ಎನ್‌ಐಟಿಕೆಯಿಂದ ಸೋಂಕು ನಾಶಕ ತಂತ್ರಜ್ಞಾನ ಅಭಿವೃದ್ಧಿ !

Update: 2020-04-15 08:52 GMT

ಮಂಗಳೂರು, ಎ.15: ಕೊರೋನ ವೈರಸ್ ಸೋಂಕು ನಿಯಂತ್ರಣದ ಜತೆಗೆ ನಾಶಕ್ಕೆ ಸಂಬಂಧಿಸಿ ಜಗತ್ತಿನಾದ್ಯಂತ ಸಾಕಷ್ಟು ಸಂಶೋಧನೆಗಳು ನಡೆಯುತ್ತಿವೆ. ಈ ನಡುವೆಯೇ ಸುರತ್ಕಲ್‌ನ ಎನ್‌ಐಟಿಕೆ ಸಂಶೋಧಕರು ‘ಝೀರೋ ಕೊವ್’ ಎಂಬ ಸೋಂಕು ಹರಡುವ ಕ್ರಿಮಿಗಳ ನಾಶಕ ತಂತ್ರಜ್ಞಾನ (ಚೇಂಬರ್) ವನ್ನು ಅಭಿವೃದ್ಧಿ ಪಡಿಸಿದ್ದಾರೆ.

ವೈಯಕ್ತಿಕ ರಕ್ಷಣಾ ಸಾಧನ (ಪಿಪಿಇ) ಕಿಟ್‌ಗಳು, ಶಸ್ತ್ರ ಚಿಕಿತ್ಸೆಯ ಮುಖಗವಸುಗಳು, ತರಕಾರಿಗಳು, ಪ್ಯಾಕ್ ಮಾಡಿದ ಆಹಾರ ಮಾತ್ರವಲ್ಲದೆ ಕರೆನ್ಸಿ ನೋಟುಗಳಲ್ಲಿರುವ ಸೋಂಕು ಹರಡುವ ವೈರಸ್‌ಗಳನ್ನು ಆ ವಸ್ತುಗಳಿಗೆ ಯಾವುದೇ ರೀತಿಯಲ್ಲಿ ತೊಂದರೆ ಆಗದಂತೆ ಎನ್‌ಐಟಿಕೆ ಸಂಶೋಧಕರ ಈ ತಂತ್ರಜ್ಞಾನ ನಾಶಪಡಿಸಲಿದೆಯಂತೆ.

ಎನ್‌ಐಟಿಕೆಯ ರಸಾಯನ ಶಾಸ್ತ್ರ ವಿಭಾಗ ಮುಖ್ಯಸ್ಥ ಡಾ. ಅರುಣ್ ಎಂ. ಇಸ್ಲೂರ್ ಮತ್ತು ಸಂಶೋಧನಾ ಸ್ಕಾಲರ್ ಸೈಯದ್ ಇಬ್ರಾಹೀಂರವರು ಬಳೆಯಾದ ಹಳೆ ರಫ್ರಿಜರೇಟರ್ ಬಳಸಿ ಈ ಚೇಂಬರ್ ಸಿದ್ಧಪಡಿಸಿದ್ದಾರೆ. ಕೋವಿಡ್ 19 ವೈರಸ್ ಸಹಿತ ಈ ಚೇಂಬರ್ ವೈರಸ್ ಗಳ ಮಾಲಿನ್ಯವನ್ನು ನಿಯಂತ್ರಿಸಲಿದೆ. ಮಾತ್ರವಲ್ಲದೆ ಸೋಂಕು ಹರದಂತೆ ತಡೆಯುವ ಸರಳ ವಿಧಾನ ಇದಾಗಿದೆ.

