ಲಾಕ್‌ಡೌನ್ ಮಧ್ಯೆಯೂ ಪ್ರಾಮಾಣಿಕತೆ ಮೆರೆದ ರಿಕ್ಷಾ ಚಾಲಕ
Update: 2020-04-13 22:36 IST
ಮಂಗಳೂರು, ಎ.13: ಲಾಕ್‌ಡೌನ್ ಮಧ್ಯೆಯೂ ಕಷ್ಟದಲ್ಲೇ ಜೀವನ ಸಾಗಿಸುವ ರಿಕ್ಷಾ ಚಾಲಕ ಯೂಸುಫ್ ಎಂಬವರು ಪ್ರಾಮಾಣಿಕತೆ ಮೆರೆದು ಗಮನ ಸೆಳೆದಿದ್ದಾರೆ.
ಇತ್ತೀಚಿಗೆ ಆಂಜಿಯೋಪ್ಲಾಸ್ಟಿ ಆದ ವ್ಯಕ್ತಿಯೊಬ್ಬರು ತನ್ನ ಔಷಧ ಹಾಗೂ ವೈದ್ಯಕೀಯ ದಾಖಲೆಯನ್ನು ಯೂಸುಫ್‌ರ ರಿಕ್ಷಾದಲ್ಲಿ ಮರೆತು ಹೋಗಿದ್ದರು. ಇವು ‘ಜೀವರಕ್ಷಕ’ ಮದ್ದು ಎಂಬುದನ್ನು ಮನಗಂಡ ರಿಕ್ಷಾ ಚಾಲಕ ಯೂಸುಫ್ ಕೂಡಲೇ ಅದರಲ್ಲಿ ನಮೂದಿಸಿದ ವೈದ್ಯ ಡಾ. ಪದ್ಮನಾಭ ಕಾಮತ್‌ರ ಮೊಬೈಲಿಗೆ ಕರೆ ಮಾಡಿ ಮಾಹಿತಿ ನೀಡಿದರು.
ಅದರಂತೆ ವೈದ್ಯರು ತಕ್ಷಣ ಆಸ್ಪತ್ರೆಯ ಹೌಸ್ ಕೀಪಿಂಗ್ ಸಹಾಯಕಿ ಭಾರತಿಗೆ ಮಾಹಿತಿ ನೀಡಿದರು. ಭಾರತಿಯವರು ರೋಗಿಯ ಮೊಬೈಲ್ ನಂಬರನ್ನು ದಾಖಲೆಯಿಂದ ಪರಿಶೀಲಿಸಿ ರೋಗಿ ಮತ್ತು ರಿಕ್ಷಾ ಚಾಲಕರ ಸಂಪರ್ಕಕ್ಕೆ ವ್ಯವಸ್ಥೆ ಕಲ್ಪಿಸಿದರು. ಅದರಂತೆ ರಿಕ್ಷಾ ಚಾಲಕ ಯೂಸುಫ್ ರೋಗಿಗೆ ಔಷಧ ಮತ್ತು ವೈದ್ಯಕೀಯ ದಾಖಲೆಯನ್ನು ನೀಡಿ ಪ್ರಾಮಾಣಿಕತೆ ಮೆರೆದಿದ್ದಾರೆ.