ಉದ್ಯೋಗಕ್ಕಾಗಿ ಜಿಲ್ಲಾಧಿಕಾರಿಗೆ ಕರೆ ಮಾಡಿ...

Update: 2020-04-14 05:40 GMT

ಪಾಟ್ನಾ, ಎ.14: ಪ್ರಧಾನಿ ನರೇಂದ್ರ ಮೋದಿಯವರು ಎರಡನೇ ಹಂತದ ಲಾಕ್‌ಡೌನ್ ಘೋಷಿಸಿರುವ ನಡುವೆಯೇ ಹಲವು ರಾಜ್ಯಗಳು ಯಾವ ಕ್ಷೇತ್ರಗಳಲ್ಲಿ ವಿನಾಯ್ತಿ ನೀಡಲಾಗುತ್ತದೆ ಎನ್ನುವುದನ್ನು ಘೋಷಿಸಿವೆ. ಮಂಗಳವಾರದ ಬಳಿಕ ಇ-ವಾಣಿಜ್ಯ ಪ್ಲಾಟ್‌ಫಾರಂಗಳು ಕೆಲಸ ನಿರ್ವಹಿಸಲು ಒಡಿಶಾ ಅವಕಾಶ ಮಾಡಿಕೊಟ್ಟ ಬೆನ್ನಲ್ಲೇ, ಬಿಹಾರದಲ್ಲಿ ನಿತೀಶ್ ಕುಮಾರ್ ಸರ್ಕಾರ, ಉದ್ಯೋಗ ಸೃಷ್ಟಿ ಉದ್ದೇಶದಿಂದ ಆರಂಭಿಸಬಹುದಾದ ಕಾಮಗಾರಿಗಳನ್ನು ಪಟ್ಟಿ ಮಾಡಿದೆ.

ಉನ್ನತ ಅಧಿಕಾರಿಗಳು ಹಾಗೂ ಪೊಲೀಸ್ ಅಧಿಕಾರಿಗಳ ಜತೆ ವೀಡಿಯೊ ಕಾನ್ಫರೆನ್ಸ್ ಸಭೆ ನಡೆಸಿದ ನಿತೀಶ್ ಕುಮಾರ್, ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಕಾಯ್ದೆ (ನರೇಗಾ) ಯೋಜನೆಯಡಿ ಪ್ರವಾಹದಿಂದ ರಕ್ಷಣೆ, ಎಲ್ಲ ಮನೆಗಳಿಗೆ ಪೈಪ್ ಮೂಲಕ ಕುಡಿಯು ನೀರು ಸರಬರಾಜು, ಕೆರೆಗಳ ಪುನರುಜ್ಜೀವನ, ಚರಂಡಿ ಮತ್ತು ರಸ್ತೆ ಕಾಮಗಾರಿಗಳನ್ನು ಕೆಲ ನಿರ್ಬಂಧಗಳೊಂದಿಗೆ ಗ್ರಾಮೀಣ ಪ್ರದೇಶಗಳಲ್ಲಿ ಆರಂಭಿಸಲು ಸೂಚನೆ ನೀಡಿದ್ದಾರೆ.

ಕೆಲಸದ ಅಗತ್ಯವಿರುವವರು ಜಿಲ್ಲಾಧಿಕಾರಿಗಳನ್ನು ನೇರವಾಗಿ ಸಂಪರ್ಕಿಸಿ ಮನವಿ ಸಲ್ಲಿಸಬಹುದು. ಅವರು ಸ್ಥಳೀಯ ಪಂಚಾಯತ್ ಗಳಿಗೆ ನಿರ್ದಿಷ್ಟ ಕೆಲಸವನ್ನು ಹಂಚಿಕೆ ಮಾಡುತ್ತಾರೆ. ಆದರೆ 60 ವರ್ಷ ಮೇಲ್ಪಟ್ಟವರಿಗೆ ಪಾಸ್‌ಗಳನ್ನು ವಿತರಿಸಲಾಗುವುದಿಲ್ಲ ಎಂದು ನಿತೀಶ್ ಸ್ಪಷ್ಟಪಡಿಸಿದರು.

ಕೊರೋನ ವೈರಸ್ ಲಾಕ್‌ಡೌನ್‌ನಿಂದಾಗಿ ದಿನಗೂಲಿಗಳಿಗೆ ದೊಡ್ಡ ತೊಂದರೆ ಎದುರಾಗಿದ್ದು, ಆದಾಯ, ಆಹಾರ ಹಾಗೂ ವಸತಿ ವ್ಯವಸ್ಥೆ ಇಲ್ಲದೇ ಕಂಗೆಟ್ಟಿರುವ ಹಿನ್ನೆಲೆಯಲ್ಲಿ ಸರ್ಕಾರ ಈ ಕ್ರಮ ಕೈಗೊಂಡಿದೆ.

ರಾಷ್ಟ್ರವ್ಯಾಪಿ ಲಾಕ್‌ಡೌನ್‌ನಿಂದ ಬೇರೆ ರಾಜ್ಯಗಳಲ್ಲಿ ಸಿಕ್ಕಿಹಾಕಿಕೊಂಡಿರುವ ವಲಸೆ ಕಾರ್ಮಿಕರ ನೆರವಿಗಾಗಿ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಹೆಚ್ಚುವರಿ 50 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಲು ಮುಖ್ಯಮಂತ್ರಿ ಆದೇಶಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News