×
Ad

ಕೊರೋನ ಸೋಂಕಿನಿಂದ ಸಂಪೂರ್ಣ ಗುಣಮುಖ: ಅಜ್ಜಾವರದ ಯುವಕ ಆಸ್ಪತ್ರೆಯಿಂದ ಬಿಡುಗಡೆ

Update: 2020-04-13 19:42 IST

ಮಂಗಳೂರು, ಎ.13: ಕೊರೋನ ಸೋಂಕಿಗೊಳಗಾಗಿ ನಗರದ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸುಳ್ಯ ತಾಲೂಕಿನ ಅಜ್ಜಾವರ ಗ್ರಾಮದ 34 ವರ್ಷ ಪ್ರಾಯದ ಯುವಕ ಸಂಪೂರ್ಣ ಗುಣಮುಖರಾಗಿದ್ದು, ಸೋಮವಾರ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ.

ಇದರೊಂದಿಗೆ 12 ಮಂದಿ ಸೋಂಕಿತರ ಪೈಕಿ 8 ಮಂದಿಯನ್ನು ಬಿಡುಗಡೆಗೊಳಿಸಿದಂತಾಗಿದೆ. ಇನ್ನೂ 4 ಮಂದಿ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರೆಲ್ಲರೂ ಚೇತರಿಸುತ್ತಿದ್ದಾರೆ.

ದುಬೈಯಲ್ಲಿದ್ದ ಅಜ್ಜಾವರ ಗ್ರಾಮದ ಯುವಕ ಮಾ.18ರಂದು ಏರ್ ಇಂಡಿಯಾ ಎಕ್ಸ್‌ಪ್ರೆಸ್‌ನಲ್ಲಿ ಮಂಗಳೂರು ವಿಮಾನ ನಿಲ್ದಾಣದ ಮೂಲಕ ಆಗಮಿಸಿ ಸ್ನೇಹಿತನ ಕಾರಿನಲ್ಲಿ ತನ್ನ ಮನೆಗೆ ತೆರಳಿದ್ದರು. ತಪಾಸಣೆಯ ವೇಳೆ ಯಾವುದೇ ಲಕ್ಷಣಗಳು ಕಂಡು ಬಂದಿರಲಿಲ್ಲ. ಆದರೆ ಮಾ.28ರಂದು ಇವರನ್ನು ಸುಳ್ಯ ತಾಲೂಕು ಆಸ್ಪತ್ರೆಗೆ ದಾಖಲಿಸಿದಾಗ ಕೊರೋನ ರೋಗದ ಲಕ್ಷಣಗಳು ಕಂಡುಬಂದಿದ್ದು, ನಂತರ ಅವರನ್ನು ವೆನ್ಲಾಕ್ ಆಸ್ಪತ್ರೆ ಸೇರಿಸಲಾಗಿತ್ತು.

ಮಾ.30ರಂದು ಅವರ ಗಂಟಲಿನ ದ್ರವದ ಮಾದರಿಯನ್ನು ಪರೀಕ್ಷೆಗಾಗಿ ಕಳುಹಿಸಲಾಗಿತ್ತು. ಮಾ.31ರಂದು ಬಂದ ವರದಿಯಲ್ಲಿ ಇವರಿಗೆ ಕೊರೋನ ಸೋಂಕು ಇರುವುದು ದೃಢವಾಗಿತ್ತು. ಆ ಬಳಿಕ ವೆನ್ಲಾಕ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರ ಗಂಟಲಿನ ದ್ರವವನ್ನು ಎ.11 ಮತ್ತು 12ರಂದು ಪರೀಕ್ಷೆಗಾಗಿ ಕಳುಹಿಸಲಾಗಿತ್ತು, ವರದಿಯಲ್ಲಿ ನೆಗೆಟಿವ್ ಬಂದಿದೆ. ಅದರಂತೆ ಸೋಮವಾರ ಆಸ್ಪತೆಯಿಂದ ಬಿಡುಗಡೆಗೊಳಿಸಲಾಗಿದೆ.

ಕೊರೋನ ಸೋಂಕಿಗೊಳಗಾಗಿ ನಗರದ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪೆಯುತ್ತಿದ್ದ ಕಾಸರಗೋಡು ಮೂಲದ ಮೂವರು ಮತ್ತು ಭಟ್ಕಳದ ಯುವಕ ಸಹಿತ ನಾಲ್ಕು ಮಂದಿಯನ್ನು ಎ.6ರಂದು ಬಿಡುಗಡೆಗೊಳಿಸಲಾಗಿದೆ. ಎ.10ರಂದು ಬೆಳ್ತಂಗಡಿ ತಾಲೂಕಿನ ಕರಾಯ ಗ್ರಾಮದ 21ರ ಹರೆಯದ ಯುವಕನನ್ನು ಮತ್ತು ಎ.11ರಂದು ಖಾಸಗಿ ಆಸ್ಪತ್ರೆಯಲ್ಲಿದ್ದ 10 ತಿಂಗಳ ಮಗುವನ್ನು ಬಿಡುಗಡೆಗೊಳಿಸಲಾಗಿದೆ. ಎ.12ರಂದು 70ರ ಹರೆಯದ ವೃದ್ಧೆಯನ್ನು ಬಿಡುಗಡೆಗೊಳಿಸಲಾಗಿದೆ. ಸೋಮವಾರ ಅಜ್ಜಾವರದ ಯುವಕನನ್ನು ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗಿದೆ. ಇದರೊಂದಿಗೆ 8 ಮಂದಿಯನ್ನು ಬಿಡುಗಡೆಗೊಳಿಸಿದಂತಾಗಿದೆ.

ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡವರ ಕೈಗೆ ಸೀಲ್ ಹಾಕಲಾಗುತ್ತದೆ. ಕಡ್ಡಾಯವಾಗಿ 28 ದಿನಗಳ ಕಾಲ ಮನೆಯಲ್ಲಿ ಕ್ವಾರೆಂಟೈನ್‌ನಲ್ಲಿರುವಂತೆ ಸೂಚನೆ ನೀಡಲಾಗಿದೆ. ಸ್ಥಳೀಯ ಆರೋಗ್ಯ ಹಾಗೂ ಪೊಲೀಸ್ ಸಿಬ್ಬಂದಿಯು ಇವರ ಮೇಲೆ ನಿಗಾ ಇರಿಸಲಿದ್ದಾರೆ ಎಂದು ವೆನ್ಲಾಕ್ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಸದಾಶಿವ ಶಾನ್‌ಭೋಗ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News