ಕೋವಿಡ್-19 ವಿರುದ್ಧದ ಹೋರಾಟಕ್ಕೆ ಕಾಂಗ್ರೆಸ್ ನೆರವು: ಸೋನಿಯಾ ಗಾಂಧಿ

Update: 2020-04-14 08:16 GMT

ಹೊಸದಿಲ್ಲಿ: ಕೊರೋನ ಸಾಂಕ್ರಾಮಿಕದಿಂದ ಉದ್ಭವಿಸಿರುವ ಸಂಕಷ್ಟದ ಸ್ಥಿತಿಯಲ್ಲಿ ಪಕ್ಷ ಜನತೆಗೆ ಅಗತ್ಯ ನೆರವನ್ನು ನೀಡಲಿದೆ ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹೇಳಿದ್ದಾರೆ. ಕೋವಿಡ್-19 ವಿರುದ್ಧದ ಹೋರಾಟದಲ್ಲಿ ಭಾರತ ಸದ್ಯವೇ ಜಯಶಾಲಿಯಾಗಲಿದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ. ದೇಶದ ಜನ ಮನೆಗಳಲ್ಲೇ ಉಳಿದುಕೊಂಡು ಸುರಕ್ಷತೆಯನ್ನು ಕಾಪಾಡಿಕೊಳ್ಳುವ ಜತೆಗೆ ಲಾಕ್‍ಡೌನ್ ನಿಯಮಗಳನ್ನು ಪಾಲಿಸುವಂತೆ ಪಕ್ಷ ಬಿಡುಗಡೆ ಮಾಡಿರುವ ವಿಡಿಯೊ ಸಂದೇಶದಲ್ಲಿ ಸೋನಿಯಾ ಮನವಿ ಮಾಡಿದ್ದಾರೆ. 

ಪ್ರತಿಯೊಬ್ಬರ ಸಹಕಾರ ಇಲ್ಲದೇ ಈ ಯುದ್ಧ ಗೆಲ್ಲಲಾಗದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ಭಾಷಣಕ್ಕೆ ಸ್ವಲ್ಪ ಮುನ್ನ ಕಾಂಗ್ರೆಸ್ ಪಕ್ಷ ಈ ಹೇಳಿಕೆ ಬಿಡುಗಡೆ ಮಾಡಿತ್ತು. ಲಾಕ್‍ಡೌನ್ ಅವಧಿಯಲ್ಲಿ ಶಾಂತಿ ಮತ್ತು ತಾಳ್ಮೆಯನ್ನು ಕಾಪಾಡಿಕೊಂಡು ಬಂದಿರುವ ಜನರಿಗೆ ಅವರು ಕೃತಜ್ಞತೆ ಸಲ್ಲಿಸಿದ್ದಾರೆ. “ದೇಶ ಇಂಥ ದೊಡ್ಡ ಸಮರದಲ್ಲಿ ಹೋರಾಡುತ್ತಿರುವಾವ ಪ್ರತಿಯೊಬ್ಬ ಕಾಂಗ್ರೆಸ್ ಕಾರ್ಯಕರ್ತರು ತಮ್ಮ ಜವಾಬ್ದಾರಿಯನ್ನು ಅರ್ಥ ಮಾಡಿಕೊಂಡು ಹೋರಾಡುವ ಪ್ರತಿಯೊಬ್ಬ ಯೋಧರಿಗೂ ನೆರವು ನೀಡಬೇಕು” ಎಂದು ಸಲಹೆ ಮಾಡಿದ್ದಾರೆ.

ರಾಜ್ಯಮಟ್ಟದಲ್ಲಿ ಹಾಗೂ ಕೇಂದ್ರ ನಿಯಂತ್ರಣ ಕಚೇರಿಯನ್ನು ಜನ ಸಂಪರ್ಕಿಸಿದಲ್ಲಿ ಅಗತ್ಯ ಬೆಂಬಲವನ್ನು ಪಕ್ಷದ ಕಾರ್ಯಕರ್ತರು ನೀಡಲಿದ್ದಾರೆ ಎಂದು ಅವರು ವಿವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News