900ಕ್ಕೂ ಅಧಿಕ ದೋಣಿಗಳಲ್ಲಿ ಮೀನುಗಾರಿಕೆ: 17 ಸ್ಥಳಗಳಲ್ಲಿ ಹರಾಜು
ಉಡುಪಿ, ಎ.12: ರಾಜ್ಯ ಸರಕಾರ ನಾಡದೋಣಿ ಮೀನುಗಾರಿಕೆಗೆ ಇಂದಿ ನಿಂದ ಅವಕಾಶ ನೀಡಿರುವ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯಾದ್ಯಂತ ನೂರಾರು ದೋಣಿಗಳು ರವಿವಾರ ಕಡಲಿಗೆ ಇಳಿದು ಸಾಂಪ್ರದಾಯಿಕ ಮೀನುಗಾರಿಕೆಯನ್ನು ನಡೆಸಿತು.
ಕೊರೋನ ನಿಯಂತ್ರಣಕ್ಕಾಗಿ ವಿಧಿಸಿದ್ದ ಲಾಕ್‌ಡೌನ್‌ನಿಂದ ಮಾ.25ರಿಂದ ಜಿಲ್ಲೆಯಲ್ಲಿ ಎಲ್ಲ ರೀತಿಯ ಯಾಂತ್ರೀಕೃತ ಮೀನುಗಾರಿಕೆಗಳು ಸ್ಥಗಿತಗೊಂಡಿ ದ್ದವು. ಈ ಮಧ್ಯೆ ಕೆಲವು ಕಡೆಗಳಲ್ಲಿ ನಾಡದೋಣಿ ಮೂಲಕ ಮೀನುಗಾರಿಕೆ ಯನ್ನು ನಡೆಸಲಾಗುತ್ತಿತ್ತು. ಇದೀಗ ಸುಮಾರು 18 ದಿನಗಳ ಬಳಿಕ ಅಧಿಕೃತ ವಾಗಿ ನಾಡದೋಣಿ ಮೂಲಕ ಮೀನುಗಾರಿಕೆಗೆ ಸರಕಾರ ಅವಕಾಶ ಕಲ್ಪಿಸಿದೆ. ಆದರೆ ಮೀನುಗಾರಿಕಾ ಜೆಟ್ಟಿ, ಬಂದರುಗಳ ನಿರ್ಬಂಧ ಮುಂದುವರೆದಿದೆ.
ಸರಕಾರದ ಆದೇಶದಂತೆ ಸಾಮಾಜಿಕ ಅಂತರ ಕಾಪಾಡುವ ನಿಟ್ಟಿನಲ್ಲಿ ಕೆಲವು ದೋಣಿಗಳಲ್ಲಿ ಐದು, ಇನ್ನು ಕೆಲವು ದೋಣಿಗಳಲ್ಲಿ ಐದಕ್ಕಿಂತ ಕಡಿಮೆ ಮೀನು ಗಾರರು ಬೆಳಗಿನ ಜಾವ ನಾಲ್ಕು ಗಂಟೆ ಸುಮಾರಿಗೆ ಸಮುದ್ರಕ್ಕೆ ತೆರಳಿದರು. ಸುಮಾರು 20-25 ಮೀಟರ್ ಆಳದವರೆಗೆ ದೋಣಿಗಳಲ್ಲಿ ತೆರಳಿ ಮೀನು ಗಾರಿಕೆ ನಡೆಸಲಾಯಿತು. ಬಳಿಕ ಜಿಲ್ಲೆಯಲ್ಲಿ ನಿಗದಿ ಪಡಿಸಿರುವ ಒಟ್ಟು 17 ಸ್ಥಳಗಳಲ್ಲಿ ಬೆಳಗ್ಗೆ 11ಗಂಟೆಯೊಳಗೆ ಮೀನು ಹರಾಜು ಪ್ರಕ್ರಿಯೆಯನ್ನು ನಡೆಸಿ ಮೀುಗಳನ್ನು ಮಾರಾಟ ಮಾಡಲಾಯಿತು.
