ಸ್ನೇಹಿತನನ್ನು ಸೂಟ್‌ಕೇಸ್‌ನಲ್ಲಿ ತುಂಬಿಸಿ ಕೊಂಡೊಯ್ಯುವ ವೇಳೆ ಸಿಕ್ಕಿಬಿದ್ದ
ಮಂಗಳೂರು, ಎ.12: ಲಾಕ್‌ಡೌನ್ ಮಧ್ಯೆ ವಿದ್ಯಾರ್ಥಿಯೊಬ್ಬ ವಸತಿ ಸಮುಚ್ಚಯದ ನಿಯಮ ಮೀರಿ ಗೆಳೆಯನನ್ನು ಸೂಟ್‌ಕೇಸ್‌ನಲ್ಲಿ ತುಂಬಿಸಿ ರೂಮಿಗೆ ಕರೆದೊಯ್ದು ವಾಪಸ್ ಕೊಂಡೊಯ್ಯುವಾಗ ಸಿಕ್ಕಿಬಿದ್ದ ಘಟನೆ ರವಿವಾರ ನಡೆದಿದೆ.
ನಗರದ ಆರ್ಯಸಮಾಜ ರಸ್ತೆಯಲ್ಲಿರುವ ವಸತಿ ಸಮುಚ್ಚಯದಲ್ಲಿ ಎಸ್ಸೆಸ್ಸೆಲ್ಸಿ ಓದುತ್ತಿರುವ ವಿದ್ಯಾರ್ಥಿ ಮತ್ತು ಆತನ ಕುಟುಂಬ ವಾಸಿಸುತ್ತಿತ್ತು. ಆ ವಸತಿ ಸಮುಚ್ಚಯದಲ್ಲಿ ಇದೇ ಕುಟುಂಬಕ್ಕೆ ಇನ್ನೊಂದು ಬಾಡಿಗೆ ಮನೆಯಿದ್ದು, ಅದರಲ್ಲಿ ವಿದ್ಯಾರ್ಥಿ ವಾಸವಾಗಿದ್ದ.
ಲೋಕ್‌ಡೌನ್ ಹಿನ್ನೆಲೆಯಲ್ಲಿ ವಸತಿ ಸಮುಚ್ಚಯ ಅಸೋಸಿಯೇಶನ್ ವಾಸ್ತವ್ಯವಿರುವವರನ್ನು ಹೊರತುಪಡಿಸಿ ಇತರರಿಗೆ ಪ್ರವೇಶ ನಿರಾಕರಣೆ ಮಾಡಿತ್ತು. ವಿದ್ಯಾರ್ಥಿ ಮಾತ್ರ ‘ತನಗೆ ಬೋರ್ ಆಗುತ್ತದೆ, ತಾನು ಒಂಟಿಯಾಗಿದ್ದು ತನ್ನ ಗೆಳೆಯನನ್ನು ರೂಮಿಗೆ ಕರೆದುಕೊಂಡು ಬರುತ್ತೇನೆ’ ಎಂದು ಹೇಳುತ್ತಿದ್ದ. ಇದಕ್ಕೆ ವಸತಿ ಸಮುಚ್ಚಯ ಅಸೋಸಿಯೇಶನ್ ಅನುಮತಿ ನೀಡಿರಲಿಲ್ಲ ಎನ್ನಲಾಗಿದೆ.
ವಿದ್ಯಾರ್ಥಿ ರವಿವಾರ ಮುಂಜಾನೆ ರೂಮಿನಿಂದ ಸ್ಕೂಟರ್‌ನಲ್ಲಿ ಹೊರಗೆ ತೆರಳಿದ್ದಾನೆ. ಸ್ವಲ್ಪ ಸಮಯದ ಬಳಿಕ ಸೂಟ್‌ಕೇಸ್ ಜತೆ ಬಂದು ಅದನ್ನು ರೂಮಿಗೆ ಕೊಂಡು ಹೋಗಿದ್ದಾನೆ. ಇದನ್ನು ವಾಚ್ ಮ್ಯಾನ್ ನೋಡಿದ್ದರೂ ಕೂಡ ಮುಂಜಾವ ಆದ ಕಾರಣ ಪ್ರಶ್ನಿಸಲು ಹೋಗಿರಲಿಲ್ಲ ಎಂದು ತಿಳಿದು ಬಂದಿದೆ.
ಮತ್ತೆ ಸೂಟ್‌ಕೇಸ್ ಜತೆ ರೂಮಿನಿಂದ ಹೊರಬಂದು ಸ್ಕೂಟರ್‌ನಲ್ಲಿ ತೆರಳಲು ಸಿದ್ಧತೆ ನಡೆಸುತ್ತಿದ್ದಾಗ ಅನುಮಾನಗೊಂಡು ವಿದ್ಯಾರ್ಥಿಯನ್ನು ತಡೆದು ಪ್ರಶ್ನಿಸಿ ಸೂಟ್‌ಕೇಸ್ ತೆರೆಯುವಂತೆ ಒತ್ತಾಯಿಸಿದ್ದಾರೆ. ಸೂಟ್‌ಕೇಸ್ ತೆರೆದಾಗ ಅದರೊಳಗೆ ವಿದ್ಯಾರ್ಥಿಯ ಸ್ನೇಹಿತ ಪತ್ತೆಯಾದ ಎಂದು ತಿಳಿದುಬಂದಿದೆ.
ಈ ಬಗ್ಗೆ ಕದ್ರಿ ಪೊಲೀಸರಿಗೆ ತಿಳಿಸಲಾಯಿತು. ಅದರಂತೆ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿ ಸೂಟ್‌ಕೇಸ್ ಸಹಿತ ಇಬ್ಬರನ್ನು ಕದ್ರಿ ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿ ವಿದ್ಯಾರ್ಥಿಯಿಂದ ಮುಚ್ಚಳಿಕೆ ಬರೆಸಿ ಬಿಟ್ಟಿದ್ದಾರೆ.