ಉಡುಪಿ: ರಸ್ತೆಯಲ್ಲಿ 2000, 500 ರೂ.ನ ನಕಲಿ ನೋಟುಗಳನ್ನು ಎಸೆದ ಅಪರಿಚಿತ
Update: 2020-04-13 12:57 IST
ಉಡುಪಿ, ಎ.13: ನಗರದ ವಾದಿರಾಜ ರಸ್ತೆಯಲ್ಲಿ ಇಂದು ಬೆಳಗ್ಗೆ ಅಪರಿಚಿತ ವ್ಯಕ್ತಿಯೊಬ್ಬ ನಕಲಿ ನೋಟುಗಳನ್ನು ರಸ್ತೆಯಲ್ಲಿ ಎಸೆದು ಹೋಗಿರುವ ಬಗ್ಗೆ ವರದಿಯಾಗಿದೆ.
ಈ ಬಗ್ಗೆ ಸ್ಥಳೀಯರು ಉಡುಪಿ ನಗರ ಪೊಲೀಸರಿಗೆ ಮಾಹಿತಿ ನೀಡಿದ್ದು, ತನಿಖೆ ನಡೆಯುತ್ತಿದೆ
ರಸ್ತೆಯಲ್ಲಿ ನಡೆದುಕೊಂಡು ಹೋದ ಅಪರಿಚಿತ ತನ್ನಲ್ಲಿದ್ದ 2000, 500 ರೂ. ಮುಖಬೆಲೆಯ ಸುಮಾರು ಮೂವತ್ತು ನಕಲಿ ನೋಟುಗಳನ್ನು ಎಸೆದು ಹೋಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ
ಇದನ್ನು ಗಮನಿಸಿದ ಕೆಲವರು ಆತನನ್ನು ಹಿಂಬಾಲಿಸಿದ್ದಾರೆ. ಆದರೆ ಆತ ಓಣಿಯೊಂದರಲ್ಲಿ ಓಡಿ ಪರಾರಿಯಾಗುವಲ್ಲಿ ಯಶಸ್ವಿಯಾಗಿದ್ದಾನೆ.
ಕೆಲವರು ಈ ನೋಟುಗಳನ್ನು ಹೆಕ್ಕಿ ಪೊಲೀಸರಿಗೆ ನೀಡಿದ್ದಾರೆ. ಪೊಲೀಸರು ಆರೋಪಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ. ಆತನ ಉದ್ದೇಶ ಏನು ಎಂಬುದು ತಿಳಿದು ಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.