×
Ad

ಕೊರೋನ ವೈರಸ್: ದ.ಕ. ಜಿಲ್ಲೆಯಲ್ಲಿ ಸತತ 10ನೆ ದಿನದ ವರದಿಗಳೂ ನೆಗೆಟಿವ್

Update: 2020-04-14 19:07 IST
ಸಾಂದರ್ಭಿಕ ಚಿತ್ರ

ಮಂಗಳೂರು, ಎ.14: ಕೊರೋನ ವೈರಸ್ ರೋಗಕ್ಕೆ ಸಂಬಂಧಿಸಿ ಮಂಗಳವಾರ ಪ್ರಯೋಗಾಲಯದಿಂದ ಸ್ವೀಕರಿಸಲಾದ 12 ಮಂದಿಯ ವರದಿಯು ನೆಗೆಟಿವ್ ಆಗಿದೆ. ಇದರೊಂದಿಗೆ ಕಳೆದ 10 ದಿನದಿಂದ ಬಂದ ವರದಿಗಳೆಲ್ಲವೂ ನೆಗೆಟಿವ್ ಆಗಿದ್ದು, ಇದು ದ.ಕ.ಜಿಲ್ಲೆಯ ಮಟ್ಟಿಗೆ ಆಶಾದಾಯಕ ಬೆಳವಣಿಗೆಯಾಗಿದೆ. 

10 ದಿನದ ಹಿಂದೆ ಅಂದರೆ ಎ.4ರವರೆಗೆ 12ನೆ ಪಾಸಿಟಿವ್ ವರದಿ ಬಂದಿತ್ತು. ಆ ಬಳಿಕ ಬಂದ ವರದಿಗಳೆಲ್ಲವೂ ನೆಗೆಟಿವ್ ಆಗಿದೆ. 12 ಪಾಸಿಟಿವ್‌ಗಳ ಪೈಕಿ 9 ಮಂದಿಯನ್ನು ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗಿದೆ. ಇನ್ನು 3 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಅಂದಹಾಗೆ, ಇನ್ನೂ 168 ಮಂದಿಯ ವರದಿಗಾಗಿ ಕಾಯಲಾಗುತ್ತಿದೆ. ಜ್ವರದ ಹಿನ್ನೆಲೆಯಲ್ಲಿ 21 ಮಂದಿಯ ಮೇಲೆ ನಿಗಾ ಇಡಲಾಗಿದೆ. ಮಂಗಳವಾರ 21 ಮಂದಿಯ ಸ್ಕ್ರೀನಿಂಗ್ ಮಾಡಲಾಗಿದೆ. ಇದರೊಂದಿಗೆ ಈವರೆಗೆ 38,958 ಮಂದಿಯ ಸ್ಕ್ರೀನಿಂಗ್ ಮಾಡಿದಂತಾಗಿದೆ. ಮಂಗಳವಾರ 156 ಮಂದಿಯ ಗಂಟಲಿನ ದ್ರವವನ್ನು ಪರೀಕ್ಷೆಗಾಗಿ ವೆನ್ಲಾಕ್ ಆಸ್ಪತ್ರೆಯ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಮಂಗಳವಾರದವರೆಗೆ 1485 ಮಂದಿ ಹೋಂ ಕ್ವಾರಂಟೈನ್‌ನಲ್ಲಿದ್ದಾರೆ. ವೆನ್ಲಾಕ್ ಆಸ್ಪತ್ರೆಯಲ್ಲಿ ಇದೀಗ ಯಾರೂ ಕ್ವಾರಂಟೈನ್‌ನಲ್ಲಿಲ್ಲ. ಇಎಸ್‌ಐ ಆಸ್ಪತ್ರೆಯಲ್ಲಿ 24 ಮಂದಿ ಕ್ವಾರಂಟೈನ್‌ನಲ್ಲಿದ್ದಾರೆ. ಮಂಗಳವಾರ 28 ದಿನದ ಕ್ವಾರಂಟೈನ್ (ನಿಗಾ) ಅವಧಿಯನ್ನು 4,588 ಮಂದಿ ಪೂರೈಸಿದ್ದಾರೆ.

ಈವರೆಗೆ 636 ಮಂದಿಯ ಗಂಟಲಿನ ದ್ರವವನ್ನು ಪರೀಕ್ಷೆಗಾಗಿ ಕಳುಹಿಸಲಾಗಿತ್ತು. ಆ ಪೈಕಿ 468 ಮಂದಿಯ ವರದಿಯನ್ನು ಸ್ವೀಕರಿಸಲಾಗಿದ್ದು, ಅದರಲ್ಲಿ 468 ಮಂದಿಯ ವರದಿಯು ನೆಗೆಟಿವ್ ಆಗಿದ್ದರೆ, 12 ಮಂದಿಯ ವರದಿಯು ಪಾಸಿಟಿವ್ ಆಗಿತ್ತು. ಪಾಸಿಟಿವ್‌ಗಳ ಪೈಕಿ ಮಗು ಮತ್ತು ವೃದ್ಧೆಯ ಸಹಿತ 9 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಉಳಿದ 3 ಮಂದಿ ಚೇತರಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News