×
Ad

ಉಡುಪಿ: ಮೂರನೇ ಯುವಕನ ಮಾದರಿ ಮತ್ತೆ ಪಾಸಿಟಿವ್

Update: 2020-04-14 19:22 IST
ಸಾಂದರ್ಭಿಕ ಚಿತ್ರ

ಉಡುಪಿ, ಎ.14: ಜಿಲ್ಲೆಯಲ್ಲಿ ನೋವೆಲ್ ಕೊರೋನ ವೈರಸ್ (ಕೋವಿಡ್-19) ಸೋಂಕು ಪತ್ತೆಯಾದ ಮೂವರು ಯುವಕರಲ್ಲಿ ಮಂಗಳವಾರ ಸಂಜೆಯವರೆಗೆ ಇಬ್ಬರು ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದರೆ, ಚಿಕಿತ್ಸೆಯಲ್ಲಿರುವ ಮತ್ತೊಬ್ಬ ಯುವಕನ ಗಂಟಲು ದ್ರವದ ಮೊದಲ ಸ್ಯಾಂಪಲ್ ಪಾಸಿಟಿವ್ ಆಗಿ ಬಂದಿರುವ ಕಾರಣ, ಇನ್ನೂ 14 ದಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿಯಲಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುಧೀರ್‌ಚಂದ್ರ ಸೂಡ ತಿಳಿಸಿದ್ದಾರೆ.

29ರ ಹರೆಯದ ಈ ಯುವಕ, ತನ್ನ ಸ್ನೇಹಿತರೊಂದಿಗೆ ಕೆಲಸದ ನಿಮಿತ್ತ ಕೇರಳದ ತಿರುವನಂತಪುರಂಗೆ ತೆರಳಿದ್ದು, ಹಿಂದಿರುಗಿ ಬರುವಾರ ಕೇರಳ- ಕರ್ನಾಟಕ ಗಡಿಯ ತಲಪಾಡಿ ಚೆಕ್‌ಪೋಸ್ಟ್‌ನಿಂದ ನೇರವಾಗಿ ಉಡುಪಿಗೆ ಕರೆತಂದು ಜಿಲ್ಲಾಸ್ಪತ್ರೆಗೆ ಸೇರಿಸಲಾಗಿತ್ತು. ಮಾ.29ರಂದು ಇವರ ಸ್ಯಾಂಪಲ್ ಪಾಸಿಟಿವ್ ಆಗಿ ಬಂದಿತ್ತು. ಆ ಬಳಿಕ ಅವರು ಕೆಎಂಸಿ ಹಾಗೂ ನಗರದ ಡಾ.ಟಿಎಂಎ ಪೈ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದರು.

12 ದಿನಗಳ ಚಿಕಿತ್ಸೆಯ ಬಳಿಕ ಇವರ ಗಂಟಲಿನ ದ್ರವದ ಮಾದರಿಯನ್ನು ಮಾ.29ರಂದೇ ಸೋಂಕು ಪತ್ತೆಯಾದ ಮಣಿಪುರದ ಯುವಕನ ಮಾದರಿಯೊಂದಿಗೆ ಪರೀಕ್ಷೆಗೆ ಕಳುಹಿಸಲಾಗಿತ್ತು. ಮಣಿಪುರದ ಯುವಕನ ಸ್ಯಾಂಪಲ್ ನಿನ್ನೆ ನೆಗೆಟಿವ್ ಆಗಿ ಬಂದಿದ್ದರೆ, ಈತನ ಮಾದರಿ ಫಲಿತಾಂಶ ಬಂದಿರಲಿಲ್ಲ.

ಆದರೆ ಇಂದು ಆತನ ಸ್ಯಾಂಪಲ್‌ನ ವರದಿಯೂ ಬಂದಿದ್ದು, ಅದು ಈಗಲೂ ಪಾಸಿಟಿವ್ ಆಗಿಯೇ ಇತ್ತು. ಹೀಗಾಗಿ ಈತನಿಗೆ ಡಾ.ಟಿಎಂಎ ಪೈ ಕೋವಿಡ್ ಆಸ್ಪತ್ರೆಯಲ್ಲಿ ಇನ್ನೂ 14 ದಿನಗಳ ಚಿಕಿತ್ಸೆ ಮುಂದುವರಿಯಲಿದೆ. 12ದಿನಗಳ ಚಿಕಿತ್ಸೆ ಮುಗಿದ ಬಳಿಕ ಮತ್ತೊಮ್ಮೆ ಸ್ಯಾಂಪಲ್‌ನ್ನು ಪರೀಕ್ಷೆಗೆ ಕಳುಹಿಸಲಾಗುವುದು ಎಂದು ಡಾ.ಸುಧೀರ್‌ಚಂದ್ರ ಸೂಡ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News