ದ.ಕ. ಜಿಲ್ಲೆಯಲ್ಲಿ ವಲಸೆ ಕಾರ್ಮಿಕರ ಹಿತ ಕಾಪಾಡುವವರು ಯಾರು: ಮುನೀರ್ ಕಾಟಿಪಳ್ಳ ಪ್ರಶ್ನೆ

Update: 2020-04-14 08:33 GMT

ಮಂಗಳೂರು, ಎ.14: ದ.ಕ. ಜಿಲ್ಲಾದ್ಯಂತ ಸಾವಿರಾರು ವಲಸೆ ಕಾರ್ಮಿಕರು ತುತ್ತು ಅನ್ನಕ್ಕೂ ಪರದಾಡುವಂತಹ ಪರಿಸ್ಥಿತಿಯಿದ್ದು, ಅವರ ಹಿತ ಕಾಪಾಡುವವರು ಯಾರು? ಎಂದು ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಪ್ರಶ್ನಿಸಿದ್ದಾರೆ.

ಜೋಕಟ್ಟೆ ಗ್ರಾಮದ ಕೆಲವು ವಲಸೆ ಕಾರ್ಮಿಕರ ಕುಟುಂಬಗಳಿಗೆ ಗ್ರಾಪಂ ಮೂಲಕ ಜಿಲ್ಲಾಡಳಿತದ ಪ್ರತಿನಿಧಿಗಳು ಆಹಾರ ಕಿಟ್ ತಲುಪಿಸಿದ್ದು, ಅದರಲ್ಲಿ 3 ಕಿಲೊ ಅಕ್ಕಿ, 1 ಕಿಲೊ ಗೋಧಿ ಹಿಟ್ಟು, ಆಲೂಗೆಡ್ಡೆ ಸಹಿತ ಒಂದಿಷ್ಟು ದಿನಸಿಗಳಿವೆ. ಸ್ಥಳೀಯ ಗ್ರಾಪಂ ಸದಸ್ಯರೊಬ್ಬರು ನೀಡಿರುವ ಮಾಹಿತಿ ಪ್ರಕಾರ ಇದು ಇನ್ಫೋಸಿಸ್ ಕಂಪೆನಿಯ ಕೊಡುಗೆ. ಈ ಗ್ರಾಮದಲ್ಲಿ ಎಂಆರ್‌ಪಿಎಲ್, ಎಸ್‌ಇಝೆಡ್‌ನ ಗುತ್ತಿಗೆದಾರರಿಗೆ ಸೇರಿದ ಭಾರೀ ಸಂಖ್ಯೆಯ ವಲಸೆ ಕಾರ್ಮಿಕರಿದ್ದಾರೆ. ಸರಕಾರದ ಪರವಾಗಿ ಇದೇ ಮೊದಲ ಬಾರಿಗೆ ದಿನಸಿ ಸಾಮಗ್ರಿ ಇಲ್ಲಿಗೆ ತಲುಪಿದೆ ಎನ್ನಲಾಗುತ್ತಿದೆ. ಪ್ರತಿಯೊಂದು ಕೋಣೆಗಳಲ್ಲಿ 5-10 ಮಂದಿ ಕಾರ್ಮಿಕರಿದ್ದಾರೆ. ಜಿಲ್ಲಾಡಳಿತ ನೀಡಿದ ಈ ಕಿಟ್ ಕೇವಲ 2 ದಿನಕ್ಕೆ ಸಾಕಾಗಬಹುದು. ಆ ನಂತರ ಇವರ ಬದುಕಿನ ಕತೆ ಏನು? ಎಂದು ಮುನೀರ್ ಪ್ರಶ್ನಿಸಿದ್ದಾರೆ.

ಸೋಮವಾರ ಸುರತ್ಕಲ್ ನಲ್ಲಿದ್ದ ಗದಗ ಮೂಲದ ವಲಸೆ ಕೂಲಿಕಾರರರು ಅನ್ನ, ಅಕ್ಕಿಗೆ ದಿಕ್ಕು ತೋಚದೆ 400 ಕಿ.ಮೀ. ದೂರದ ತಮ್ಮೂರಿಗೆ ಪಾದಯಾತ್ರೆ ಶುರು ಮಾಡಿದ್ದರು. ಉಡುಪಿ ಗಡಿಯಲ್ಲಿ ಅವರನ್ನು ತಡೆದ ಪೊಲೀಸರು ಮತ್ತೆ ಸುರತ್ಕಲ್ ಗೆ ತಂದು ಬಿಟ್ಟು ಹೋಗಿದ್ದಾರೆ. ಹಾಗಿದ್ದರೆ ಇವರ ಹಸಿವು ನೀಗುವುದು ಯಾರು? ಇಂತಹ ವಲಸೆ ಕಾರ್ಮಿಕರ ಸಂಕಷ್ಟಕ್ಕೆ ಸ್ಪಂದಿಸುವವರು ಯಾರು? ಜಿಲ್ಲಾಡಳಿತದ ವಾರ್‌ರೂಂ, ಹೆಲ್ಪ್ ಡೆಸ್ಕ್ ನಿಂದ ಸರಿಯಾದ ಪ್ರತಿಕ್ರಿಯೆ ಸಿಗುತ್ತಿಲ್ಲ ಎಂಬ ದೂರು ಕೂಡ ಇದೆ. ಕನಿಷ್ಠ ಅಕ್ಕಿ, ರಾಗಿ, ಗೋಧಿ, ಜೋಳ ತಲುಪಿಸಲು ಸಾಧ್ಯವಾಗದಷ್ಟು ಸರಕಾರ ದಿವಾಳಿಯಾಗಿದೆಯೇ?. ಪ್ರಧಾನಿ ನರೇಂದ್ರ ಮೋದಿ ಲಾಕ್‌ಡೌನ್ ಅನ್ನು ಮತ್ತೆ 19 ದಿನಗಳ ಕಾಲ ಮುಂದುವರಿಸಿದ್ದಾರೆ. ಆದರೆ ದುಡಿಯುವ ಜನಗಳ ಹಸಿವು ನೀಗಿಸುವ ಕುರಿತು ಒಂದು ಮಾತನ್ನೂ ಕೂಡ ಅವರು ಆಡಲಿಲ್ಲ. ಅವರು ಈ ಹಿಂದೆ ಘೋಷಿಸಿದ್ದ ಕೊರೋನ ಪರಿಹಾರ ಪ್ಯಾಕೇಜ್ ಏನಾದವು ಎಂಬುದರ ಬಗ್ಗೆಯೂ ಮಾಹಿತಿ ಇಲ್ಲ. ಒಂದೊ ವಲಸೆ ಕಾರ್ಮಿಕರಿಗೆ ದುಡಿಯಲು ಅವಕಾಶ ಮಾಡಿಕೊಡಬೇಕು ಅಥವಾ ಅವರನ್ನು ಅವರ ಊರಿಗೆ ತಲುಪಿಸುವ ವ್ಯವಸ್ಥೆ ಮಾಡಬೇಕು ಎಂದು ಮುನೂರ್ ಕಾಟಿಪಳ್ಳ ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News