ಶೇಖ್ ಮುಜೀಬುರ್ ರಹ್ಮಾನ್ ಹತ್ಯೆ: ಬಾಂಗ್ಲಾದ ಮಾಜಿ ಸೇನಾಧಿಕಾರಿಗೆ ಗಲ್ಲು ಜಾರಿ

Update: 2020-04-12 18:03 GMT

ಢಾಕಾ, ಎ. 12: ಸ್ವತಂತ್ರ ಬಾಂಗ್ಲಾದೇಶ ಸ್ಥಾಪನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ನಾಯಕನ ಹತ್ಯೆಗೆ ಸಂಬಂಧಿಸಿ, 25 ವರ್ಷಗಳಿಂದ ತಲೆತಪ್ಪಿಸಿಕೊಂಡಿದ್ದ ಮಾಜಿ ಸೇನಾಧಿಕಾರಿಯೊಬ್ಬನನ್ನು ರವಿವಾರ ಗಲ್ಲಿಗೇರಿಸಲಾಯಿತು ಎಂದು ಸಚಿವರೊಬ್ಬರು ತಿಳಿಸಿದರು.

25 ವರ್ಷಗಳ ಹಿಂದೆ ತಪ್ಪಿಸಿಕೊಂಡಿದ್ದ ಮಾಜಿ ಕ್ಯಾಪ್ಟನ್ ಅಬ್ದುಲ್ ಮಜೀದ್‌ನನ್ನು ಕೆಲವು ದಿನಗಳ ಹಿಂದೆ ಬಂಧಿಸಲಾಗಿತ್ತು.

1971ರಲ್ಲಿ ಬಾಂಗ್ಲಾದೇಶದ ಸ್ವಾತಂತ್ರದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಶೇಖ್ ಮುಜೀಬುರ್ ರಹಮಾನ್ ಮತ್ತು ಅವರ ಹೆಚ್ಚಿನ ಕುಟುಂಬ ಸದಸ್ಯರನ್ನು 1975 ಆಗಸ್ಟ್ 15ರಂದು ಸೇನಾ ಕ್ಷಿಪ್ರ ಕ್ರಾಂತಿಯೊಂದರಲ್ಲಿ ಕೊಲ್ಲಲಾಗಿತ್ತು. ಶೇಖ್ ಮುಜೀಬುರ್ ಬಾಂಗ್ಲಾದೇಶದ ಹಾಲಿ ಪ್ರಧಾನಿ ಶೇಖ್ ಹಸೀನಾರ ತಂದೆಯಾಗಿದ್ದಾರೆ.

1998ರಲ್ಲಿ ಅಬ್ದುಲ್ ಮಜೀದ್‌ಗೆ ಆತನ ಅನುಪಸ್ಥಿತಿಯಲ್ಲಿ ಮರಣ ದಂಡನೆ ವಿಧಿಸಲಾಗಿತ್ತು. ಇದೇ ಸಂದರ್ಭದಲ್ಲಿ ಇತರ 12 ಸೇನಾಧಿಕಾರಿಗಳಿಗೂ ಮರಣ ದಂಡನೆ ಘೋಷಿಸಲಾಗಿತ್ತು.

ಬಾಂಗ್ಲಾದೇಶದ ಸುಪ್ರೀಂ ಕೋರ್ಟ್ 2009ರಲ್ಲಿ ಈ ತೀರ್ಪನ್ನು ಎತ್ತಿಹಿಡಿಯಿತು. ಮಜೀದ್ 1996ರಲ್ಲಿ ಭಾರತಕ್ಕೆ ಪಲಾಯನ ಮಾಡಿದ್ದನೆಂದು ಭಾವಿಸಲಾಗಿದೆ. ಆತ ಕಳೆದ ತಿಂಗಳು ಬಾಂಗ್ಲಾದೇಶಕ್ಕೆ ಮರಳಿದ್ದನು. ಮಂಗಳವಾರ ಮುಂಜಾನೆ ಭಯೋತ್ಪಾದನೆ ನಿಗ್ರಹ ಪೊಲೀಸ್ ಅಧಿಕಾರಿಗಳು ಢಾಕಾದಲ್ಲಿ ರಿಕ್ಷಾವೊಂದರಲ್ಲಿ ಹೋಗುತ್ತಿದ್ದ ಮಜೀದ್‌ನನ್ನು ಬಂಧಿಸಿದ್ದರು. ಈಗ ಐದೇ ದಿನದಲ್ಲಿ ಆತನನ್ನು ಗಲ್ಲಿಗೇರಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News