಿಂದ ಮುಂಜಾಗ್ರತೆಯಾಗಿ ಬಡಾವಣೆಯ ಜನರು ಸೇರಿಕೊಂಡು ಯಾರೂ ರಸ್ತೆಯಲ್ಲಿ ಓಡಾಡಬಾರದು ಎಂಬ ಉದ್ದೇಶದಿಂದ ಸೀಲ್‍ಡೌನ್ ಮಾಡಿದ್ದೇವೆ ಎಂದು ಸ್ಥಳೀಯರು ಹೇಳಿದ್ದಾರೆ.
8ನೆಯ ಮೈಲಿನಲ್ಲಿ ಹೆಸರಘಟ್ಟ, ಚಿಕ್ಕಬಾಣಾವರ, ನೆಲಮಂಗಲ ಕಡೆಗೆ ಹೋಗುವ ರಸ್ತೆಯ ಬ್ಯಾರಿಕೇಡ್ ಹಾಕಿ ಒನ್‍ವೇ ಮಾಡುವ ಮೂಲಕ ಪೊಲೀಸರು ಅನಾವಶ್ಯಕವಾಗಿ ಓಡಾಡುವ ವಾಹನಗಳಿಗೆ ಕಡಿವಾಣ ಹಾಕಿದ್ದಾರೆ.