ಅಂಬೇಡ್ಕರ್ ದಲಿತರ ಬದುಕನ್ನು ಬದಲಾಯಿಸಿದವರು: ಜಯನ್ ಮಲ್ಪೆ

Update: 2020-04-14 16:53 GMT

ಉಡುಪಿ, ಎ.14: ತಲಾತಲಾಂತರದಿಂದ ದಾಸ್ಯದ ಕತ್ತಲಲ್ಲಿ ನೆಲಕಚ್ಚಿ ಹೋಗಿದ್ದ ದಲಿತರ ಬದುಕನ್ನು ಬದಲಾಯಿಸಿದ ವ್ಯಕ್ತಿ ಮಹಾ ಮಾನವತಾವಾದಿ ಅಂಬೇಡ್ಕರ್ ಎಂದು ದಲಿತ ಚಿಂತಕ ಹಾಗೂ ಜನಪರ ಹೋರಾಟಗಾರ ಜಯನ್ ಮಲ್ಪೆ ಹೇಳಿದ್ದಾರೆ.

ಮಲ್ಪೆ ಸರಸ್ವತಿ ರಂಗಮಂದಿರದಲ್ಲಿ ಮಂಗಳವಾರ ಅಂಬೇಡ್ಕರ್ ಯುವಸೇನೆ ಆಯೋಜಿಸಿದ್ದ ಡಾ.ಬಾಬಾ ಸಾಹೇಬ ಅಂಬೇಡ್ಕರ್‌ರ 129ನೇ ಜನ್ಮದಿನಾಚರಣೆ ಮತ್ತು ಬಡವರಿಗೆ ಅಕ್ಕಿ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡುತಿದ್ದರು.

ಅಂಬೇಡ್ಕರ್ ಅವರ ನಿರಂತರ ಹೋರಾಟದ ಫಲವೇ ಇಂದು ದಲಿತ ಸಮುದಾಯದಲ್ಲಿ ಸ್ವಾಭಿಮಾನದ ಕಿಡಿ ಹೊತ್ತಿ ಉರಿಯುತ್ತಿರುವುದಕ್ಕೆ ಕಾರಣ. ಅವರ ಹೋರಾಟದ ಸ್ಪೂರ್ತಿಯೇ ಇಂದು ದೇಶದ ಮೂಲೆ ಮೂಲೆಗಳಲ್ಲಿ ಎಚ್ಚೆತ್ತ ದಲಿತರು ನಾನಾ ರೀತಿಯ ದಮನ, ದಬ್ಬಾಳಿಕೆಗಳ ವಿರುದ್ಧ ಸಮರ ಘೋಷಿಸಿರುವುದಕ್ಕೆ ನಾಂದಿ ಎಂದರು.

ಕೊರೋನ ಎಂಬ ಸಾಂಕ್ರಾಮಿಕ ರೋಗದಿಂದ ಅಂಬೇಡ್ಕರ್ ಜನ್ಮದಿನಾಚರಣೆ ಯನ್ನು ಸಾಂಕೇತಿಕವಾಗಿ ಆಚರಿಸಿದರೂ ಅಂಬೇಡ್ಕರ್ ಯುವಸೇನೆ ಡಾ.ಬಾಬಾ ಸಾಹೇಬರ ಬದುಕು, ಚಿಂತನೆ, ಹೋರಾಟಗಳ ದೀಪವನ್ನು ದಲಿತರ ಮನೆ ಮನೆಗಳಿಗೆ ಮುಟ್ಟಿಸುವ ಪಣತೊಟ್ಟಿದೆ ಎಂದ ಜಯನ್ ಮಲ್ಪೆ ನುಡಿದರು.

ಕಾರ್ಯಕ್ರಮದಲ್ಲಿ ಯುವಸೇನೆಯ ಅಧ್ಯಕ್ಷ ಹರೀಶ್ ಸಾಲ್ಯಾನ್, ದಲಿತ ನಾಯಕರಾದ ಸುಂದರ ಕಪ್ಪೆಟ್ಟು, ರಮೇಶ್‌ಪಾಲ್, ಗಣೇಶ್ ನೆರ್ಗಿ, ಸಂತೋಷ್ ಕಪ್ಪೆಟ್ಟು, ಗುಣಪಾಲ ತೊಟ್ಟಂ, ರಾಜೇಶ್ ಮೂಡುತೋನ್ಸೆ, ಮಂಜುನಾಥ ಕಪ್ಪೆಟ್ಟು, ರವಿ ಪಾಳೆಕಟ್ಟೆ, ಸತೀಶ್ ಕಪ್ಪಟ್ಟು, ರಾಜೇಶ್ ಮಲ್ಪೆ, ದೀಪಕ್, ಸೋಮನಾಥ, ದಿನೇಶ್ ಮೂಡಬೇಟ್ಟು, ದಯಾಕರ್‌ಮಲ್ಪೆ, ಸುಂದರಿ ಪುತ್ತೂರು, ಶಶಿಕಲಾ ತೊಟ್ಟಂ, ಸುನೀತ ತೊಟ್ಟಂ, ಪೂರ್ಣಿಮ ನೆರ್ಗಿ ಮೊದಲಾದವರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಸುಮಾರು ಹನ್ನೆರಡು ಗ್ರಾಮದ 150ಕ್ಕೂ ಹೆಚ್ಚು ಬಡ ದಲಿತ ಕುಟುಂಬಕ್ಕೆ ತಲಾ ಹತ್ತು ಕೆಜಿ.ಅಕ್ಕಿ ಮತ್ತು ಇತರ ಸಾಮಾಗ್ರಿಗಳನ್ನು ವಿತರಿಸಲಾಯಿತು. ಭಗವಾನ್‌ದಾಸ್ ಸ್ವಾಗತಿಸಿ, ಪ್ರಸಾದ್ ಮಲ್ಪೆ ವಂದಿಸಿದರು.    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News