ಲಾಕ್‍ಡೌನ್ ವಿಸ್ತರಣೆ ಘೋಷಣೆ: ಪ್ರಧಾನಿ ಮೋದಿ ಉತ್ತರಿಸದ ಪ್ರಶ್ನೆಗಳು

Update: 2020-04-14 08:10 GMT

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿಯವರು ಮತ್ತೆ ಮಂಗಳವಾರ ದೂರದರ್ಶನದಲ್ಲಿ ಕಾಣಿಸಿಕೊಂಡು ಕೊರೋನ ವೈರಸ್ ಸಾಂಕ್ರಾಮಿಕ ತಡೆಯಲು ಮೇ 3ರವರೆಗೆ ಮನೆಯಲ್ಲೇ ಉಳಿಯುವಂತೆ ದೇಶದ ಜನತೆಗೆ ಮನವಿ ಮಾಡಿದ್ದಾರೆ.

ಆದರೆ ಮೋದಿ ಅವರ ಸುಧೀರ್ಘ ಭಾಷಣದ ಬಳಿಕವೂ ಜನಸಾಮಾನ್ಯರ ಮನಸ್ಸಿನಲ್ಲಿ ಹತ್ತಾರು ಪ್ರಶ್ನೆಗಳು ಹಾಗೆಯೇ ಉಳಿದುಕೊಂಡಿವೆ.

ಪ್ರಧಾನಿ ಮೋದಿ ಉತ್ತರಿಸದ ಪ್ರಶ್ನೆಗಳು:

►ತಾವು ಕೆಲಸ ಮಾಡುವ ಇತರ ರಾಜ್ಯಗಳಲ್ಲಿ ಸಿಕ್ಕಿ ಹಾಕಿಕೊಂಡಿರುವ ವಲಸೆ ಕಾರ್ಮಿಕರು ತಮ್ಮ ಮನೆಗಳಿಗೆ ವಾಪಸ್ಸಾಗಬಹುದೇ?

►ಇಲ್ಲ ಎಂದಾದಲ್ಲಿ ಅವರಿಗೆ ಆಹಾರ ಮತ್ತು ಅಗತ್ಯ ವಸ್ತುಗಳನ್ನು ಪೂರೈಸಲು ಯೋಜನೆ ಏನು?

►ಅವರಿಗೆ ನೀಡಿರುವ ವಸತಿ ವ್ಯವಸ್ಥೆ ಶುಚಿಯಾಗಿರದಿದ್ದರೆ ಅಥವಾ ವಾಸಯೋಗ್ಯವಲ್ಲದಿದ್ದರೆ ಏನು ಮಾಡಬೇಕು?

►ಪೊಲೀಸರು ಸಾರಾಸಗಟಾಗಿ ಹಿಂಸಾ ಕ್ರಮಗಳನ್ನು ಅನುಸರಿಸದಂತೆ ಕೇಂದ್ರ ಸರ್ಕಾರ ಪೊಲೀಸರಿಗೆ ಸೂಚಿಸುತ್ತದೆಯೇ?

►ರಾಜ್ಯಗಳು ಆಹಾರ ಪಡಿತರವನ್ನು ಸಾರ್ವತ್ರಿಕಗೊಳಿಸುತ್ತವೆಯೇ? ಆಗ ಅಗತ್ಯವಿರುವವರು ಯಾವ ರಾಜ್ಯದವರು ಎಂಬ ಪ್ರಶ್ನೆಯೇ ಉದ್ಭವಿಸುವುದಿಲ್ಲ.

►ಗೋದಾಮುಗಳಲ್ಲಿ ಅಧಿಕವಾಗಿ ದಾಸ್ತಾನು ಇರುವ ಆಹಾರಧಾನ್ಯಗಳನ್ನು ಕೇಂದ್ರ ಬಿಡುಗಡೆ ಮಾಡುತ್ತದೆಯೇ?

►ರಾಜ್ಯಗಳಿಗೆ ಕೇಂದ್ರ ಸರ್ಕಾರ ಬಾಕಿ ಉಳಿಸಿಕೊಂಡಿರುವ ಸಾವಿರಾರು ಕೋಟಿ ರೂಪಾಯಿಗಳನ್ನು ಪಾವತಿಸುತ್ತದೆಯೇ?

