ಹಿರಿಯ ಚಿತ್ರ ಕಲಾವಿದ ಕೆ.ಎಲ್.ಭಟ್ ನಿಧನ
Update: 2020-04-15 22:38 IST
ಉಡುಪಿ, ಎ.15: ಜಿಲ್ಲೆಯ ಹಿರಿಯ ಚಿತ್ರ ಕಲಾವಿದ ಹಾಗೂ ಉಡುಪಿ ಚಿತ್ರಕಲಾ ಮಂದಿರದ ನಿವೃತ್ತ ಪ್ರಾಂಶುಪಾಲರಾದ ಕೆ.ಎಲ್.ಭಟ್ ಅಲ್ಪಕಾಲದ ಅಸೌಖ್ಯದಿಂದ ಬುಧವಾರ ಅಷರಾಹ್ನ ಕೆಮ್ಮಣ್ಣುನ ತಮ್ಮ ಸ್ವಗೃಹದಲ್ಲಿ ನಿಧನರಾದರು. ಅವರಿಗೆ 79 ವರ್ಷ ಪ್ರಾಯವಾಗಿತ್ತು. ಅವರು ಪತ್ನಿ, ಇಬ್ಬರು ಪುತ್ರರು ಹಾಗೂ ಪುತ್ರಿಯನ್ನು ಅಗಲಿದ್ದಾರೆ.
ಮುಂಬೈನ ವಿಶ್ವ ಪ್ರಸಿದ್ಧ ಜೆ.ಜೆ.ಸ್ಕೂಲ್ ಆಫ್ ಆರ್ಟ್ಸ್‌ನಲ್ಲಿ ದೃಶ್ಯ ಕಲೆಯಲ್ಲಿ ಡಿಪ್ಲೊಮಾ ಪದವಿ ಪಡೆದ ಕೆ.ಎಲ್.ಭಟ್ ಬಳಿಕ ಕಟಪಾಡಿಯ ಚಿತ್ರಕಲಾ ಮಂದಿರದಲ್ಲಿ ಶಿಕ್ಷಕರಾಗಿ ವೃತ್ತಿ ಜೀವನ ಪ್ರಾರಂಭಿಸಿದ್ದರು.. ಇದೇ ಸಂಸ್ಥೆಯಲ್ಲಿ ಮೂರು ದಶಕಗಳಿಗೂ ಅಧಿಕ ಸೇವೆ ