×
Ad

ಮಂಗಳೂರು: ಕಡಲಿಗೆ ಇಳಿದ ಮೀನುಗಾರರು; ಮೀನುಗಾರಿಕೆ ಆರಂಭ

Update: 2020-04-12 22:37 IST

ಮಂಗಳೂರು, ಎ.12: ಸಾಂಪ್ರದಾಯಿಕ ಮೀನುಗಾರಿಕೆಗೆ ಸರಕಾರ ಅನುಮತಿ ನೀಡಿದ್ದರಿಂದ ರವಿವಾರ ಸುಮಾರು 500ರಷ್ಟು ನಾಡ ದೋಣಿಗಳಲ್ಲಿ ಮೀನುಗಾರರು ಮೀನುಗಾರಿಕೆ ಆರಂಭಿಸಿದ್ದಾರೆ.

ಲೈಟ್‌ಫಿಶಿಂಗ್ ಮತ್ತು ಲಾಕ್‌ಡೌನ್‌ನಿಂದ ತತ್ತರಿಸಿದ್ದ ನಾಡದೋಣಿ ಮೀನುಗಾರರಿಗೆ ಸರಕಾರ ಅನಿರೀಕ್ಷಿತವಾಗಿ ನೀಡಿದ ಅನುಮತಿಯು ವರದಾನವಾಗಿದೆ. ಜಿಲ್ಲೆಯಲ್ಲಿ ಸುಮಾರು 1,300ದಷ್ಟು ನಾಡದೋಣಿಗಳಿದ್ದು, ರವಿವಾರ ಬೆಳಗ್ಗೆಯಿಂದಲೇ ನಾಡದೋಣಿಗಳು ಮೀನುಗಾರಿಕೆ ಅರಂಭಿಸಿವೆ. ಬಂಗುಡೆ, ಬೂತಾಯಿ ಮತ್ತಿತರ ಕೆಲವು ಜಾತಿಯ ಮೀನುಗಳು ಲಭಿಸಿವೆ ಎಂದು ತಿಳಿದು ಬಂದಿದೆ.

ನಗರದ ಸ್ಟೇಟ್‌ಬ್ಯಾಂಕ್ ಸಮೀಪದ ಮೀನು ಮಾರುಕಟ್ಟೆ ಸಹಿತ ಹೊರವಲಯದ ಹಲವು ಕಡೆ ಚಿಲ್ಲರೆ ಮೀನು ವ್ಯಾಪಾರವು ಭರದಿಂದ ಸಾಗಿತ್ತು. ಕೆಲವು ಕಡೆ ಮೀನು ಖರೀದಿಗೆ ಮುಗಿಬಿದ್ದರೆ ಇನ್ನು ಕೆಲವು ಕಡೆ ಸಾಮಾಜಿಕ ಅಂತರ ಕಾಣಿಸಲಿಲ್ಲ. ಮೀನಿನ ದರ ವಿಪರೀತ ಏರಿಕೆ ಯಾಗಿದ್ದರೂ ಕೂಡ ಮೀನುಪ್ರಿಯರು ದರ ಪರಿಗಣಿಸದೆ ಮೀನು ಖರೀದಿಸುತ್ತಿದ್ದುದು ಕಂಡು ಬಂತು.

ದ.ಕ. 1300ರಷ್ಟು ನಾಡ ದೋಣಿಗಳಿವೆ. ಈ ಪೈಕಿ ಶೇ.50ರಷ್ಟು ಮಳೆಗಾಲ ಹಾಗು ಉಳಿದ ಶೇ.50ರಷ್ಟು ದೋಣಿಗಳು ಬೇಸಿಗೆಯಲ್ಲಿ ಮೀನುಗಾರಿಕೆ ನಡೆಸುತ್ತವೆ. ಲಾಕ್‌ಡೌನ್ ನಡುವೆಯೂ ಸರಕಾರ ಅವಕಾಶ ಕಲ್ಪಿಸಿರುವುದು ಸ್ವಾಗತಾರ್ಹ.

