ಲಾಕ್‌ಡೌನ್ ಎಫೆಕ್ಟ್ : 20 ವರ್ಷಗಳ ಬಳಿಕ ಮನೆ ಸೇರಿದ ಯುವಕ

Update: 2020-04-12 17:48 GMT
ಸಾಂದರ್ಭಿಕ ಚಿತ್ರ

 ಸುಳ್ಯ, ಎ.12: ಲಾಕ್‌ಡೌನ್ ಹಿನ್ನೆಲೆಯಲ್ಲಿ ಮಂಗಳೂರಿನಿಂದ ನಡೆದುಕೊಂಡೇ ಗೂನಡ್ಕ ತಲುಪಿದ ಅನಾರೋಗ್ಯಪೀಡಿತ ಮಡಿಕೇರಿಯ ವ್ಯಕ್ತಿಯೋರ್ವ ಎಸ್ಸೆಸ್ಸೆಫ್ ಮತ್ತು ಎಸ್‌ವೈಎಸ್ ಸುಳ್ಯ ಡಿವಿಶನ್‌ನ ತುರ್ತು ಸೇವಾ ಸದಸ್ಯರ ನೆರವಿನಿಂದ ಮನೆ ತಲುಪಿದ್ದಾರೆ. ಅಚ್ಚರಿಯೇನೆಂದರೆ 20 ವರ್ಷಗಳ ಹಿಂದೆ ಮನೆ ತೊರೆದಿದ್ದ ಈ ವ್ಯಕ್ತಿ ಮತ್ತೆ ಮನೆಗೆ ಮರಳಿದ್ದಾರೆ.

ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಚೈನ್ ಗೇಟ್‌ನಲ್ಲಿ ವಾಸವಿರುವ ತಮ್ಮಯ್ಯ ಹಾಗೂ ಶಿವಮ್ಮ ದಂಪತಿಯ ಒಬ್ಬನೇ ಮಗ ಕೇಶವ ಈ ರೀತಿ ಮನೆ ಸೇರಿದ ಯುವಕ. ಅನಾರೋಗ್ಯದ ಹಿನ್ನೆಲೆಯಲ್ಲಿ ಮಂಗಳೂರಿನ ಆಸ್ಪತ್ರೆಯೊಂದಕ್ಕೆ ದಾಖಲಾಗಿದ್ದ ಕೇಶವ ಅಲ್ಲಿಂದ ಡಿಸ್ಚಾರ್ಜ್ ಆಗಿ ನಡೆದುಕೊಂಡೇ ಗೂನಡ್ಕ ತಲುಪಿದ್ದಾರೆ.

ಗೂನಡ್ಕ ಬಸ್ ನಿಲ್ದಾಣದಲ್ಲಿ ಅಸಹಾಯಕನಾಗಿ ಕುಳಿತಿದ್ದ ಕೇಶವರನ್ನು ಗಮನಿಸಿದ ಕರ್ನಾಟಕ ಮುಸ್ಲಿಂ ಜಮಾಅತ್ ಸುಳ್ಯ ತಾಲೂಕು ಅಧ್ಯಕ್ಷ ಮುಹಮ್ಮದ್ ಕುಂಞಿ ಗೂನಡ್ಕ ಹಾಗೂ ಗೂನಡ್ಕ ಗ್ರಾಪಂ ಸದಸ್ಯ ಅಬೂಸಾಲಿ ವಿಚಾರಿಸಿದಾಗ ವಿಷಯ ಬೆಳಕಿಗೆ ಬಂದಿದೆ. ಅವರು ಎಸ್ಸೆಸ್ಸೆಫ್ ಹಾಗೂ ಎಸ್‌ವೈಎಸ್ ತುರ್ತುಸೇವಾ ತಂಡದ ಸದಸ್ಯರಾದ ಸಿದ್ದೀಕ್ ಹಾಗೂ ಹಾರಿಸ್ ಗೂನಡ್ಕರಿಗೆ ಮಾಹಿತಿ ನೀಡಿದರು. ಕೂಡಲೇ ಸ್ಥಳಕ್ಕಾಗಮಿಸಿದ ಅವರು ಕೇಶವ ನೀಡಿದ ಅಪೂರ್ಣ ಮಾಹಿತಿಯನ್ನು ಆಧರಿಸಿ ಅವರ ಮನೆ ಹುಡುಕಲು ಮುಂದಾದರು. ಲಾಕ್‌ಡೌನ್ ಮಧ್ಯೆಯೇ ಪೊಲೀಸರ ಅನುಮತಿ ಪಡೆದು ಕೇಶವರನ್ನು ಮನೆ ತಲುಪಿಸುವಲ್ಲಿ ಯಶಸ್ವಿಯಾದರು.

ಇಪ್ಪತ್ತು ವರ್ಷಗಳ ಹಿಂದೆ ಮನೆಬಿಟ್ಟಿದ್ದ ಮಗ ಅಚಾನಕ್ ಮನೆಗೆ ಆಗಮಿಸಿರುವುದನ್ನು ಕಂಡ ಸಂಭ್ರಮಿಸಿದ ಕೇಶವರ ಹೆತ್ತವರು ತುರ್ತು ಸೇವಾ ತಂಡದ ಸದಸ್ಯರಿಗೆ ಮನದಾಳದ ಕೃತಜ್ಞತೆ ಸಲ್ಲಿಸಿದರು.

ಈ ಕಾರ್ಯಾಚರಣೆಗೆ ಸುಳ್ಯ ನಪಂ ಸದಸ್ಯರಾದ ಉಮರ್ ಕೆ.ಎಸ್. ಹಾಗೂ ಸವಾದ್ ಗೂನಡ್ಕ ಸಹಕರಿಸಿದ್ದಾರೆ ಎಂದು ತುರ್ತು ಸೇವಾ ತಂಡದ ಸದಸ್ಯರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News