ಮಾರುಕಟ್ಟೆಯಿಂದ ಖರೀದಿಸುವ ವಸ್ತುಗಳು, ಬಾಟಲಿ, ತರಕಾರಿ, ಪುಸ್ತಕ, ಸಿದ್ಧ ಆಹಾರ ವಸ್ತುಗಳು ರೋಗಾಣುಗಳನ್ನು ಹೊಂದಿರುತ್ತವೆ. ಝೀರೋ ಕೊವ್ ವೈರಸ್ ನಾಶಕ ಚೇಂಬರ್‌ನಲ್ಲಿ ವಸ್ತುಗಳನ್ನು 15 ನಿಮಿಷಗಳ ಕಾಲ ಇರಿಸುವ ಮೂಲಕ ವೈರಸ್ ಗಳು ನಾಶಾಗುವುದಲ್ಲದೆ, ಶೇ. 99.9ರಷ್ಟು ಅವುಗಳು ನಿಷ್ಕ್ರಿಯವಾಗುವುದನ್ನು ಖಚಿತಪಡಿಸಬಹುದು ಎನ್ನುತ್ತಾರೆ ಈ ಸಂಶೋಧರು. ಯವಿ-ಸಿ ವಿಕಿರಣವನ್ನು ಈ ತಂತ್ರಜ್ಞಾನದಲ್ಲಿ ಬಳಸಲಾಗಿದ್ದು, ಇದು 254 ನ್ಯಾನೋ ಮೀಟರ್ ತರಂಗಾಂತರ ಹೊಂದಿರುತ್ತದೆ. ಇದು ಮೇಲ್ಮೈಗಳಲ್ಲಿ ಕಂಡು ಬರುವ ಯಾವುದೇ ಸೂಕ್ಷ್ಮ ಜೀವಿಗಳ ನ್ಯೂಕ್ಳಿಯಿಕ್ ಆಮ್ಲವನ್ನು ನಾಶಪಡಿಸುತ್ತದೆ. ಮಾನವ ದೇಹದ ಮೇಲೆ ನೇರ ಯುವಿ-ಸಿ ವಿಕರಿಣ ಹಾನಿಕಾರಕ ಪರಿಣಾಮಗಳನ್ನು ಉಂಟು ಮಾಡುವ ಕಾರಣ ಝಿರೋ- ಕೊವ್ ಚೇಂಬರ್ ಆನ್ ಮಾಡುವಾಗ ಸಂಪೂಣವಾರ್ಗಿ ಮುಚ್ಚಿರಬೇಕು. ಚೇಂಬರ್ ಗೆ ಮೂರು ಅಲ್ಟ್ರಾ ವಯಲೆಟ್ ದೀಪಗಳನ್ನು ಬಳಸಲಾಗಿದ್ದು, ಅದು 11 ವ್ಯಾಟ್  ವಿದ್ಯುತ್ ಉಪಯೋಗಿಸುತ್ತದೆ. ಒಂದೇ ಆಲ್ಟ್ರಾ ವಯಲೆಟ್ ದೀಪವನ್ನು ಬಳಸಿ ತಯಾರಿಸಿದ ಸಣ್ಣ ಚೇಂಬರ್ ಗೆ ಸುಮಾರು 500 ರೂ. ವೆಚ್ಚ. ಈ ಚೇಂಬರ್ ನ್ನು ಲೋಹದಿಂದ ಮಾಡಿದ ಯಾವುದೇ ಬಳಕೆಯಾಗದ ವಸ್ತುಗಳಿಂದ ಮಾಡಬಹುದು ಎಂದು ಸಂಶೋಧರು ತಿಳಿಸಿದ್ದಾರೆ.

ಯುಎಸ್‌ಎ ಹಾಗೂ ಯೂರೋಪ್ ರಾಷ್ಟ್ರಗಳಲ್ಲಿ ಆರೋಗ್ಯ ಸೇವಕರು ರಕ್ಷಾ ಕವಚಗಳನ್ನು ಮರು ಬಳಕೆಗಾಗಿ ಸ್ವಚ್ಚಗೊಳಿಸುವ ವರದಿಗಳನ್ನು ಓದಿದ ಎನ್ಐಟಿಕೆಯ ಈ ಸಂಶೋಧರು ಭಾರತದಲ್ಲಿ ಈ ಸಂಕಷ್ಟ ಪರಿಸ್ಥಿತಿಯಲ್ಲಿ ಸರಳವಾಗಿ ಇದನ್ನು ಎದುರಿಸಲು ಸುಲಭೋಪಾಯವನ್ನು ಕಂಡುಹಿಡಿದಿದ್ದಾರೆ. ವಿಶೇಷವೆಂದರೆ ಇದು ಪ್ರತಿ ಮನೆಗಳಲ್ಲೂ ಕೋವಿಡ್ 19 ಹರಡುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಉಪಯೋಗಿಸಬಹುದಾದ ಸರಳ ವಿಧಾನ ಎಂದು ಸಂಶೋಧರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News