ಮಂಗಳೂರು: ವಿಷು ಸಂಕ್ರಮಣದ ಅಂಗವಾಗಿ ವಿಷುಕಣಿ ಪೂಜೆ

Update: 2020-04-14 08:57 GMT

ಮಂಗಳೂರು, ಎ.14: ನಗರದ ಶರವು ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ವಿಷು ಸಂಕ್ರಮಣದ ಅಂಗವಾಗಿ ವಿಷುಕಣಿ ಪೂಜೆಯು ಸರಳವಾಗಿ ಸೋಮವಾರ ಆಚರಿಸಲಾಯಿತು.
 ಶರವು ಶ್ರೀರಾಘವೇಂದ್ರ ಶಾಸಿ ನೇತೃತ್ವದಲ್ಲಿ ವಿಷು ಕಣಿ ಧಾರ್ಮಿಕ ವಿಧಿವಿಧಾನಗಳು ನಡೆದವು. ಸಂಜೆ 6:30ಕ್ಕೆ ದೇವರ ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿಟ್ಟು ದೇವಸ್ಥಾನದೊಳಗೆ ಪ್ರದಕ್ಷಿಣೆ ಹಾಕಲಾಯಿತು. ಬಳಿಕ ದೇವರ ಮೂರ್ತಿಯನ್ನು ಉಯ್ಯಿಲೆಯಲ್ಲಿ ತೂಗಿ ಬಳಿಕ ಪೂಜೆ ನಡೆದು ಗರ್ಭಗುಡಿಗೆ ತರಲಾಯಿತು. 6:45ಕ್ಕೆ ಅರ್ಚಕರು ವಿಷುಕಣಿಯನ್ನಿಟ್ಟು ಅದರ ಸುತ್ತ ಬಾಳೆಹಣ್ಣು, ಸೀಯಾಳ, ಹೂವಿನಿಂದ ಅಲಂಕರಿಸಿದರು.
 *ವಿಶೇಷ ಪ್ರಾರ್ಥನೆ: ವಿಷು ಹಬ್ಬದ ಸಂದರ್ಭ ಭಕ್ತರ ಪರವಾಗಿ ಶರವು ಕ್ಷೇತ್ರದ ಶಿಲೆಶಿಲೆ ಆಡಳಿತ ಮೊಕ್ತೇಸರ ಶರವು ರಾಘವೇಂದ್ರ ಶಾಸಿ ವಿಶೇಷ ಪ್ರಾರ್ಥನೆ ಸಲ್ಲಿಸಿ ‘ಶಾರ್ವರಿ ಸಂವತ್ಸರ ಆರಂಭವಾಗುತ್ತಿದ್ದು, ಈ ಸಂವತ್ಸರ ಜಗತ್ತಿನ ಸಂಕಷ್ಟವನ್ನು ದೂರ ಮಾಡಿ, ಶ್ರೇಯಸ್ಸನ್ನು ನೀಡಲಿ. ಕೊರೋನ ಮಾಹಾಮಾರಿ ಜಗತ್ತಿನಿಂದ ದೂರವಾಗಲಿ. ಎಲ್ಲರಿಗೂ ಸುಖ ಸಮೃದ್ಧಿ ನೀಡಲಿ’ ಎಂದು ಶುಭ ಹಾರೈಸಿದರು.
ಕೊರೋನ ಮಾಹಾಮಾರಿ ನಿರ್ಮೂಲನೆ ಮಾಡಲು ಇಡೀ ಜಗತ್ತು ಒಂದಾಗಿ ನಿಂತಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ಅನಗತ್ಯ ಮನೆಯಿಂದ ಹೊರಗೆ ಬರಬೇಡಿ, ಮನೆಯಲ್ಲಿದ್ದೇ ಪ್ರಾರ್ಥನೆ ಸಲ್ಲಿಸಿ. ಈ ಸಂದರ್ಭ ಸಂಕಷ್ಟದಲ್ಲಿದ್ದವರಿಗೆ, ಬಡವರಿಗೆ ಸಾಧ್ಯವಾದಷ್ಟು ನೆರವು ಮಾಡೋಣ ಎಂದು ರಾಘವೇಂದ್ರ ಶಾಸಿ ಕರೆ ನೀಡಿದರು.
ಈ ಸಂದರ್ಭ ಶರವು ಕ್ಷೇತ್ರದ ಸುದೇಶ್ ಶಾಸಿ, ದೇವಳ ಅರ್ಚಕರು, ಸಿಬ್ಬಂದಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News