×
Ad

​‘ಕೊರೋನ ವೈರಸ್ ಸೋಂಕಿತರ ಧೈರ್ಯ ಕುಗ್ಗಿಸುವ ಕೆಲಸ ಮಾಡಬೇಡಿ’

Update: 2020-04-12 18:41 IST

ಉಡುಪಿ, ಎ.12: ಕೊರೋನ ಪಾಸಿಟಿವ್ ಬಂದ ವ್ಯಕ್ತಿಗೆ ಸಾರ್ವಜನಿಕರು ತಮ್ಮ ಕೈಯಲ್ಲಿ ಸಾಧ್ಯವಾದಷ್ಟು ಧೈರ್ಯ ತುಂಬುವ ಕೆಲಸ ಮಾಡಬೇಕೆ ಹೊರತು, ಅವರ ಧೈರ್ಯವನ್ನು ಕುಗ್ಗಿಸುವ ಕೆಲಸವನ್ನು ದಯವಿಟ್ಟು ಮಾಡ ಬಾರದು ಎಂದು ಉಡುಪಿ ಜಿಲ್ಲೆಯ ಮೊದಲ ಕೊರೋನ ಸೋಂಕಿತರಾಗಿ ಇದೀಗ ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿರುವ ಮಣಿಪಾಲದ 34ರ ಹರೆಯದ ಯುವಕ ಮನವಿ ಮಾಡಿಕೊಂಡಿದ್ದಾರೆ.

ಎ.11ರಂದು ರಾತ್ರಿ ವೇಳೆ ಉಡುಪಿ ಡಾ.ಟಿಎಂಎ ಪೈ ಕೋವಿಡ್ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆದು ಬಿಡುಗಡೆ ಹೊಂದಿರುವ ಇವರು, ಇಂದು ಆರೋಗ್ಯ ಇಲಾಖೆಯ ಮೂಲಕ ಬಿಡುಗಡೆಗೊಳಿಸಿರುವ ಆಡಿಯೋದಲ್ಲಿ ಈ ವಿಚಾರ ವನ್ನು ಹೇಳಿಕೊಂಡಿದ್ದಾರೆ.

‘ದುಬೈಯಿಂದ ವಾಪಾಸ್ಸು ಉಡುಪಿಗೆ ಬಂದ ನಾನು, ಸ್ವಯಂ ಪ್ರೇರಿತನಾಗಿ ಆಸ್ಪತ್ರೆಗೆ ತೆರಳಿ, ಕೊರೋನ ವೈರಸ್ ಬಗ್ಗೆ ಪರೀಕ್ಷೆ ಮಾಡಿಸಿದ್ದೆ. ನಂತರ ಪಾಸಿಟಿವ್ ವರದಿ ಬಂದ ನಂತರ ಯಾವುದೇ ಆತಂಕಕ್ಕೆ ಒಳಗಾಗದೆ 14 ದಿನಗಳ ಕಾಲ ಚಿಕಿತ್ಸೆ ಪಡೆದು ಗುಣಮುಖನಾಗಿ, ಇದೀಗ ಕೊರೋನ ಸೋಂಕಿನಿಂದ ಸಂಪೂರ್ಣ ಗುಣಮುಖನಾಗಿ ಎ.11ರಂದು ಉಡುಪಿ ಆಸ್ಪತ್ರೆ ಯಿಂದ ಬಿಡುಗಡೆ ಹೊಂದಿ ಮನೆಗೆ ಬಂದಿದ್ದೇನೆ’ ಎಂದು ಅವರು ಹೇಳಿದ್ದಾರೆ.

‘ಕೊರೋನ ವೈರಸ್ ಬಗ್ಗೆ ಸಾರ್ವಜನಿಕರು ಆತಂಕಕ್ಕೆ ಒಳಗಾಗಬಾರದು. ಆದರೆ ಆ ಕುರಿತು ಎಚ್ಚರ ವಹಿಸಬೇಕಾಗಿರುವುದು ಅಗತ್ಯ. ವಿದೇಶದಿಂದ ಬಂದವರು ಅಥವಾ ಯಾವುದಾದರೂ ಸಭೆಯಲ್ಲಿ ಪಾಲ್ಗೊಂಡವರು ತಾವಾಗಿ ನೇರ ಆಸ್ಪತ್ರೆಗೆ ಬಂದು ಕೊರೋನ ವೈರಸ್ ಬಗ್ಗೆ ಪರೀಕ್ಷೆ ಮಾಡಿಸಬೇಕು. ಆ ಮೂಲಕ ಈ ವೈರಸ್ ಹರಡದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಅವರು ತಿಳಿಸಿದ್ದಾರೆ.

‘ನನಗೆ ಚಿಕಿತ್ಸೆ ನೀಡಿದ ಮಣಿಪಾಲ ಕೆಎಂಸಿ ಆಸ್ಪತ್ರೆ ಹಾಗೂ ಡಾ.ಟಿಎಂಎ ಪೈ ಆಸ್ಪತ್ರೆಯ ವೈದ್ಯಾಧಿಕಾರಿಗಳು, ನರ್ಸ್ ಹಾಗೂ ಸಿಬ್ಬಂದಿಗಳು ಮತ್ತು ಜಿಲ್ಲಾಧಿಕಾರಿಗಳು, ಆರೋಗ್ಯ ಇಲಾಖೆ ಸೇರಿದಂತೆ ಎಲ್ಲ ಇಲಾಖೆಗಳ ಅಧಿಕಾರಿಗಳು ಮತ್ತು ಪೊಲೀಸ್ ಅಧಿಕಾರಿಗಳಿಗೆ ನಾನು ಈ ಮೂಲಕ ಕೃತಜ್ಞತೆ ಸಲ್ಲಿಸುತ್ತೇನೆ’ ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News