- ಸುಭಾಶ್ಚಂದ್ರ ಕಾಂಚನ್, ಕಾರ್ಯಾಧ್ಯಕ್ಷ
ನಾಡದೋಣಿ ಮೀನುಗಾರರ ಸಂಘ ದ.ಕ.ಜಿಲ್ಲೆ

ಸಾಂಪ್ರದಾಯಿಕ ಮೀನುಗಾರಿಕೆಗೆ ಸರಕಾರ ಅವಕಾಶ ಕಲ್ಪಿಸಿರುವುದು ಸ್ವಾಗತಾರ್ಹ. ಆದರೆ, ಬಂದರು ದಕ್ಕೆಯಲ್ಲಿರುವ ಸಾವಿರಾರು ಮೀನು ಕಾರ್ಮಿಕರು ತಮ್ಮೂರಿಗೆ ತೆರಳಿದ್ದಾರೆ. ಅವರು ಮರಳಿ ಬರಲು ಸಾರಿಗೆ ವ್ಯವಸ್ಥೆ ಇಲ್ಲ. ಇನ್ನು ಮಧ್ಯಾಹ್ನದವರೆಗೆ ಮಾತ್ರ ವ್ಯವಹಾರ ನಡೆಸಲು ಅವಕಾಶವಿರುವುದರಿಂದ ಮೀನುಗಳು ಸಕಾಲಕ್ಕೆ ಮಾರಾಟವಾಗದೆ ಉಳಿದರೆ ಅದನ್ನು ಸೂಕ್ತ ರೀತಿಯಲ್ಲಿ ಸಂಗ್ರಹಿಸುವ ವ್ಯವಸ್ಥೆಯೂ ಇಲ್ಲ. ಮರುದಿನಕ್ಕೆ ಅದು ಕೊಳೆತು ಹೋಗಲಿರುವುದರಿಂದ ನಷ್ಟದ ವ್ಯಾಪಾರ ಮಾಡಲು ಯಾರೂ ತಯಾರಿಲ್ಲ. ಸರಕಾರ ಮೊದಲು ಮೀನು ಕಾರ್ಮಿಕರು ಬಂದರು ದಕ್ಕೆ ಪ್ರವೇಶಿಸುವಂತೆ ಮಾಡಬೇಕು ಮತ್ತು ಗ್ರಾಮೀಣ ಪ್ರದೇಶದ ಮೀನುಗಾರರಿಗೆ ದಕ್ಕೆಗೆ ಬಂದು ಮೀನು ಕೊಂಡೊಯ್ಯಲು ಅವಕಾಶ ನೀಡಬೇಕು. ಈ ಎಲ್ಲ ವ್ಯವಸ್ಥೆ ಮಾಡದಿದ್ದರೆ ಮೀನುಗಾರಿಕೆಗೆ ಅನುಮತಿ ನೀಡಿಯೂ ಪ್ರಯೋಜನವಿಲ್ಲವಾಗಿದೆ.

- ಅಲಿ ಹಸನ್, ಅಧ್ಯಕ್ಷರು
ದ.ಕ.ಜಿಲ್ಲಾ ಗಿಲ್‌ನೆಟ್ ಮೀನುಗಾರ ಸಂಘ

ನಾಡದೋಣಿಗಳಿಗೆ ಮೀನುಗಳನ್ನು ಬಂದರು ದಕ್ಕೆಯಲ್ಲಿ ಇಳಿಸಲು ಅವಕಾಶವಿರಲಿಲ್ಲ. ಉಳ್ಳಾಲ, ಗುಡ್ಡೆಕೊಪ್ಲ, ಮುಕ್ಕ, ಹೊಸೆಬೆಟ್ಟು, ಮೀನಕಳಿಯ, ಸಸಿಹಿತ್ಲು ಮೊದಲಾದ ಸಮುದ್ರ ತೀರಗಳ 15 ಕಡೆಗಳಲ್ಲಿ ಮಾತ್ರ ಅವಕಾಶ ಕಲ್ಪಿಸಲಾಗಿತ್ತು. ಕೆಲವು ಕಡೆ ಸಾಮಾಜಿಕ ಅಂತರ ಕಾಯ್ದುಕೊಂಡು ವ್ಯವಸ್ಥಿತವಾಗಿ ಮೀನು ಖರೀದಿ ಮಾಡಿದ್ದರೆ, ಇನ್ನು ಕೆಲವು ಕಡೆ ಗೊಂದಲ ಉಂಟಾಗಿದೆ.
- ದಯಾನಂದ ಪುತ್ರನ್, ಮಾಲಕರು, ನಾಡದೋಣಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News