×
Ad

ಮಂಗಳೂರಿನ ‘ಐಸೋಲೇಶನ್ ಕೋವಿಡ್ -19 ರೈಲ್ವೆ ಕೋಚ್’ ಸಂಸದರಿಂದ ವೀಕ್ಷಣೆ

Update: 2020-04-12 21:27 IST

ಮಂಗಳೂರು, ಎ.12: ಮಂಗಳೂರು ಸೆಂಟ್ರಲ್ ರೈಲ್ವೆ ನಿಲ್ದಾಣದಲ್ಲಿ ಐಸೊಲೇಶನ್ ಕೋವಿಡ್-19 ರೈಲ್ವೆ ಕೋಚ್ ಅನ್ನು ದ.ಕ. ಸಂಸದ ನಳಿನ್ ಕುಮಾರ್ ಕಟೀಲ್ ರವಿವಾರ ವೀಕ್ಷಿಸಿದರಲ್ಲದೆ ಐಸೊಲೇಶನ್ ಕೋಚನ್ನು ವ್ಯವಸ್ಥಿವಾಗಿ ನಿರ್ಮಿಸಿ ಕೊಟ್ಟ ರೈಲ್ವೆ ಅಧಿಕಾರಿಗಳನ್ನು ಶ್ಲಾಘಿಸಿದರು.

ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಸಂಸದ ನಳಿನ್ ಕುಮಾರ್ ಕಟೀಲ್, ಕೊರೋನ ತಡೆಗಟ್ಟುವ ನಿಟ್ಟಿನಲ್ಲಿ ವಿಶ್ವವೇ ಗುರುತಿಸುವಂತಹ ಕಾರ್ಯವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಮಾಡಿದ್ದಾರೆ. ರೈಲ್ವೆ ಇಲಾಖೆಯಿಂದಲೂ ರಾಷ್ಟ್ರದಾದ್ಯಂತ ಐದು ಸಾವಿರ ರೈಲ್ವೆ ಕೋಚುಗಳ ಐಸೊಲೇಶನ್ ವಾರ್ಡುಗಳನ್ನು ಮುಂಜಾಗ್ರತಾ ಕ್ರಮವಾಗಿ ನಿರ್ಮಿಸಲಾಗಿದೆ. ಪಾಲ್ಘಾಟ್ ವಿಭಾಗದಿಂದ ಮಂಗಳೂರಿನಲ್ಲಿ 32 ಬೋಗಿಗಳಿರುವ ರೈಲನ್ನು ಎಲ್ಲಾ ವೈದ್ಯಕೀಯ ಸವಲತ್ತುಗಳೊಂದಿಗೆ ಮಾರ್ಪಡಿಸಲಾಗಿದ್ದು, ಇದರಲ್ಲಿ 20 ಬೋಗಿಗಳು ಮಂಗಳೂರಿಗೆ ಮತ್ತು 12 ಬೋಗಿಗಳು ಪಾಲ್ಘಾಟ್‌ಗೆ ಕಾದಿರಿಸಲಾಗಿದೆ ಎಂದರು.

ಈ ಸಂದರ್ಭ ಶಾಸಕ ವೇದವ್ಯಾಸ ಕಾಮತ್, ಪಾಲ್ಘಾಟ್ ವಿಭಾಗದ ಸಿಡಿಒ ರಾಕೇಶ್ ಕುಮಾರ್ ಮೀನಾ, ವಲಯಾಧಿಕಾರಿ ಶ್ರೀಧರನ್, ಎಸ್‌ಎಎಂಆರ್ ಪ್ರವೀಣ್, ಡೆಪ್ಯುಟಿ ಸ್ಟೇಷನ್ ಮಾಸ್ಟರ್ ಕಿಶನ್ ಕುಮಾರ್, ಡಿಆರ್‌ಎಂ ಪಿಎಸ್ ಶಮಿ ಉಪಸ್ಥಿತಿತರಿದ್ದರು.

