×
Ad

ದ.ಕ.: ಮತ್ತೋರ್ವ ಕೊರೋನ ಸೋಂಕಿತ ವ್ಯಕ್ತಿ ಆಸ್ಪತ್ರೆಯಿಂದ ಬಿಡುಗಡೆ

Update: 2020-04-14 18:52 IST

ಮಂಗಳೂರು, ಎ.14: ಕೊರೋನ ಸೋಂಕಿಗೊಳಗಾಗಿ ನಗರದ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪುತ್ತೂರು ತಾಲೂಕಿನ ಆರ್ಯಾಪು ಗ್ರಾಮದ 49 ವರ್ಷ ಪ್ರಾಯದ ವ್ಯಕ್ತಿಗೆ ಸಂಪೂರ್ಣ ಗುಣಮುಖರಾಗಿದ್ದು, ಮಂಗಳವಾರ ಅವರನ್ನು ಆಸ್ಪತ್ರೆಯಿಂದ ಡಿಸ್ಜಾರ್ಜ್ ಮಾಡಲಾಗಿದೆ. ಇದರೊಂದಿಗೆ 12 ಮಂದಿ ಸೋಂಕಿತರ ಪೈಕಿ 9 ಮಂದಿಯನ್ನು ಬಿಡುಗಡೆಗೊಳಿಸಿದಂತಾಗಿದೆ. ಇನ್ನೂ 3 ಮಂದಿ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರೆಲ್ಲರೂ ಚೇತರಿಸುತ್ತಿದ್ದಾರೆ.

ದುಬೈಯಲ್ಲಿದ್ದ ಈ ವ್ಯಕ್ತಿ ಮಾ.20ರಂದು ವಿಮಾನದಲ್ಲಿ ಬೆಂಗಳೂರು ವಿಮಾನ ನಿಲ್ದಾಣದ ಮೂಲಕ ಆಗಮಿಸಿ ಖಾಸಗಿ ಟ್ಯಾಕ್ಸಿಯಲ್ಲಿ ಆರ್ಯಾಪು ಗ್ರಾಮದ ತನ್ನ ಮನೆಗೆ ಪ್ರವೇಶಿಸಿದ್ದರು. ಮಾ.28ರಂದು ಸಣ್ಣದಾಗಿ ಗಂಟಲಿನಲ್ಲಿ ನೋವು ಕಾಣಿಸಿಕೊಂಡ ಕಾರಣ ಪುತ್ತೂರಿನ ಸಾರ್ವಜನಿಕ ಆಸ್ಪತ್ರೆಗೆ ಅವರನ್ನು ದಾಖಲಿಸಲಾಗಿತ್ತು. ಬಳಿಕ ಅವರ ಗಂಟಲಿನ ದ್ರವದ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಎ.1ರಂದು ಅವರ ಸ್ವೀಕೃತ ವರದಿಯಲ್ಲಿ ಅವರಿಗೆ ಕೊರೋನ ಸೋಂಕು ಇರುವುದು ದೃಢಗೊಂಡಿತ್ತು. ನಂತರ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಈ ಮಧ್ಯೆ ಅವರ ಗಂಟಲಿನ ದ್ರವವನ್ನು ಎರಡು ಬಾರಿ ಪರೀಕ್ಷೆಗೆ ಕಳುಹಿಸಿದಾಗ ವರದಿಯಲ್ಲಿ ನೆಗೆಟಿವ್ ಕಂಡು ಬಂದಿದೆ. ಅದರಂತೆ ಮಂಗಳವಾರ ಆಸ್ಪತೆಯಿಂದ ಬಿಡುಗಡೆಗೊಳಿಸಲಾಗಿದೆ.

ಕೊರೋನ ಸೋಂಕಿಗೊಳಗಾಗಿ ನಗರದ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕಾಸರಗೋಡು ಮೂಲದ ಮೂವರು ಮತ್ತು ಭಟ್ಕಳದ ಯುವಕ ಸಹಿತ ನಾಲ್ಕು ಮಂದಿಯನ್ನು ಎ.6ರಂದು ಬಿಡುಗಡೆಗೊಳಿಸಲಾಗಿತ್ತು. ಬೆಳ್ತಂಗಡಿ ತಾಲೂಕಿನ ಕರಾಯ ಗ್ರಾಮದ 21ರ ಹರೆಯದ ಯುವಕನನ್ನು ಎ.10ರಂದು ಮತ್ತು ನಗರದ ಖಾಸಗಿ ಆಸ್ಪತ್ರೆಯಲ್ಲಿದ್ದ 10 ತಿಂಗಳ ಮಗುವನ್ನು ಎ.11ರಂದು ಬಿಡುಗಡೆಗೊಳಿಸಲಾಗಿತ್ತು. 70ರ ಹರೆಯದ ವೃದ್ಧೆಯನ್ನು ಎ.12ರಂದು ಬಿಡುಗಡೆಗೊಳಿಸಲಾಗಿದ್ದರೆ, ಅಜ್ಜಾವರದ ಯುವಕನನ್ನು ಆಸ್ಪತ್ರೆಯಿಂದ ಎ.13ರಂದು ಬಿಡುಗಡೆಗೊಳಿಸಲಾಗಿತ್ತು. ಇದೀಗ ಆರ್ಯಾಪು ಗ್ರಾಮದ ವ್ಯಕ್ತಿಯನ್ನು ಬಿಡುಗಡೆಗೊಳಿಸಲಾಗಿದೆ. ಇದರೊಂದಿಗೆ 9 ಮಂದಿಯನ್ನು ಬಿಡುಗಡೆಗೊಳಿಸಿದಂತಾಗಿದೆ.

ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡವರ ಕೈಗೆ ಸೀಲ್ ಹಾಕಲಾಗುತ್ತದೆ. ಕಡ್ಡಾಯವಾಗಿ 28 ದಿನಗಳ ಕಾಲ ಮನೆಯಲ್ಲಿ ಕ್ವಾರಂಟೈನ್‌ನಲ್ಲಿರುವಂತೆ ಸೂಚನೆ ನೀಡಲಾಗಿದೆ. ಸ್ಥಳೀಯ ಆರೋಗ್ಯ ಹಾಗೂ ಪೊಲೀಸ್ ಸಿಬ್ಬಂದಿಯು ಇವರ ಮೇಲೆ ನಿಗಾ ಇರಿಸಲಿದ್ದಾರೆ ಎಂದು ವೆನ್ಲಾಕ್ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಸದಾಶಿವ ಶಾನ್‌ಭೋಗ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News