×
Ad

ವೆಂಟಿಲೇಟರ್ ಸಾಮರ್ಥ್ಯ ದ್ವಿಗುಣ: ಸುರತ್ಕಲ್ ಎನ್‌ಐಟಿಕೆ ಸಂಶೋಧಕರ ಸಾಧನೆ

Update: 2020-04-15 18:36 IST

ಮಂಗಳೂರು, ಎ. 15: ಕೊರೋನ ವೈರಸ್ ಸೋಂಕಿತರಿಗೆ ತೀವ್ರ ತೆರನಾದ ಉಸಿರಾಟದ ತೊಂದರೆ ಕಾಣಿಸಿಕೊಂಡಾಗ ವೆಂಟಿಲೇಟರ್‌ಗಳು ಅತ್ಯಗತ್ಯವಾಗಿರುತ್ತವೆ. ಇಂತಹ ಪರಿಸ್ಥಿತಿಯನ್ನು ಎದುರಿಸುವ ನಿಟ್ಟಿನಲ್ಲಿ ಸಿದ್ಧತೆ ನಡೆಸುತ್ತಿರುವ ಸುರತ್ಕಲ್‌ನ ಎನ್‌ಐಟಿಕೆಯ ಸಂಶೋಧಕರ ತಂಡ ಈಗಾಗಲೇ ವೆಂಟಿಲೇಟರನ್ನು ಒಂದಕ್ಕಿಂತ ಹೆಚ್ಚು ರೋಗಿಗಳಿಗೆ ಬಳಸುವ ನಿಟ್ಟಿನಲ್ಲಿ ತಂತ್ರಜ್ಞಾನವನ್ನು ಸಂಶೋಧಿಸಿದೆ.

ಎನ್‌ಐಟಿಕೆಯ ಸೆಂಟರ್ ಫಾರ್ ಸಿಸ್ಟಮ್ಸ್ ಡಿಸೈನ್ (ಸಿಎಸ್‌ಡಿ) ವಿಭಾಗದ ಪ್ರೊ. ಕೆ.ವಿ. ಗಂಗಾಧರನ್ ಹಾಗೂ ಡಾ. ಪ್ರಥ್ವಿರಾಜ್ ಯು. ಅವರು 3ಡಿ ಮುದ್ರಿತ ತಂತ್ರಜ್ಞಾನದ ಮೂಲಕ ವೆಂಟಿಲೇಟರ್ ಸಾಮರ್ಥ್ಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸಂಶೋಧನೆ ನಡೆಸಿದ್ದಾರೆ. ಇವರಿಬ್ಬರೂ ರಾಜ್ಯ ಹಾಗೂ ರಾಷ್ಟ್ರ ಮಟ್ಟದ ತಂಡದೊಂದಿಗೆ ಕೆಲಸ ಮಾಡುವ ಮೂಲಕ ವೆಂಟಿಲೇಟರ್ ಉತ್ಪಾದನೆಯನ್ನು ದ್ವಿಗುಣಗೊಳಿಸಲು ಉದ್ದೇಶಿಸಿದ್ದಾರೆ. ಈಗಾಗಲೇ 10 ವಿವಿಧ ಆಸ್ಪ್ರತ್ರೆಗಳಲ್ಲಿ ಸ್ಪ್ಲಿಟ್ ವೆಂಟಿಲೇಟರ್ ಅಳವಡಿಸಿ ಮೊದಲ ಹಂತದ ಪರೀಕ್ಷೆ ನಡೆಸಲಾಗಿದೆ. ದೇಶದಲ್ಲಿ 20 ಕಡೆ ಸ್ಪ್ಲಿಟ್ ವೆಂಟಿಲೇಟರ್ ಉತ್ಪಾದನೆ ನಡೆಯುತ್ತಿದೆ.

3ಡಿ ಮುದ್ರಿತ ಘಟಕಗಳ ಮೂಲಕ ಸರ್ಕ್ಯೂಟ್ ಸ್ಲಿಟರ್‌ಗಳು ಹಾಗೂ ಏಕಕಾಲದಲ್ಲಿ ಒಂದಕ್ಕಿಂತ ಗರಿಷ್ಠ ನಾಲ್ಕು ರೋಗಿಗಳ ಶ್ವಾಸಕೋಶಕ್ಕೆ ಆಮ್ಲಜನಕ ಪೂರೈಸಲು ವೆಂಟಿಲೇಟರ್‌ಗಳಿಗೆ ಹರಿವಿನ ನಿಯಂತ್ರಕಗಳನ್ನು ತಯಾರಿಸಲಾಗಿದೆ.

ಇದಲ್ಲದೆ ವೈದ್ಯಕೀಯ ಸಿಬ್ಬಂದಿ, ಪೊಲೀಸರು, ಭದ್ರತಾ ಸಿಬ್ಬಂದಿಗೆ ಬೇಕಾದ ಎನ್ 95 ಮಾಸ್ಕ್ (ದಿನಕ್ಕೆ 1000), ಫೇಸ್ ಶೀಲ್ಡ್ (ದಿನಕ್ಕೆ 300) ತಯಾರಿಸಲಾಗುತ್ತಿದ್ದು, ಬೆಂಗಳೂರಿನಲ್ಲಿ ಪರ್ಸನಲ್ ಪ್ರೊಟೆಕ್ಷನ್ ಇಕ್ವಿಪ್‌ಮೆಂಟ್ (ಪಿಪಿಇ) ಉತ್ಪಾದಿಸಿ ಆಸ್ಪತ್ರೆಗಳಿಗೆ ಪೂರೈಸಲಾಗುತ್ತಿದೆ.

ತುರ್ತು ಸಂದರ್ಭದಲ್ಲಿ ವೆಂಟಿಲೇಟರ್ ಬೇರೆಡೆಯಿಂದ ತರಿಸುವುದು ಕಷ್ಟಕರ. ಹೀಗಾಗಿ ಸ್ಪ್ಲಿಟ್ ವೆಂಟಿಲೇಟರ್‌ನಿಂದ ಹೆಚ್ಚು ಜನರಿಗೆ ಚಿಕಿತ್ಸೆ ಕೊಡಿಸಲು ಸಾಧ್ಯ ಎನ್ನುತ್ತಾರೆ ಪ್ರೊ. ಕೆ.ವಿ. ಗಂಗಾಧರನ್.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News