ರಾಯಭಾರ ಕಚೇರಿಯಲ್ಲಿ ಆಶ್ರಯ ಪಡೆದಿದ್ದ ಅವಧಿಯಲ್ಲಿ ಇಬ್ಬರು ಮಕ್ಕಳ ತಂದೆಯಾದ ಅಸಾಂಜ್

Update: 2020-04-12 18:02 GMT

ಲಂಡನ್, ಎ. 12: ವಿಕಿಲೀಕ್ಸ್ ಸ್ಥಾಪಕ ಜೂಲಿಯನ್ ಅಸಾಂಜ್ ಸುಮಾರು ಏಳು ವರ್ಷಗಳ ಕಾಲ ಲಂಡನ್‌ನಲ್ಲಿರುವ ಇಕ್ವೆಡಾರ್ ರಾಯಭಾರ ಕಚೇರಿಯಲ್ಲಿ ಆಶ್ರಯ ಪಡೆದುಕೊಂಡಿದ್ದ ವೇಳೆ ಇಬ್ಬರು ಮಕ್ಕಳ ತಂದೆಯಾಗಿದ್ದಾರೆ ಎಂದು ‘ಮೇಲ್’ ಪತ್ರಿಕೆ ರವಿವಾರ ವರದಿ ಮಾಡಿದೆ.

48 ವರ್ಷದ ಅಸಾಂಜ್ ತನ್ನ ವಕೀಲರ ಪೈಕಿ ಒಬ್ಬರಾದ ಸ್ಟೆಲ್ಲಾ ಮೊರಿಸ್ ಜೊತೆ ಪ್ರೇಮ ಸಂಬಂಧ ಹೊಂದಿದ್ದು, ಎರಡು ಹಾಗೂ ಒಂದು ವರ್ಷದ ಇಬ್ಬರು ಗಂಡು ಮಕ್ಕಳಿಗೆ ತಂದೆಯಾಗಿದ್ದಾರೆ.

ಪತ್ರಿಕೆಯು ವರದಿಯ ಜೊತೆಗೆ, ಇಬ್ಬರು ಮಕ್ಕಳ ಜೊತೆಗೆ ಅಸಾಂಜ್ ಇರುವ ಚಿತ್ರಗಳನ್ನು ಮತ್ತು ದಕ್ಷಿಣ ಆಫ್ರಿಕ ಸಂಜಾತೆ ಸ್ಟೆಲ್ಲಾ ಮೊರಿಸ್‌ರ ಸಂದರ್ಶನವನ್ನೂ ಪ್ರಕಟಿಸಿದೆ. ‘‘ನಮ್ಮಲ್ಲಿ ಪ್ರೀತಿ ಹುಟ್ಟಿಕೊಂಡಿತು’’ ಎಂದು ಹೇಳಿರುವ ಸ್ಟೆಲ್ಲಾ, ನಾವು ಮದುವೆಯಾಗಲು ನಿರ್ಧರಿಸಿದ್ದೇವೆ ಎಂದಿದ್ದಾರೆ.

ಅಸಾಂಜ್ ಮತ್ತು ಸ್ಟೆಲ್ಲಾ 2017ರಿಂದ ಪ್ರೇಮ ಸಂಬಂಧ ಹೊಂದಿದ್ದಾರೆ ಎಂದು ಪತ್ರಿಕೆ ಹೇಳಿದೆ. ನ್ಯಾಯಾಲಯದ ದಾಖಲೆಗಳಿಂದ ಈ ವಿಷಯ ಕಳೆದ ವಾರ ತಿಳಿದುಬಂದಿದೆ ಎಂದು ಅದು ತಿಳಿಸಿದೆ.

ಬೇಹುಗಾರಿಕೆ ಆರೋಪಕ್ಕೆ ಸಂಬಂಧಿಸಿದ ಮೊಕದ್ದಮೆ ಎದುರಿಸಲು ಅಸಾಂಜ್‌ರನ್ನು ಅಮೆರಿಕಕ್ಕೆ ಗಡಿಪಾರು ಮಾಡಬೇಕು ಎಂದು ಕೋರಿ ಅಮೆರಿಕ ಸಲ್ಲಿಸಿರುವ ಅರ್ಜಿಯ ವಿಚಾರಣೆ ಪ್ರಸಕ್ತ ಲಂಡನ್‌ನ ನ್ಯಾಯಾಲಯವೊಂದರಲ್ಲಿ ನಡೆಯುತ್ತಿದೆ. ಹಾಗಾಗಿ, ಅಸಾಂಜ್‌ರನ್ನು ಲಂಡನ್‌ನ ಅತಿ ಭದ್ರತೆಯ ಬೆಲ್ಮಾರ್ಶ್ ಬಂದೀಖಾನೆಯಲ್ಲಿ ಇಡಲಾಗಿದೆ.

ಅಸಾಂಜ್ 2012ರಿಂದ 2019ರವರೆಗೆ ಲಂಡನ್‌ನಲ್ಲಿರುವ ಇಕ್ವೆಡಾರ್ ರಾಯಭಾರ ಕಚೇರಿಯಲ್ಲಿ ಆಶ್ರಯ ಪಡೆದಿದ್ದಾರೆ. ಕಳೆದ ವರ್ಷದ ಇಕ್ವೆಡಾರ್‌ನ ಹೊಸ ಸರಕಾರ ಅಸಾಂಜ್‌ಗೆ ಆಶ್ರಯ ನಿರಾಕರಿಸಿದ ಬಳಿಕ ಅವರನ್ನು ಬ್ರಿಟನ್ ಪೊಲೀಸರು ಬಂಧಿಸಿದ್ದಾರೆ.

ಕೊರೋನವೈರಸ್‌ನಿಂದ ಅಸಾಂಜ್ ಜೀವಕ್ಕೆ ಅಪಾಯ: ಸ್ಟೆಲ್ಲಾ

ಅಸಾಂಜ್ ಬೆಲ್ಮಾರ್ಶ್ ಜೈಲಿನಲ್ಲೇ ಇದ್ದರೆ ನೋವೆಲ್-ಕೊರೋನವೈರಸ್‌ನಿಂದ ಅವರು ಗಂಭೀರ ಪಾಣಾಪಾಯವನ್ನು ಎದುರಿಸಬಹುದು ಎನ್ನುವ ಕಾರಣಕ್ಕಾಗಿ ನಮ್ಮ ಸಂಬಂಧವನ್ನು ಹಾಗೂ ನಮಗೆ ಮಕ್ಕಳು ಇರುವುದನ್ನು ನಾನು ಬಹಿರಂಗ ಪಡಿಸುತ್ತಿದ್ದೇನೆ ಎಂದು ಸ್ಟೆಲ್ಲಾ ಮೊರಿಸನ್ ಹೇಳಿದ್ದಾರೆ ಎಂದು ‘ಮೇಲ್’ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News