×
Ad

ಲಾಕ್‍ಡೌನ್ ನಿಂದ ತೀವ್ರ ಸಂಕಷ್ಟ: 16 ಲಕ್ಷ ಕೋಟಿ ರೂ. ಉತ್ತೇಜಕ ಪ್ಯಾಕೇಜ್‍ಗೆ ಉದ್ಯಮ ವಲಯ ಬೇಡಿಕೆ

Update: 2020-04-15 09:49 IST
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ: ದೇಶದಲ್ಲಿ ಕೋವಿಡ್-19 ಸಾಂಕ್ರಾಮಿಕ ತಡೆಯುವ ಉದ್ದೇಶದಿಂದ ಮೇ 3ರವರೆಗೆ ಘೋಷಿಸಿರುವ ದೇಶವ್ಯಾಪಿ ಲಾಕ್‍ಡೌನ್ ಹಿನ್ನೆಲೆಯಲ್ಲಿ ಉದ್ಯಮ ವಲಯ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಇದರ ಪುನಶ್ಚೇತನಕ್ಕೆ 14 ರಿಂದ 16 ಲಕ್ಷ ಕೋಟಿ ರೂಪಾಯಿ ಹಣಕಾಸು ಪ್ಯಾಕೇಜ್ ನೀಡುವಂತೆ ಉದ್ಯಮ ಸಂಸ್ಥೆಗಳು ಸರ್ಕಾರಕ್ಕೆ ಮನವಿ ಮಾಡಿವೆ.

ದೇಶದಲ್ಲಿ ಲಾಕ್‍ಡೌನ್ ಪರಿಣಾಮವಾಗಿ ಆರ್ಥಿಕತೆಗೆ ಪ್ರತಿ ದಿನ ಆಗುತ್ತಿರುವ ನಷ್ಟ 40 ಸಾವಿರ ಕೋಟಿ ರೂಪಾಯಿ ಎಂದು ಫೆಡರೇಷನ್ ಆಫ್ ಇಂಡಿಯನ್ ಚೇಂಬರ್ಸ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ (ಎಫ್‍ಐಸಿಸಿಐ) ಅಂದಾಜಿಸಿದೆ. ಏಪ್ರಿಲ್-ಸೆಪ್ಟೆಂಬರ್ ಅವಧಿಯಲ್ಲಿ ದೇಶದಲ್ಲಿ ಸುಮಾರು ನಾಲ್ಕು ಕೋಟಿ ಉದ್ಯೋಗ ನಷ್ಟದ ಭೀತಿ ಇದೆ ಎಂದೂ ಅಂದಾಜಿಸಿದೆ. ಆದ್ದರಿಂದ ಉದ್ಯಮ ವಲಯಕ್ಕೆ ನೆರವಾಗುವ ದೃಷ್ಟಿಯಿಂದ ಪರಿಹಾರ ಪ್ಯಾಕೇಜ್ ಅನಿವಾರ್ಯ ಎಂದು ಎಫ್‍ಐಸಿಸಿಐ ಅಧ್ಯಕ್ಷೆ ಸಂಗೀತಾ ರೆಡ್ಡಿ ಹೇಳಿದ್ದಾರೆ.

ಮಂಗಳವಾರ ಬೆಳಗ್ಗೆ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ, ಉದ್ಯೋಗಿಗಳನ್ನು ಕೆಲಸದಿಂದ ಕಿತ್ತುಹಾಕದಂತೆ ಉದ್ಯಮಿಗಳಿಗೆ ಮನವಿ ಮಾಡಿಕೊಂಡಿದ್ದರು. ನಿಮ್ಮ ವ್ಯವಹಾರದಲ್ಲಿ ನೆರವಾಗುತ್ತಿರುವ ಜನರ ಬಗ್ಗೆ ಅನುಭೂತಿ ಇರಲಿ ಎಂದು ಕೇಳಿಕೊಂಡಿದ್ದರು. ಆದರೆ ಲಾಕ್‍ಡೌನ್ ಕಾರಣದಿಂದ ಆರ್ಥಿಕ ಚಟುವಟಿಕೆ ಸ್ತಬ್ಧವಾಗಿದ್ದು, ಅಮೆರಿಕ ಮಾದರಿಯಲ್ಲಿ ಭಾರತದಲ್ಲೂ ಆರ್ಥಿಕ ಪ್ಯಾಕೇಜ್ ನೀಡಬೇಕು ಎಂದು ಉದ್ಯಮ ಸಂಸ್ಥೆಗಳು ಅಭಿಪ್ರಾಯಪಟ್ಟಿವೆ.

“ಆರ್ಥಿಕತೆಗೆ ಕನಿಷ್ಠ 14 ಲಕ್ಷ ಕೋಟಿ ರೂಪಾಯಿಗಳ ಆರ್ಥಿಕ ಉತ್ತೇಜನ ಪ್ಯಾಕೇಜ್ ಬೇಕಿದೆ. ಇದರಲ್ಲಿ 2.20 ಲಕ್ಷ ಕೋಟಿ ರೂಪಾಯಿ ರಸಗೊಬ್ಬರ ಬಾಕಿ, ಸಾರ್ವಜನಿಕ ವಲಯದ ಕಂಪನಿಗಳಿಂದ ಇರುವ ಬಾಕಿ, ತೆರಿಗೆ ಮತ್ತು ಮರುಪಾವತಿ ಬಾಕಿ ಸೇರಿದೆ” ಎಂದು ಅಸೋಚಾಮ್ ಅಧ್ಯಕ್ಷ ನಿರಂಜನ್ ಹಿರಾನಂದನಿ ಅಭಿಪ್ರಾಯಪಟ್ಟಿದ್ದಾರೆ. ಪಿಎಚ್‍ಡಿ ಚೇಂಬರ್ಸ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿಸ್ ಅಧ್ಯಕ್ಷ ಡಿ.ಕೆ.ಅಗರ್‍ವಾಲ್ 16 ಲಕ್ಷ ಕೋಟಿ ರೂ. ಗಳ ಪ್ಯಾಕೇಜ್‍ಗೆ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News