ಕುಂದಾಪುರ: ಎ.13ರಿಂದ ಮನೆಗಳಿಗೆ ಅಗತ್ಯ ಸಾಮಗ್ರಿ ಪೂರೈಕೆ
ಕುಂದಾಪುರ, ಎ.12: ಲಾಕ್‌ಡೌನ್ ಹಿನ್ನೆಲೆಯಲ್ಲಿ ಜನರು ಮನೆಯಿಂದ ಹೊರಗೆ ಬರುವುದನ್ನು ಸಂಪೂರ್ಣವಾಗಿ ತಡೆಯುವ ನಿಟ್ಟಿನಲ್ಲಿ ಎ.13ರಿಂದ ಕುಂದಾಪುರ ಪೊಲೀಸ್ ಉಪವಿಭಾಗದ ಎಂಟು ಪೊಲೀಸ್ ಠಾಣೆ ವ್ಯಾಪ್ತಿ ಯಲ್ಲಿ ದಿನಸಿ ಮತ್ತು ಅಗತ್ಯ ಸಾಮಗ್ರಿಗಳನ್ನು ಮನೆ ಗಳಿಗೆ ತಲುಪಿಸುವ ವ್ಯಸ್ಥೆಯನ್ನು ಜಾರಿಗೆ ತರಲಾಗುತ್ತಿದೆ.
ಅದಕ್ಕಾಗಿ ಕುಂದಾಪುರ ತಾಲೂಕಿನ 65 ಗ್ರಾಪಂಗಳ ವ್ಯಾಪ್ತಿಯಲ್ಲಿ ಸ್ವಯಂ ಸೇವಕರು ನಿಯೋಜಿಸಲಾಗಿದೆ. ಈ ವ್ಯವಸ್ಥೆಯ ಕುರಿತು ಮೂರು ದಿನಗಳ ಕಾಲ ಜನರಿಗೆ ಮಾಹಿತಿ ನೀಡಿ ಸಂಪೂರ್ಣ ಮನವರಿಕೆ ಮಾಡಲಾಗುವುದು. ಬಳಿಕ ಈ ವ್ಯವಸ್ಥೆಯನ್ನು ಜಾರಿಗೆ ತಂದು ಜನರು ಮನೆಗಳಿಂದ ಹೊರಗಡೆ ಬಾರದಂತೆ ತಡೆಯಲಾಗುವುದು ಎಂದು ಕುಂದಾಪುರ ಸಹಾಯಕ ಪೊಲೀಸ್ ಅಧೀ್ಷಕಿ ಹರಿರಾಮ್ ಶಂಕರ್ ತಿಳಿಸಿದ್ದಾರೆ.
ಕುಂದಾಪುರ, ಬೈಂದೂರು, ಗಂಗೊಳ್ಳಿ, ಶಂಕರನಾರಾಯಣ, ಕುಂದಾಪುರ ಗ್ರಾಮಾಂತರ, ಕೊಲ್ಲೂರು, ಕೋಟ, ಅಮಾಸೆಬೈಲು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಯೋಜನೆಯನ್ನು ಪ್ರಾಯೋಗಿಕವಾಗಿ ಕೈಗೆತ್ತಿಕೊಳ್ಳಲಾಗಿದೆ. ಕುಂದಾಪುರ ಪುರಸಭಾ ವ್ಯಾಪ್ತಿಗೆ ಇದು ಅನ್ವಯ ವಾಗುವುದಿಲ್ಲ. ಪ್ರತಿ ಗ್ರಾಪಂ ವ್ಯಾಪ್ತಿಯಲ್ಲಿ ಮನೆಗಳಿಗೆ ದಿನಸಿ ಮತ್ತು ಅವಶ್ಯಕ ಸಾಮಗ್ರಿಯನ್ನು ಪೂರೈಸಲು ವಾರ್ಡ್‌ಗೆ ಇಬ್ಬರಂತೆ ಸ್ವಯಂ ಸೇವಕರನ್ನು ನೇಮಕ ಮಾಡಲಾಗಿದ್ದು ಅವರಿಗೆ ಕರೆ ಮಾಡಿದರೆ ಅವರು ದಿನಬಳಕೆಯ ವಸ್ತುಗಳನ್ನು ಮನೆಗಳಿಗೆ ತಲುಪಿಸಲಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.