ತೈಲ ಉತ್ಪಾದನೆ ಕಡಿತಕ್ಕೆ ಪ್ರಮುಖ ದೇಶಗಳ ಒಪ್ಪಿಗೆ
ವಿಯೆನ್ನಾ (ಆಸ್ಟ್ರಿಯ), ಎ. 13: ಕೊರೋನ ವೈರಸ್ ಬಿಕ್ಕಟ್ಟು ಮತ್ತು ರಶ್ಯ-ಸೌದಿ ಬೆಲೆ ಸಮರದಿಂದಾಗಿ ಪಾತಾಳಕ್ಕೆ ಕುಸಿದ ತೈಲ ಬೆಲೆಯನ್ನು ಆಧರಿಸುವುದಕ್ಕಾಗಿ ‘ಐತಿಹಾಸಿಕ’ ಉತ್ಪಾದನೆ ಕಡಿತಕ್ಕೆ ಪ್ರಮುಖ ತೈಲೋತ್ಪಾದಕ ದೇಶಗಳು ಒಪ್ಪಿಕೊಂಡಿವೆ. ಇದರ ಬೆನ್ನಿಗೇ ಸೋಮವಾರ ತೈಲ ಬೆಲೆಯಲ್ಲಿ ಏರಿಕೆಯಾಗಿದೆ.
ಆರಂಭಿಕ ಏಶ್ಯನ್ ವ್ಯವಹಾರದಲ್ಲಿ, ಅಮೆರಿಕದ ಬೆಂಚ್‌ಮಾರ್ಕ್ ಡಬ್ಲುಟಿಐ ತೈಲ 7.7 ಶೇಕಡ ಏರಿಕೆ ಕಂಡು ಬ್ಯಾರಲ್‌ಗೆ 24.52 ಡಾಲರ್ (ಸುಮಾರು 1,870 ರೂಪಾಯಿ)ಗೆ ಏರಿಕೆಯಾದರೆ, ಬ್ರೆಂಟ್ ತೈಲ 5 ಶೇಕಡ ಏರಿಕೆ ದಾಖಲಿಸಿ 33.08 ಡಾಲರ್ (ಸುಮಾರು 2,522 ರೂಪಾಯಿ)ಗೆ ಹಿಗ್ಗಿದೆ.
ಸೌದಿ ಅರೇಬಿಯ ನೇತೃತ್ವದ ಒಪೆಕ್ ತೈಲ ಉತ್ಪಾದಕ ದೇಶಗಳು ಮತ್ತು ರಶ್ಯ ಮುಂದಾಳುತ್ವದ ಮಿತ್ರ ದೇಶಗಳು ರವಿವಾರ ವೀಡಿಯೊ ಕಾನ್ಫರೆನ್ಸ್ ಮೂಲಕ ರಾಜಿ ಒಪ್ಪಂದವೊಂದನ್ನು ಮಾಡಿಕೊಂಡವು.
ಈ ಒಪ್ಪಂದದ ಪ್ರಕಾರ, ತೈಲ ಉತ್ಪಾದಕ ದೇಶಗಳು ಮೇ ತಿಂಗಳಿನಿಂದ ತೈಲ ಉತ್ಪಾದನೆಯಲ್ಲಿ ದಿನಕ್ಕೆ 97 ಲಕ್ಷ ಬ್ಯಾರಲ್ ಕಡಿತ ಮಾಡಲಿವೆ ಎಂದು ಮೆಕ್ಸಿಕೊದ ಇಂಧನ ಸಚಿವ ರೋಸಿಯೊ ನ್ಯಾಹ್ಲ್ ತಿಳಿಸಿದರು.