ಉಡುಪಿಯಲ್ಲಿ 300 ದೋಣಿಗಳು
ಉಡುಪಿ ತಾಲೂಕಿನಲ್ಲಿ ಒಟ್ಟು 2000 ನಾಡದೋಣಿಗಳಿದ್ದು, ಇಂದು ಸುಮಾರು 280-300 ನಾಡದೋಣಿಗಳು ಕಡಲಿಗೆ ಇಳಿದು ಮೀನುಗಾರಿಕೆ ನಡೆಸಿವೆ. ಒಂದು ದೋಣಿಯಲ್ಲಿ ಗರಿಷ್ಠ ಅಂದರೆ 3-4 ಕೆ.ಜಿ.ಯಷ್ಟು ಮಾತ್ರ ಮೀನು ಹಿಡಿಯಲು ಸಾಧ್ಯವಾಗುತ್ತದೆ. ಈ ಬಾರಿ ಸಿಲ್ವರ್ ಫಿಶ್, ಬಂಗುಡೆ, ಮಿಶ್ರ ಮೀನುಗಳು ಹೆಚ್ಚಿನ ಪ್ರಮಾಣದಲ್ಲಿ ಬಲೆಗೆ ಬಿದ್ದಿವೆ.
ಮೀನಿನ ಪ್ರಮಾಣ ಕಡಿಮೆಯಾಗಿರುವುದರಿಂದ ಮತ್ತು ಬೇಡಿಕೆ ಹೆಚ್ಚಾಗಿ ರುವುದರಿಂದ ಮೀನಿನ ದರವು ಶೇ.70-90ರಷ್ಟು ಏರಿಕೆಯಾಗಿದೆ. ಉಡುಪಿ ತಾಲೂಕಿನಲ್ಲಿ ನಾಡದೋಣಿಗಳಲ್ಲಿ ಹಿಡಿದು ತಂದ ಮೀನುಗಳನ್ನು ಹೆಜಮಾಡಿ, ಪಡುಬಿದ್ರಿ, ಎರ್ಮಾಳು, ಉಚ್ಚಿಲ, ಕಾಪು ಲೈಟ್‌ಹೌಸ್, ಮಟ್ಟು, ಮಲ್ಪೆ ಪಡುಕೆರೆ, ಬೆಂಗ್ರೆ, ಕೋಡಿಕ್ಯಾನಗಳಲ್ಲಿ ಹರಾಜು ಮಾಡಲಾಯಿತು.
ಅದೇ ರೀತಿ ಕೆಲವರು ಪಡುಕೆರೆ, ಕಲ್ಮಾಡಿ ಸೇರಿದಂತೆ ವಿವಿಧ ಹೊಳೆಗಳಲ್ಲೂ ಮೀನುಗಾರಿಕೆ ನಡೆಸಿರುವುದು ಕಂಡುಬಂತು. ಈ ದೋಣಿಗಳಿಗೆ ಕಂಡಿಗೆ, ಪೈಯ್ಯ ಮೀನುಗಳು ಹೆಚ್ಚಿನ ಪ್ರಮಾಣದಲ್ಲಿ ದೊರೆಯಿತು. ನಾಡದೋಣಿ ಮೀನುಗಾರಿಕೆಗೆ ಸರಕಾರ ಅವಕಾಶ ನೀಡಿರುವ ಹಿನ್ನೆಲೆಯಲ್ಲಿ ಎ.11ರಂದು ಉಡುಪಿ ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕರುಗಳಾದ ಕಿರಣ್ ಕುಮಾರ್, ಶಿವಕುಮಾರ್ ಮೀನುಗಾರ ಮುಖಂಡರೊಂದಿಗೆ ತೆರಳಿ ಹರಾಜು ಸ್ಥಳಗಳನ್ನು ಗುರುತಿಸುವ ಕಾರ್ಯ ನಡೆಸಿದ್ದರು.
