×
Ad

ಮಂಗಳೂರು: 2,000 ರೂ. ಸಿಗುವ ವದಂತಿ; ಬ್ಯಾಂಕ್ ಪಾಸ್‌ಬುಕ್‌ನೊಂದಿಗೆ ಗುಂಪು ಸೇರಿದ ಕೂಲಿ ಕಾರ್ಮಿಕರು

Update: 2020-04-15 18:51 IST

ಮಂಗಳೂರು, ಎ.15: ಕೂಲಿ ಕಾರ್ಮಿಕರಿಗೆ ತಲಾ 2 ಸಾವಿರ ರೂ. ಲಭಿಸಲಿದೆ ಎಂದು ವದಂತಿಯನ್ನು ನಂಬಿದ ನೂರಾರು ಕಾರ್ಮಿಕರು ಖಾಸಗಿ ಕಟ್ಟಡವೊಂದರ ಮುಂದೆ ಸಾಲುಗಟ್ಟಿ ನಿಂತ ಘಟನೆ ಬುಧವಾರ ಕೂಳೂರಿನಲ್ಲಿ ನಡೆದಿದೆ. ಈ ಸಂದರ್ಭ ‘ಸಾಮಾಜಿಕ ಅಂತರ’ ಕಾಯ್ದುಕೊಳ್ಳದೆ ಕಾರ್ಮಿಕರು ಲಾಕ್‌ಡೌನ್ ಉಲ್ಲಂಘಿಸಿದ್ದಾರೆ ಎಂಬ ಆರೋಪವೂ ಕೇಳಿ ಬಂದಿದೆ.

ಕೂಳೂರಿನ ಖಾಸಗಿ ಕಟ್ಟಡದಲ್ಲಿ ಕೂಲಿ ಕಾರ್ಮಿಕರ ಮಾಹಿತಿ ಪಡೆದು ಹಣವನ್ನು ಅವರವರ ಬ್ಯಾಂಕ್ ಖಾತೆಗಳಿಗೆ ಪಾವತಿಸಲಾಗುತ್ತದೆ ಎಂಬ ತಪ್ಪು ಮಾಹಿತಿಯ ಮೇರೆಗೆ ಸುಮಾರು 750ಕ್ಕೂ ಅಧಿಕ ಕಾರ್ಮಿಕರು ಸರದಿ ಸಾಲಿನಲ್ಲಿ ನಿಂತಿದ್ದರು. ಇದನ್ನು ಕಂಡ ಸ್ಥಳೀಯರು ಅಚ್ಚರಿಗೊಂಡು ‘ಯಾತಕ್ಕಾಗಿ ನಿಂತಿದ್ದೀರಿ? ಎಂದು ಕೇಳಿದಾಗ ‘ಬ್ಯಾಂಕ್ ಖಾತೆಗೆ 2,000 ರೂ. ಹಾಕಲಾಗುತ್ತದೆಯಂತೆ. ಅದರಂತೆ ನಾವೆಲ್ಲಾ ಬಂದು ನಿಂತಿದ್ದೇವೆ' ಎಂದು ಸರತಿ ಸಾಲಿನಲ್ಲಿ ನಿಂತವರು ಪ್ರತಿಕ್ರಿಯಿಸಿದ್ದಾರೆ. ‘ಯಾರು ಹೇಳಿದ್ದು ಎಂದು ಕೇಳಿದಾಗ ಯಾರಿಂದಲೂ ಸ್ಪಷ್ಟ ಉತ್ತರ ಇಲ್ಲ.

ಕಾರ್ಮಿಕರು ಬ್ಯಾಂಕ್ ಪಾಸ್ ಪುಸ್ತಕ, ಆಧಾರ್ ಕಾರ್ಡ್‌ಗಳನ್ನು ಹಿಡಿದುಕೊಂಡು ಅಪರಾಹ್ನ 3:30ರವರೆಗೆ ಜಮಾಯಿಸಿದ್ದರು. ಬಳಿಕ ಕಾರ್ಮಿಕ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದರೂ ಸ್ಪಷ್ಟ ಮಾಹಿತಿ ಸಿಗಲಿಲ್ಲ. ಈ ಮಧ್ಯೆ ಕಾರ್ಮಿಕರ ಬಗ್ಗೆ ಮಾಹಿತಿ ಪಡೆಯುತ್ತಿದ್ದವರನ್ನೆಲಾದ ಯುವಕರು ಕೂಡ ಜಾಗ ಖಾಲಿ ಮಾಡಿದ್ದಾರೆ. ನಂತರ ಕಾರ್ಮಿಕರು ಕೂಡ ಅಲ್ಲಿಂದ ಹೊರಟು ಹೋಗಿದ್ದಾರೆ ಎನ್ನಲಾಗಿದೆ.

ಈ ಬಗ್ಗೆ ಪೊಲೀಸ್ ಇಲಾಖೆಗೆ, ಸ್ಥಳೀಯ ಕಾರ್ಪೊರೇಟರ್, ಮನಪಾ ಆಯುಕ್ತರು ಹೀಗೆ ಯಾರಿಗೂ ಸರಿಯಾದ ಮಾಹಿತಿ ಇರಲಿಲ್ಲ. ಒಟ್ಟಿನಲ್ಲಿ ಯಾರೋ ಕಾರ್ಮಿಕರನ್ನು ಸುಡುಬಿಸಿಲಿನಲ್ಲಿ ನಿಲ್ಲಿಸಿ ಲಾಕ್‌ಡೌನ್ ಉಲ್ಲಂಘಿಸುವಂತೆ ಮಾಡಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News