ಉಡುಪಿ: ಕೊರೋನ ಪರೀಕ್ಷೆಗೆ ಮತ್ತೆ 53 ಮಂದಿಯ ಸ್ಯಾಂಪಲ್
ಉಡುಪಿ, ಎ.13: ಶಂಕಿತ ನೋವೆಲ್ ಕೊರೋನ ವೈರಸ್ (ಕೋವಿಡ್-19) ಸೋಂಕಿನ ಪರೀಕ್ಷೆಗಾಗಿ ಇಂದು ಒಟ್ಟು 53 ಮಂದಿಯ ಗಂಟಲು ದ್ರವದ ಮಾದರಿಯನ್ನು ಪರೀಕ್ಷೆಗಾಗಿ ಕಳುಹಿಸಲಾಗಿದೆ. ಇವುಗಳಲ್ಲಿ 51 ಮಂದಿ ಶಂಕಿತ ಕೋವಿಡ್ ಶಂಕಿತರ ಸಂಪರ್ಕವನ್ನು ಹೊಂದಿದ್ದರೆ, ಉಳಿದಿಬ್ಬರು ಉಸಿರಾಟದ ತೊಂದರೆಗಾಗಿ ಆಸ್ಪತ್ರೆಗೆ ದಾಖಲಾದವರು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸುಧೀರ್‌ಚಂದ್ರ ಸೂಡ ತಿಳಿಸಿದ್ದಾರೆ.
ನಿನ್ನೆಯವರೆಗೆ ಬಾಕಿ ಉಳಿದಿದ್ದ 44 ಮಂದಿಯಲ್ಲಿ 41 ಮಂದಿಯ ಸ್ಯಾಂಪಲ್ ವರದಿ ಇಂದು ಬಂದಿದ್ದು, ಎಲ್ಲವೂ ನೆಗೆಟಿವ್ ಫಲಿತಾಂಶವನ್ನು ನೀಡಿವೆ. ಬಾಕಿ ಉಳಿದ ಮೂರು ಸ್ಯಾಂಪಲ್‌ಗಳೊಂದಿಗೆ ಇಂದು ಕಳುಹಿಸಿದ 53 ಸೇರಿ ಒಟ್ಟು 56 ಸ್ಯಾಂಪಲ್‌ಗಳ ವರದಿ ಇನ್ನು ಬರಬೇಕಿದೆ ಎಂದು ಡಾ.ಸೂಡ ತಿಳಿಸಿದರು.
ಸೋಮವಾರ ಒಟ್ಟು ಎಂಟು ಮಂದಿ ಹೊಸದಾಗಿ ಐಸೋಲೇಷನ್ ವಾರ್ಡಿಗೆ ಸೇರ್ಪಡೆಗೊಂಡಿದ್ದಾರೆ. ಇವರಲ್ಲಿ ಐದು ಮಂದಿ ಮಹಿಳೆಯರು ಉಸಿರಾಟದ ತೊಂದರೆಗಾಗಿ ಹಾಗೂ ಉಳಿದ ಮೂವರು ಪುರುಷರು ಶಂಕಿತ ಕೋವಿಡ್ ಸೋಂಕಿನ ಪರೀಕ್ಷೆಗೆ ಬಂದಿದ್ದಾರೆ. ಈ ಮೂಲಕ ಒಟ್ಟು 29 ಮಂದಿ ಐಸೋಲೇಷನ್ ವಾರ್ಡಿನಲ್ಲಿ ನಿಗಾದಲ್ಲಿದ್ದಾರೆ. ಇಂದು ಹತ್ತು ಈ ವಾರ್ಡಿನಿಂದ ಬಿಡುಗಡೆಗೊಂಡಿದ್ದು, ಈವರೆಗೆ 186 ಮಂದಿ ಬಿಡುಗಡೆಗೊಂಡಂತಾಗಿದೆ ಎಂದೂ ಡಿಎಚ್ಒ ತಿಳಿಸಿದರು.