ಕುಂದಾಪುರದಲ್ಲಿ 600 ದೋಣಿಗಳು
ಕುಂದಾಪುರ ತಾಲೂಕಿನಾದ್ಯಂತ ಸುಮಾರು 2000 ನಾಡದೋಣಿಗಳಿದ್ದು, ಅವುಗಳ ಪೈಕಿ ಸುಮಾರು 600 ದೋಣಿಗಳು ಇಂದು ಸಮುದ್ರಕ್ಕೆ ತೆರಳಿ ಮೀನು ಗಾರಿಕೆ ನಡೆಸಿದವು.
ಬೆಳಗಿನ ಜಾವ ಮೀನುಗಾರಿಕೆಗೆ ತೆರಳಿದ್ದ ನಾಡದೋಣಿಗಳು, ಬೆಳಗ್ಗೆ 11 ಗಂಟೆಯೊಳಗೆ ತೀರಕ್ಕೆ ಬಂದು ಈಗಾಗಲೇ ಗುರುತಿಸಿರುವ ಗಂಗೊಳ್ಳಿ ಲೈಟ್ ಹೌಸ್, ಮಡಿಕಲ್, ಕೊಡೇರಿ, ಮರವಂತೆ, ಕಂಚಿಗೋಡು, ಅಳ್ವೆಗದ್ದೆ, ಕೋಡಿ ಸಹಿತ ಒಂಭತ್ತು ಸ್ಥಳಗಳಲ್ಲಿ ಮೀನು ಹರಾಜು ಹಾಕಲಾಯಿತು.
ಕೆಲವೇ ದೋಣಿಗಳು ಮಾತ್ರ ಮೀನುಗಾರಿಕೆಯಲ್ಲಿ ತೊಡಗಿಸಿಕೊಂಡಿರುವು ದರಿಂದ ಬಲೆಗೆ ಸಿಕ್ಕ ಒಟ್ಟು ಮೀನಿನ ಪ್ರಮಾಣ ತೀರಾ ಕಡಿಮೆಯಾಗಿತ್ತು. ಅಲ್ಲದೆ ಬೇಡಿಕೆ ಜಾಸ್ತಿ ಇರುವುದರಿಂದ ಕೆಲವೇ ಗಂೆಗಳಲ್ಲಿ ಮೀನುಗಳು ಖಾಲಿಯಾದವು. ಒಂದೊಂದು ದೋಣಿಯವರು 3-4ಕೆ.ಜಿ.ಯವರೆಗೂ ಮೀನುಗಳನ್ನು ಹಿಡಿದು ತಂದಿದ್ದರು. ಇದರಲ್ಲಿ ಬಂಗುಡೆ ಹೆಚ್ಚಿನ ಪ್ರಮಾಣದಲ್ಲಿದ್ದವು. ಬೇಡಿಕೆ ಹೆಚ್ಚಿ ರುವುದರಿಂದ ಇಂದು ಬಂಗುಡೆ ಮೀನು ಕೆ.ಜಿ. ಒಂದಕ್ಕೆ 300ರೂ.ನಂತೆ ಮಾರಾಟವಾಯಿತು ಎಂದು ಗಂಗೊಳ್ಳಿ ವಲಯ ನಾಡದೋಣಿ ಮೀನುಗಾರರ ಸಂಘದ ಅಧ್ಯಕ್ಷ ಮಂಜು ಬಿಲ್ಲವ ಪತ್ರಿಕೆಗೆ ತಿಳಿಸಿದ್ದಾರೆ.
