ಉಡುಪಿ: ಬುಧವಾರ ಇನ್ನೂ 106 ಮಂದಿಯ ಮಾದರಿ ಪರೀಕ್ಷೆಗೆ
ಉಡುಪಿ, ಎ.15: ಶಂಕಿತ ನೋವೆಲ್ ಕೊರೋನ ವೈರಸ್ (ಕೋವಿಡ್-19) ಸೋಂಕಿನ ಪರೀಕ್ಷೆಗಾಗಿ ಬುಧವಾರ ಇನ್ನೂ 106 ಮಂದಿಯ ಗಂಟಲು ದ್ರವದ ಮಾದರಿಯನ್ನು ಪರೀಕ್ಷೆಗಾಗಿ ಕಳುಹಿಸಲಾಗಿದೆ. ಇವುಗಳಲ್ಲಿ 83 ಮಂದಿ ಕೊರೋನ ಶಂಕಿತರ ಸಂಪರ್ಕಕ್ಕೆ ಬಂದವರಾದರೆ, 16 ಮಂದಿ ಉಸಿರಾಟದ ತೊಂದರೆಗಾಗಿ ಹಾಗೂ ಇಬ್ಬರು ಶೀತಜ್ವರದ ಕಾರಣಕ್ಕಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಐವರು ನಿಝಾಮುದ್ದೀನ್ ಹಾಟ್‌ಸ್ಪಾಟ್‌ನಿಂದ ಮರಳಿದವರು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸುಧೀರ್‌ಚಂದ್ರ ಸೂಡ ತಿಳಿಸಿದ್ದಾರೆ.
ನಿನ್ನೆ ಕಳುಹಿಸಿದ 108 ಮಂದಿಯ ಸ್ಯಾಂಪಲ್‌ನೊಂದಿಗೆ ಬಾಕಿ ಇದ್ದ 17 ಸೇರಿ ಒಟ್ಟಾರೆಯಾಗಿ ಬರಬೇಕಾಗಿದ್ದ 125 ಸ್ಯಾಂಪಲ್‌ಗಳ ವರದಿಯಲ್ಲಿ ಇಂದು ಒಂದೂ ಬಂದಿಲ್ಲ. ಹೀಗಾಗಿ ಈ 125 ಸ್ಯಾಂಪಲ್‌ಗಳೊಂದಿಗೆ ಇಂದು ಕಳುಹಿಸಿದ 106 ಸ್ಯಾಂಪಲ್ ಸೇರಿ ಒಟ್ಟು 231 ಸ್ಯಾಂಪಲ್‌ಗಳ ವರದಿ ಬರಲು ಬಾಕಿ ಇವೆ ಎಂದು ಡಾ.ಸೂಡ ತಿಳಿಸಿದರು.
ಬುಧವಾರ ಒಟ್ಟು ಎಂಟು ಮಂದಿ ಹೊಸದಾಗಿ ಐಸೋಲೇಷನ್ ವಾರ್ಡಿಗೆ ಸೇರ್ಪಡೆಗೊಂಡಿದ್ದಾರೆ. ಇವರೆಲ್ಲರೂ ಪುರುಷರಾಗಿದ್ದಾರೆ. ಇವರಲ್ಲಿ ಆರು ಮಂದಿ ತೀವ್ರ ಉಸಿರಾಟದ ತೊಂದರೆಗಾಗಿ ಬಂದಿದ್ದರೆ, ಒಬ್ಬರು ಶಂಕಿತ ಕೋವಿಡ್ ಸೋಂಕಿನ ಪರೀಕ್ಷೆಗೆ ಇನ್ನೊಬ್ಬರು ಶೀತಜ್ವರದ ಬಾಧೆಗಾಗಿ ಬಂದಿದ್ದಾರೆ.
ಇಂದು ಇಬ್ಬರು ಐಸೋಲೇಷನ್ ವಾರ್ಡಿನಿಂದ ಬಿಡುಗಡೆಗೊಂಡಿದ್ದರೆ, ಒಟ್ಟು 44 ಮಂದಿ ಇನ್ನೂ ವಾರ್ಡಿನಲ್ಲಿ ನಿಗಾದಲ್ಲಿದ್ದಾರೆ. ಈವರೆಗೆ 196 ಮಂದಿ ವಾರ್ಡಿನಿಂದ ಬಿಡುಗಡೆಗೊಂಡಂತಾಗಿದೆ ಎಂದೂ ಡಿಎಚ್‌ಓ ತಿಳಿಸಿದರು.
ಜಿಲ್ಲೆಯಿಂದ ಇದುವರೆಗೆ ಒಟ್ಟು 643 ಮಂದಿಯ ಸ್ಯಾಂಪಲ್‌ಗಳನ್ನು ಸೋಂಕಿನ ಪರೀಕ್ಷೆಗಾಗಿ ಪಡೆಯಲಾಗಿದೆ. ಇವುಗಳಲ್ಲಿ ಇಂದಿನವರೆಗೆ 412 ಮಂದಿಯ ವರದಿ ಬಂದಿವೆ. ಇವುಗಳಲ್ಲಿ 409 ನೆಗೆಟಿವ್ ಆಗಿದ್ದರೆ, ಮೂವರದ್ದು ಮಾತ್ರ ಪಾಸಿಟಿವ್ ಆಗಿತ್ತು. ಇನ್ನು 231 ಸ್ಯಾಂಪಲ್‌ಗಳ ವರದಿ ಬಲು ಬಾಕಿ ಇವೆ ಎಂದವರು ತಿಳಿಸಿದರು.
