×
Ad

ರಸ್ತೆಯಲ್ಲಿ ನಕಲಿ ನೋಟುಗಳನ್ನು ಎಸೆದು ಪರಾರಿಯಾದ ಅಪರಿಚಿತ !

Update: 2020-04-13 22:15 IST

ಉಡುಪಿ, ಎ.13: ಅಪರಿಚಿತ ವ್ಯಕ್ತಿಯೊಬ್ಬ ನಕಲಿ ನೋಟುಗಳನ್ನು ರಸ್ತೆಯಲ್ಲಿ ಎಸೆದು ಹೋಗಿರುವ ಘಟನೆ ನಗರದ ವಾದಿರಾಜ ರಸ್ತೆಯಲ್ಲಿರುವ ಶುಭಾಂಗ ಅಪಾರ್ಟ್‌ಮೆಂಟ್ ಬಳಿ ಇಂದು ನಡೆದಿದೆ.

ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ 25-30 ವರ್ಷದ ಅಪರಿಚಿತ ವ್ಯಕ್ತಿ 2000, 500ರೂ. ಮುಖಬೆಲೆಯ ಸುಮಾರು 30 ನಕಲಿ ನೋಟು ಗಳನ್ನು ಎಸೆದು ಹೋಗಿದ್ದು, ರಸ್ತೆಯಲ್ಲಿ ಬಿದ್ದಿದ್ದ ನೋಟುಗಳನ್ನು ಹಲವು ಮಂದಿ ಹೆಕ್ಕಿದರೆನ್ನಲಾಗಿದೆ. ಬಳಿಕ ಆ ಯುವಕ ಓಣಿಯೊಂದರಲ್ಲಿ ಓಡಿ ಹೋಗಿ ಮರೆಯಾದನು ಎಂದು ತಿಳಿದು ಬಂದಿದೆ.

‘ಈ ಯುವಕ ಪ್ರಸ್ತುತ ಕರೋನಾ ಭೀತಿಯಿಂದ ಉಡುಪಿ ನಗರ ಬಂದ್ ಆಗಿರುವುದನ್ನು ನೋಡಿ ನೋಟುಗಳನ್ನು ಬಿಸಾಡಿದರೆ ಹಣದ ಆಸೆಗಾಗಿ ಜನರು ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಅವುಗಳನ್ನು ಅರಿಸಲು ಬರುತ್ತಾರೆ ಹಾಗೂ ಇದರಿಂದ ಕರೋನಾ ಖಾಯಿಲೆ ಹರಡಬಹುದು ಎಂಬ ದುರುದ್ದೇಶದಿಂದ ಈ ರೀತಿ ಮಾಡಿರುವ ಸಂಶಯ ಇದೆ ಎಂದು ಸ್ಥಳೀಯರಾದ ಮಧುಕರ ಮುದ್ರಾಡಿ ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಈ ಬಗ್ಗೆ ತನಿಖೆ ನಡೆಸಲಾಗುತ್ತಿದ್ದು, ಇದು ನೋಟಿನ ಝೆರೆಕ್ಸ್ ಪ್ರತಿಗಳಾ ಗಿವೆ. ಅಪರಿಚಿತ ವ್ಯಕ್ತಿ ಸಂಚರಿಸಿದ ರಸ್ತೆಯಲ್ಲಿರುವ ಸಿಸಿ ಕ್ಯಾಮೆರಾಗಳನ್ನು ಪರಿ ಶೀಲನೆ ನಡೆಸಲಾಗುತ್ತಿದೆ. ಈವರೆಗೆ ಈ ಸಂಬಂಧ ಯಾರನ್ನು ಬಂಧಿಸಿಲ್ಲ’ ಎಂದು ಉಡುಪಿ ನಗರ ಠಾಣಾ ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News