ಪೊಲೀಸ್ ಕಮಿಷನರ್ ರಿಂದ ಪಕ್ಷದ ವಿರುದ್ಧ ತಪ್ಪು ಸೇಡಿನ ಕ್ರಮ: ಎಸ್‌ಡಿಪಿಐ

Update: 2020-04-15 10:58 GMT

ಮಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನಕಾರಿ ಸಂದೇಶಗಳನ್ನು ಹರಡಿದ್ದಾರೆ ಎನ್ನುವ ಆರೋಪದಲ್ಲಿ ಬಂಧಿಸಲಾಗಿರುವ ಇಬ್ಬರು ಆರೋಪಿಗಳಿಗೆ ಎಸ್‌ಡಿಪಿಐ ನಂಟನ್ನು ಕಲ್ಪಿಸಿರುವ ಕಮಿಷನರ್ ಹರ್ಷ ಅವರದ್ದು ಸೇಡಿನ ಕ್ರಮ ಎಂದು ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಅಥಾವುಲ್ಲಾ ಜೋಕಟ್ಟೆ ಆರೋಪಿಸಿದ್ದಾರೆ. ಮತ್ತು ಅರೋಪಿಗಳು ಪಕ್ಷದ ಕಾರ್ಯಕರ್ತರು ಎಂಬ ಪೊಲೀಸ್ ಆಯುಕ್ತರ ವಾದ ಆಧಾರರಹಿತ ಎಂದು ಹೇಳಿದ್ದಾರೆ.

ಕೊರೋನ ಭೀತಿಯ ಹಿನ್ನೆಲೆಯಲ್ಲಿ ಜಾರಿಗೊಳಿಸಲಾಗಿರುವ ಲಾಕ್‌ಡೌನ್‌ನಿಂದ ತತ್ತರಿಸಿರುವ ಜನರಿಗೆ ಜಾತಿ ಭೇದವಿಲ್ಲದೆ ನೆರವಾಗುವ ನಿಟ್ಟಿನಲ್ಲಿ ಎಸ್‌ಡಿಪಿಐ ಕಾರ್ಯಕರ್ತರು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ರೋಗಿಗಳನ್ನು ಆಸ್ಪತ್ರೆಗೆ ಸಾಗಿಸುವುದು, ಅಗತ್ಯ ಔಷಧಗಳ ಪೂರೈಕೆ, ಅರ್ಹರಿಗೆ ಆಹಾರದ ಕಿಟ್ ವಿತರಣೆಯಂತಹ ಕಾರ್ಯಕರ್ತರ ಆಹೋರಾತ್ರಿ ಸೇವೆಗಳು ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದೆ. ಈ ಮಧ್ಯೆ ಪಕ್ಷದ ಕಾರ್ಯಕರ್ತರು ಪ್ರಚೋದನಕಾರಿ ಸಂದೇಶಗಳನ್ನು ಹರಡುತ್ತಿದ್ದಾರೆ ಎಂಬುವುದೇ ಹಾಸ್ಯಾಸ್ಪದ ಎಂದು ಅವರು ತಿಳಿಸಿದ್ದಾರೆ.

