ಶಂಕಿತ ಉಗ್ರ ಆದಿತ್ಯ ರಾವ್‌ನ ಬ್ರೈನ್ ಮ್ಯಾಪಿಂಗ್‌ಗೆ ಕೊರೋನ ಅಡ್ಡಿ!

Update: 2020-04-14 08:28 GMT

ಮಂಗಳೂರು,ಎ.13: ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಇರಿಸಿದ ಪ್ರಕರಣದ ಆರೋಪಿ, ಶಂಕಿತ ಉಗ್ರ ಆದಿತ್ಯ ರಾವ್‌ನ ತನಿಖೆಗೆ ಪೂರಕವಾಗಿ ನಡೆಸಬೇಕಾಗಿದ್ದ ಬ್ರೈನ್ ಮ್ಯಾಪಿಂಗ್‌ಗೆ ಕೊರೋನ ವೈರಸ್ ಸೋಂಕು ಅಡ್ಡಿಯಾಗಿದೆ. ಪ್ರಕರಣದ ಆರೋಪ ಪಟ್ಟಿ (ಚಾರ್ಜ್ ಶೀಟ್)ಯನ್ನು ಪೊಲೀಸರು ತಯಾರಿಸಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಲು ರಾಜ್ಯ ಸರಕಾರದ ಅನುಮತಿಗಾಗಿ ಕಾಯಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಆದಿತ್ಯ ರಾವ್‌ನನ್ನು ಬ್ರೈನ್ ಮ್ಯಾಪಿಂಗ್ ಮಾಡಿಸಲು ಬೆಂಗಳೂರಿಗೆ ಕರೆದುಕೊಂಡು ಹೋಗಬೇಕಿದೆ. ಆದರೆ ಕೊರೋನ ಹಾವಳಿಯನ್ನು ತಡೆಗಟ್ಟಲು ಲಾಕ್‌ಡೌನ್ ಘೋಷಿಸಿರುವುದರಿಂದ ಇದು ಸಾಧ್ಯವಾಗಿಲ್ಲ. ಆರೋಪ ಪಟ್ಟಿ ಸಲ್ಲಿಕೆಗೆ ಜಿಲ್ಲಾಡಳಿತದ ಅನುಮತಿ ಲಭಿಸಿದರೂ ರಾಜ್ಯ ಸರಕಾರದ ಅನುಮತಿ ಪಡೆಯಲಾಗದ ಕಾರಣ ಆರೋಪ ಪಟ್ಟಿ ಸಲ್ಲಿಕೆಗೆ ನಿಗದಿಪಡಿಸಿರುವ ಅವಧಿಯನ್ನು ವಿಸ್ತರಿಸುವಂತೆ ಮನವಿ ಸಲ್ಲಿಸಲಾಗಿದೆ. ಲಾಕ್‌ಡೌನ್ ತೆರವುಗೊಂಡ ಬಳಿಕ ಆರೋಪಿಯ ಬ್ರೈನ್ ಮ್ಯಾಪಿಂಗ್ ಮತ್ತು ಆರೋಪ ಪಟ್ಟಿಗೆ ಸರಕಾರದ ಅನುಮತಿ ಪಡೆದು ಬಳಿಕ ಅದನ್ನು ನ್ಯಾಯಾಲಯಕ್ಕೆ ಸಲ್ಲಿಸುವ ಪ್ರಕಿಯೆ ನಡೆಯಲಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಆರೋಪಿ ಆದಿತ್ಯ ರಾವ್ ಜ.20ರಂದು ಬೆಳಗ್ಗೆ ಮಂಗಳೂರು ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ ಬಿಲ್ಡಿಂಗ್‌ನ ಟಿಕೆಟ್ ಕೌಂಟರ್ ಬಳಿ ಇರುವ ಪ್ರಯಾಣಿಕರು ಕುಳಿತು ಕೊಳ್ಳುವ ಕುರ್ಚಿಯಲ್ಲಿ ಬಾಂಬ್ ಇರುವ ಬ್ಯಾಗ್ ಇರಿಸಿ ಬಳಿಕ ಪಾರ್ಕಿಂಗ್ ಪ್ರದೇಶದಲ್ಲಿದ್ದ ಆಟೋ ರಿಕ್ಷಾ ಏರಿ ವಾಪಸಾಗಿದ್ದನು. ವಿಮಾನ ನಿಲ್ದಾಣದಲ್ಲಿ ಕಂಡು ಬಂದ ಅನುಮಾನಾಸ್ಪದ ಬ್ಯಾಗ್‌ನ್ನು ವಿಮಾನ ನಿಲ್ದಾಣದ ಅಧಿಕಾರಿಗಳು ತಜ್ಞರಿಂದ ಪರಿಶೀಲನೆಗೆ ಒಳಪಡಿಸಿದಾಗ ಅದರಲ್ಲಿ ಸ್ಫೋಟಕ ಪತ್ತೆಯಾಗಿತ್ತು. ಅದನ್ನು ಬಳಿಕ ಕೆಂಜಾರಿನ ವಿಶಾಲವಾದ ನಿರ್ಜನ ಪ್ರದೇಶಕ್ಕೆ ಕೊಂಡೊಯ್ದು ಬಾಂಬ್ ಪತ್ತೆ ದಳದ ತಜ್ಞರ ಸಹಾಯದಿಂದ ನಿಷ್ಕ್ರಿಯಗೊಳಿಸಲಾಗಿತ್ತು. ಈ ಪ್ರಕರಣ ರಾಷ್ಟ್ರ ಮತ್ತು ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿ ಆತಂಕಕ್ಕೂ ಕಾರಣವಾಗಿತ್ತು. ಬಳಿಕ ಜ.22ರಂದು ಬೆಳಗ್ಗೆ ರಾಜ್ಯ ಪೊಲೀಸ್ ಮಹಾ ನಿರ್ದೇಶಕರ ಕಚೇರಿಯಲ್ಲಿ ಶರಣಾಗಿದ್ದನು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News