ಜಿಲ್ಲೆಯಿಂದ ಇದುವರೆಗೆ ಒಟ್ಟು 429 ಮಂದಿಯ ಸ್ಯಾಂಪಲ್‌ಗಳನ್ನು ಪರೀಕ್ಷೆಗಾಗಿ ಪಡೆಯಲಾಗಿದೆ. ಇವುಗಳಲ್ಲಿ ಇಂದಿನವರೆಗೆ 373 ಮಂದಿಯ ವರದಿ ಬಂದಿವೆ. ಇವುಗಳಲ್ಲಿ 370 ನೆಗೆಟಿವ್ ಆಗಿದ್ದರೆ, ಮೂವರದ್ದು ವಾತ್ರ ಪಾಸಿಟಿವ್ ಎಂದವರು ತಿಳಿಸಿದರು.
ಜಿಲ್ಲೆಯಲ್ಲಿ ಉಸಿರಾಟದ ತೊಂದರೆ, ಪ್ರಯಾಣದಿಂದ ಬಂದವರು ಹಾಗೂ ಕೋವಿಡ್ ಶಂಕಿತರ ಸಂಪರ್ಕಕ್ಕೆ ಬಂದವರು ಸೇರಿ ಸೋಮವಾರ 16 ಮಂದಿ ಹೊಸದಾಗಿ ತಪಾಸಣೆಗಾಗಿ ನೋಂದಣಿಗೊಂಡಿದ್ದಾರೆ. ಈ ಮೂಲಕ ಇದುವರೆಗೆ ಜಿಲ್ಲೆಯಲ್ಲಿ ಒಟ್ಟು 2129 ಮಂದಿ ತಪಾಸಣೆಗಾಗಿ ನೋಂದಣಿ ಮಾಡಿಕೊಂಡಂತಾಗಿದೆ. ಇವರಲ್ಲಿ 1117 (ಇಂದು 141) ಮಂದಿ 28 ದಿನಗಳ ನಿಗಾ ಪೂರೈಸಿದ್ದರೆ, 1951 (12) ಮಂದಿ 14 ದಿನಗಳ ನಿಗಾವನ್ನು ಪೂರ್ಣಗೊಳಿಸಿದ್ದಾರೆ. ಒಟ್ಟು 112 ಮಂದಿ ಇನ್ನೂ ಹೋಮ್ ಕ್ವಾರಂಟೈನ್ ಹಾಗೂ 37 ಮಂದಿ ಆಸ್ಪತ್ರೆ ಕ್ವಾರಂಟೈನ್ ನಲ್ಲಿದ್ದಾರೆ. ಇಂದು 29ಮಂದಿ ಆಸ್ಪತ್ರೆಯಿಂದ ಬಿಡುಗಡೆ ಗೊಂಡಿದ್ದಾರೆ ಎಂದು ಡಾ. ಸುಧೀರ್‌ಚಂದ್ರ ಸೂಡ ತಿಳಿಸಿದರು.
ಈಗ ಉಡುಪಿಯ ಡಾ.ಟಿಎಂಎ ಪೈ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆಯ ಲ್ಲಿರುವ ಉಡುಪಿ ಆಸುಪಾಸಿನ ಇಬ್ಬರು ಸೋಂಕಿತ ಯುವಕರಲ್ಲಿ ಒಬ್ಬರ ಮೊದಲ ಸ್ಯಾಂಪಲ್‌ನ ವರದಿ ಇಂದು ಸಹ ಬಂದಿಲ್ಲ. ಇದರಲ್ಲಿ ಒಬ್ಬರ ಫಲಿತಾಂಶ ರವಿವಾರ ನೆಗೆಟಿವ್ ಆಗಿ ಬಂದಿದ್ದು, ಅವರ ಎರಡನೇ ಸ್ಯಾಂಪಲ್‌ನ್ನು ಪರೀಕ್ಷೆಗಾಗಿ ಕಳುಹಿಸಲಾಗಿದೆ. ಮತ್ತೊಬ್ಬರ ಮೊದಲ ಸ್ಯಾಂಪಲ್‌ನ ವರದಿಗಾಗಿ ಕಾಯಲಾಗುತಿದ್ದು, ಅದು ಬಂದ ಬಳಿಕ ಎರಡನೇ ಸ್ಯಾಂಪಲ್‌ನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗುವುದು ಎಂದು ಜಿಲ್ಲಾ ಕೋವಿಡ್-19 ನೋಡೆಲ್ ಅಧಿಕಾರಿ ಡಾ.ಪ್ರಶಾಂತ್ ಭಟ್ ತಿಳಿಸಿದರು.