ವೋಲ್‌ಸೇಲ್ ಮೀನು ಖರೀದಿಗೆ ಅವಕಾಶ
ಲಾಕ್‌ಡೌನ್ ಆದೇಶ ಪಾಲನೆ ಹಾಗೂ ಸಾಮಾಜಿಕ ಅಂತರ ಕಾಪಾಡುವ ನಿಟ್ಟಿನಲ್ಲಿ ಹರಾಜು ಸ್ಥಳಗಳಲ್ಲಿ ಮೀನುಗಳ ರಖಂ(ವೋಲ್‌ಸೇಲ್) ಖರೀದಿಗೆ ಮಾತ್ರ ಅವಕಾಶ ಕಲ್ಪಿಸಲಾಗಿತ್ತು. ಚಿಲ್ಲರೆ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿತ್ತು. ಕೆ.ಜಿ. ಹಾಗೂ ಬುಟ್ಟಿ ಪ್ರಮಾಣದಲ್ಲಿ ಖರೀದಿಸುವವರಿಗೆ ಮಾತ್ರ ಮೀನು ಗಳನ್ನು ಮಾರಾಟ ಮಾಡಲಾಗುತ್ತಿತ್ತು. ಮಹಿಳೆ ಮೀನುಗಾರರು ಹಾಗೂ ವ್ಯಾಪಾರಸ್ಥರು ಇಲ್ಲಿಂದ ಮೀನುಗಳನ್ನು ಖರೀದಿಸಿ ಮನೆಮನೆ ಮಾರಾಟ ಮಾಡಿದರು. ಈಗಾಗಲೇ ಮಹಿಳಾ ಹಸಿಮೀನು ಮಾರಾಟಗಾರರು ಕೂಡ ಇಲ್ಲಿಂದ ಮೀನು ಖರೀದಿಸಲು ಮುಂದಾಗಿದ್ದು, ಅವರಿಗೆ ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಅವಕಾಶ ಕಲ್ಪಿಸುವಂತೆ ಮೀನುಗಾರ ಮುಖಂಡರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ ಎಂದು ಮಲ್ಪೆ ನಾಡದೋಣಿ ಮತ್ತು ಯಾಂತ್ರೀಕೃತ ದೋಣಿ ಮೀನುಗಾರರ ಪ್ರಾಥಮಿಕ ವಿವಿಧೋದ್ದೇಶ ಸಹಕಾರಿ ಸಂಘದ ಕಾರ್ಯದರ್ಶಿ ಗೋಪಾಲ ಆರ್.ಕೆ. ತಿಳಿಸಿದ್ದಾರೆ.
ಸರಕಾರ ಆದೇಶದಂತೆ ಇಂದು ಉಡುಪಿ ಹಾಗೂ ಕುಂದಾಪುರ ತಾಲೂಕು ಗಳಲ್ಲಿ ನಾಡದೋಣಿ ಮೀನುಗಾರಿಕೆ ಆರಂಭಗೊಂಡಿತು. ಮೀನುಗಾರಿಕೆ ಸಂದರ್ಭ ಒಂದು ದೋಣಿಯಲ್ಲಿ ಐದಕ್ಕಿಂತ ಹೆಚ್ಚು ಮಂದಿ ತೆರಳದೆ ಸಾಮಾಜಿಕ ಅಂತರ ಕಾಪಾಡಲು ಸೂಚಿಸಲಾಗಿದೆ. ಅದೇ ರೀತಿ ಬೆಳಗ್ಗೆ 11ಗಂಟೆಯೊಳಗೆ ಎಲ್ಲ ಪ್ರಕ್ರಿಯೆಯನ್ನು ಮುಗಿಸಲಾಗುತ್ತಿದೆ. ಹರಾಜು ಸ್ಥಳಗಳಲ್ಲಿ ರಖಂ ವ್ಯಾಪಾರಸ್ಥರಿಗೆ ಮಾತ್ರ ಮೀನುಗಳನ್ನು ಮಾರಾಟ ಮಾಡಲಾಗುತ್ತಿದೆ
-ಗಣೇಶ್ ಕೆ., ಉಪನಿರ್ದೇಶಕರು, ಮೀನುಗಾರಿಕೆ ಇಲಾಖೆ, ಉಡುಪಿ