ಜಿಲ್ಲೆಯಲ್ಲಿ ಉಸಿರಾಟದ ತೊಂದರೆ, ಪ್ರಯಾಣದಿಂದ ಬಂದವರು ಹಾಗೂ ಕೋವಿಡ್ ಶಂಕಿತರ ಸಂಪರ್ಕಕ್ಕೆ ಬಂದವರು ಸೇರಿ ಬುಧವಾರ ಏಳು ಮಂದಿ ಹೊಸದಾಗಿ ತಪಾಸಣೆಗಾಗಿ ನೋಂದಣಿಗೊಂಡಿದ್ದಾರೆ. ಈ ಮೂಲಕ ಇದುವರೆಗೆ ಜಿಲ್ಲೆಯಲ್ಲಿ ಒಟ್ಟು 2147 ಮಂದಿ ತಪಾಸಣೆಗಾಗಿ ನೋಂದಣಿ ಮಾಡಿಕೊಂಡಂತಾಗಿದೆ. ಇವರಲ್ಲಿ 1371 (ಇಂದು 149) ಮಂದಿ 28 ದಿನಗಳ ನಿಗಾ ಪೂರೈಸಿದ್ದರೆ, 2016 (42) ಮಂದಿ 14 ದಿನಗಳ ನಿಗಾವನ್ನು ಪೂರ್ಣಗೊಳಿಸಿದ್ದಾರೆ. ಒಟ್ಟು 56 ಮಂದಿ ಇನ್ನೂ ಹೋಮ್ ಕ್ವಾರಂಟೈನ್ ಹಾಗೂ 31 ಮಂದಿ ಆಸ್ಪತ್ರೆ ಕ್ವಾರಂಟೈನ್‌ನಲ್ಲಿದ್ದಾರೆ. ಇಂದು 7 ಮಂದಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ ಎಂದು ಡಾ. ಸುಧೀರ್‌ಚಂದ್ರ ಸೂಡ ತಿಳಿಸಿದರು.
ಮನೆಗಳಿಗೆ ಭೇಟಿ: ಕೋವಿಡ್-19ರ ಸೋಂಕಿನ ಕುರಿತಂತೆ ಜನರಿಗೆ ಮಾಹಿತಿಗಳನ್ನು ನೀಡಿ ಜಾಗೃತಿ ಮೂಡಿಸುತ್ತಿರುವ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆರೋಗ್ಯ ಕಾರ್ಯಕರ್ತೆಯರು, ಸಹಾಯಕಿಯರು ಹಾಗೂ ಆಶಾ ಕಾರ್ಯಕರ್ತೆಯರು ಇಂದು ಉಡುಪಿ ಅಜ್ಜರಕಾಡಿನಲ್ಲಿರುವ ಜಿಲ್ಲಾಧಿಕಾರಿಯವರ ಮನೆಗೆ ಭೇಟಿ ನೀಡಿದರು.
ಆಶಾ ಕಾರ್ಯಕರ್ತೆಯರು ಹಾಗೂ ಆರೋಗ್ಯ ಕಾರ್ಯಕರ್ತೆಯರು ಇಂದು ಗ್ರಾಮದ ಮನೆ ಮನೆಗೆ ತೆರಳಿ ಕೋವಿಡ್-19ರ ಕುರಿತು ಕರಪತ್ರಗಳನ್ನು ಹಂಚಿ, ರೋಗದ ಕುರಿತು ಮಾಹಿತಿಗಳನ್ನು ಹಂಚಿ, ಕಡ್ಡಾಯವಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಕುರಿತು ಸಾರ್ವಜನಿಕರಲ್ಲಿ ಜಾಗೃತಿಯನ್ನು ಮೂಡಿಸಿದರು. ಅಲ್ಲದೇ ಹೋಮ್ ಕ್ವಾರಂಟೈನ್‌ನಲ್ಲಿರುವವರ ಮನೆಗೆ ಭೇಟಿ ನೀಡಿ ಅವರ ಆರೋಗ್ಯ ಪರೀಕ್ಷೆ ನಡೆಸಿದರು.
ಇಂದು ಕಿರಿಮಂಜೇಶ್ವರ, ಬೆಳ್ಮಣ್ಣು, ಸಾಸ್ತಾನ, ಸಿದ್ಧಾಪುರ, ಇರ್ವತ್ತೂರು, ಪೆರ್ಣಂಕಿಲ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಬ್ರಹ್ಮಾವರ ಸಮುದಾಯ ಆರೋಗ್ಯ ಕೇಂದ್ರದ ಕಾರ್ಯಕರ್ತೆಯರು ಮತ್ತು ಆಶಾ ಕಾರ್ಯಕರ್ತೆಯರು ಮನೆ ಮನೆಗೆ ಭೇಟಿ ನೀಡಿದರು.