ಪ್ರತಿಯೊಂದು ಬೋಗಿಗಲ್ಲಿ 16 ಐಸೊಲೇಶನ್ ಬೆಡ್‌ಗಳನ್ನು ನಿರ್ಮಿಸಲಾಗಿದೆ. ಅಲ್ಲದೆ ಪ್ರತಿ ಬೋಗಿಗಳಲ್ಲಿ ಆಕ್ಸಿಜನ್ ಸಿಲಿಂಡರ್, ಇಲೆಕ್ಟ್ರಿಕಲ್ ಚಾರ್ಜಿಂಗ್ ಪಾಯಿಂಟ್‌ಗಳನ್ನು ಮತ್ತು ಪಾರಾ ಮೆಡಿಕಲ್ ಸೌಲಭ್ಯಗಳನ್ನು ಅಳವಡಿಸಲಾಗಿದೆ. ಬಾತ್‌ರೂಮ್, ಶೌಚಾಲಯ, ಬಕೆಟ್‌ಗಳು,  ಔಷಧ ಮೊದಲಾದ ಅಗತ್ಯ ವೈದ್ಯಕೀಯ ಸಲಕರಣೆಗಳನ್ನು ಅಳವಡಿಸುವ ಪ್ರತ್ಯೇಕ ವ್ಯವಸ್ಥೆಗಳು, ಸೋಡಿಯಮ್ ಹೈಪೋಕ್ಲೋರೈಡ್, ಸೋಂಕು ನಿವಾರಣಾ ದ್ರಾವಣವನ್ನು ಸಿಂಪಡಿಸುವ ವ್ಯವಸ್ಥೆ ಸಹಿತ ವೈದ್ಯರು ಮತ್ತು ದಾದಿಯರಿಗೆ ಪ್ರತ್ಯೇಕವಾಗಿ ಒಂದು ಬೋಗಿಯನ್ನು ಅಳವಡಿಸಲಾಗಿದೆ.

ದೂರವಾಣಿ ಸಂಪರ್ಕ, ಲಾಪ್‌ಟಾಪ್‌ಗಳನ್ನು ಅಳವಡಿಸುವ ವ್ಯವಸ್ಥೆಯಿದೆ. 12 ಐಸೊಲೇಶನ್ ಬೋಗಿಗಳಿರುವ ರೈಲನ್ನು ಕೇರಳದ ಷೊರ್ನುರು ರೈಲ್ವೆ ನಿಲ್ದಾಣದಲ್ಲಿ ತುರ್ತು ಸೇವೆಗಾಗಿ ನಿಲ್ಲಿಸಲಾಗಿದ್ದು, ಮಂಗಳೂರಿನ 20 ಬೋಗಿಗಳ 320 ಐಸೊಲೇಶಮ್ ಬೆಡ್‌ಗಳಿರುವ ಕೋವಿಡ್-19 ಐಸೊಲೇಶನ್ ಕೋಚನ್ನು ಪ್ರಸ್ತುತ ಮಂಗಳೂರಿನ ಸೆಂಟ್ರಲ್ ರೈಲ್ವೆ ನಿಲ್ದಾಣದಲ್ಲಿ ನಿಲ್ಲಿಸಲಾಗಿದೆ. ರೈಲು ಸಂಚಾರ ಪ್ರಾರಂಭದ ದಿನಗಳಲ್ಲಿ ಕಂಕನಾಡಿ ರೈಲ್ವೆ ಸ್ಟೇಷನ್ ಪಕ್ಕದಲ್ಲಿ ಪ್ರತ್ಯೇಕವಾಗಿ ಕಾಯ್ದಿರಿಸಿದ ಸ್ಥಳದಲ್ಲಿ ನಿಲ್ಲಿಸಲಾಗುವುದು. ಅಗತ್ಯ ಬಿದ್ದಲ್ಲಿ ತುರ್ತು ಸೇವೆಗೆ ಬಳಸಿಕೊಳ್ಳಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News