"ಕಳೆದ ಡಿಸೆಂಬರ್‌ನಲ್ಲಿ ಮಂಗಳೂರಿನಲ್ಲಿ ನಡೆದ ಗೋಲಿಬಾರ್ ಮತ್ತು ಲಾಠಿಚಾರ್ಜ್ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಡಿಪಿಐ ಸಂತ್ರಸ್ತರ ಪರವಾಗಿ ಧ್ವನಿ ಎತ್ತಿದ್ದಲ್ಲದೆ, ಅವರಿಗೆ ಸಂಪೂರ್ಣ ಕಾನೂನು ನೆರವನ್ನು ನೀಡುವ ಭರವಸೆಯನ್ನು ನೀಡಿತ್ತು. ಇದರಿಂದಾಗಿ ಕಮಿಷನರ್ ಹರ್ಷ ಸೇರಿದಂತೆ ಆರೋಪಿತ ಪೊಲೀಸರು ಕಾನೂನಿನ ಕಟಕಟೆಗೆ ಹತ್ತುವಂತಾಗಿದೆ. ಅದೇ ರೀತಿ ಸಾಮಾಜಿಕ ಮಾಧ್ಯಮಗಳಲ್ಲಿ ಸಂಘಪರಿವಾರದ ಕಾರ್ಯಕರ್ತರು ಮುಸ್ಲಿಮ್ ಸಮುದಾಯದ ವಿರುದ್ಧ ನಿರಂತರವಾಗಿ ದ್ವೇಷ ಹರಡುವ ಮತ್ತು ಸಾಮರಸ್ಯ ಕೆಡಿಸುವ ಸಂದೇಶಗಳನ್ನು ಯಾವುದೇ ಲಗಾಮಿಲ್ಲದೆ ಹರಡುತ್ತಿದ್ದಾರೆ. ಈ ವೇಳೆ ಪೊಲೀಸ್ ಇಲಾಖೆ ಸ್ವಯಂಪ್ರೇರಿತವಾಗಿ ಕೇಸು ದಾಖಲಿಸಬೇಕಾಗಿತ್ತು. ಆದರೆ ಅಂತಹ ಯಾವುದೇ ಕ್ರಮ ಕಂಡುಬಂದಿಲ್ಲ. ಸಮಾಜಘಾತುಕ ಶಕ್ತಿಗಳ ವಿರುದ್ಧ ಇದೀಗ ಎಸ್‌ಡಿಪಿಐ ಕಾರ್ಯಕರ್ತರು ಕೇಸು ದಾಖಲಿಸುತ್ತಿದ್ದು, ಆರೋಪಿಗಳ ವಿರುದ್ಧ‌ ಕೆಲವು ಠಾಣೆಗಳಲ್ಲಿ ಪೋಲೀಸರು ಪ್ರಕರಣ ದಾಖಲಿಸಲು ನಿರಾಕರಿಸುತ್ತಿದ್ದಾರೆ. ಮಾತ್ರವಲ್ಲ ಪ್ರಕರಣ ದಾಖಲಾದ ಕಡೆಗಳಲ್ಲಿ ಯಾವುದೇ ಬಂಧನ ಕಾರ್ಯಾಚರಣೆಗಳೂ ಈವರೆಗೂ ನಡೆದಿಲ್ಲ. ಇದು ಜಿಲ್ಲಾ ಪೊಲೀಸ್ ಇಲಾಖೆಯ ತಾರತಮ್ಯ ನೀತಿಯನ್ನು ಜಗಜ್ಜಾಹೀರುಪಡಿಸಿದೆ ಎಂದು ಅಥಾವುಲ್ಲಾ ಜೋಕಟ್ಟೆ ಆರೋಪಿಸಿದ್ದಾರೆ.

ಈ ಎಲ್ಲಾ ವಿಚಾರಗಳನ್ನು ಗಮನಿಸಿದರೆ ಎಸ್‌ಡಿಪಿಐ ವಿರುದ್ಧ ಸಾರ್ವಜನಿಕವಾಗಿ ತಪ್ಪು ಅಭಿಪ್ರಾಯ ಮೂಡಿಸುವ ಷಡ್ಯಂತ್ರದ ಭಾಗವಾಗಿ ಆರೋಪಿಗಳಿಗೆ ಪಕ್ಷದೊಂದಿಗೆ ಉದ್ದೇಶಪೂರ್ವಕವಾಗಿ ನಂಟು ಕಲ್ಪಿಸಲಾಗಿರುವುದು ಬಹಳ ಸ್ಪಷ್ಟವಾಗುತ್ತದೆ. ಯಾವುದೇ ಒಂದು ಧರ್ಮದ ಭಾವನೆಗಳಿಗೆ ಧಕ್ಕೆ ಉಂಟು ಮಾಡುವ ಕೃತ್ಯವು ಅಕ್ಷಮ್ಯ. ಸಮಾಜದಲ್ಲಿ ಕೋಮು ಸಾಮರಸ್ಯ ಕೆಡಿಸುವ ಪ್ರಯತ್ನವನ್ನು ಯಾವುದೇ  ಪಕ್ಷ,ಜಾತಿ,ಧರ್ಮದ ಜನರು ಮಾಡಿದರೂ ಎಸ್ಡಿಪಿಐ ಎಂದಿಗೂ ಖಂಡಿಸುತ್ತದೆ ಮತ್ತು ಅಂತಹ ವ್ಯಕ್ತಿಗಳ ವಿರುದ್ಧ ‌ಕೈಗೊಳ್ಳುವ ಕಠಿಣ ಕ್ರಮಗಳನ್ನು ಬೆಂಬಲಿಸುತ್ತದೆ. ಇದೇ ವೇಳೆ ಕೊರೋನ ಭೀತಿಯ ಈ ಕಠಿಣ ಸಂದರ್ಭದಲ್ಲಿ ಎಲ್ಲರೂ ಒಂದಾಗಿ ಕೈಜೋಡಿಸಿ ಈ ಮಹಾಮಾರಿಯ ವಿರುದ್ಧ ಹೋರಾಟ ನಡೆಸಬೇಕು ಎಂದು ಅಥಾವುಲ್ಲಾ ಜೋಕಟ್ಟೆ ವಿನಂತಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News