► ಸಂಕಷ್ಟದಿಂದ ಪಾರಾಗುವ ಸಲುವಾಗಿ ರಾಜ್ಯಗಳಿಗೆ ಕೇಂದ್ರ ಸರ್ಕಾರ ಅನುದಾನ ನೀಡುತ್ತದೆಯೇ?

► ಕೇಂದ್ರ ಸರ್ಕಾರ ಸಾಲ ಪಡೆಯುವುದನ್ನು ರಾಜ್ಯಗಳಿಗೆ ಸುಲಭ ಮಾಡಿಕೊಡುತ್ತದೆಯೇ?

► ಆರೋಗ್ಯ ಸೇವಾ ಕ್ಷೇತ್ರದ ಸಾಮರ್ಥ್ಯ ವರ್ಧನೆಗೆ ಸರ್ಕಾರ ಏನು ಮಾಡಿದೆ?

► ಕೋವಿಡ್ ವಿರುದ್ಧ ಹೋರಾಡುತ್ತಿರುವ ಆರೋಗ್ಯ ಕಾರ್ಯಕರ್ತರಿಗೆ ವೈಯಕ್ತಿಕ ಸುರಕ್ಷಾ ಸಾಧನಗಳ ಸ್ಥಿತಿಗತಿ ಹೇಗಿದೆ? ಪೂರೈಕೆ ಹೆಚ್ಚಿಸಲು ಸರ್ಕಾರ ಯಾವ ಕ್ರಮ ಕೈಗೊಂಡಿದೆ?

► ಆರ್‍ಟಿ-ಪಿಸಿಆರ್ ಮತ್ತು ಆಂಟಿಬಾಡಿ ಪರೀಕ್ಷಾ ಕಿಟ್‍ಗಳ ಸ್ಥಿತಿಗತಿ ಏನು? ಹೆಚ್ಚು ಖರೀದಿಗೆ ಸರ್ಕಾರ ಏನು ಕ್ರಮ ಕೈಗೊಂಡಿದೆ?

► ವೆಂಟಿಲೇಟರ್ ಮತ್ತು ಆಮ್ಲಜನಕ ಪೂರೈಕೆ ಸಾಮರ್ಥ್ಯ ಹೆಚ್ಚಿಸಲು ಸರ್ಕಾರದ ಕ್ರಮ ಏನು?

► ನಗದು ಭರಿದಾಗಿರುವ ಘಟಕಗಳ ಮತ್ತು ಉದ್ಯೋಗಿಗಳನ್ನು ಕಳುಹಿಸಿರುವ ಘಟಕಗಳ ಪುನರಾರಂಭಕ್ಕೆ ಸರ್ಕಾರದ ಕ್ರಮ ಏನು?

► ಉದ್ಯಮಗಳ ಪುನಶ್ಚೇತನಕ್ಕೆ ಸರ್ಕಾರ ಏನು ಘೋಷಿಸುತ್ತದೆ?

► ಆದಾಯ ನೆರವು ಯೋಜನೆ ಬಗ್ಗೆ ಸರ್ಕಾರ ಚಿಂತನೆ ನಡೆಸಿದೆಯೇ?

► ಈಗಾಗಲೇ ಉಲ್ಲೇಖಿಸಿದ್ದಕ್ಕಿಂತ ಅಧಿಕ ನಗದನ್ನು ಖಾತೆಗೆ ವರ್ಗಾಯಿಸಲಾಗುತ್ತದೆಯೇ?

►ಆರ್ಥಿಕತೆ ಮತ್ತೆ ಯಥಾಸ್ಥಿತಿಗೆ ಬಂದಾಗ ಸಾಮಾಜಿಕ ಅಂತರ ಕಾಪಾಡಲು ಉದ್ಯಮದ ಜತೆ ಚರ್ಚಿಸಿ ನಿರ್ದಿಷ್ಟ ಯೋಜನೆ ರೂಪಿಸಲಾಗಿದೆಯೇ?

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News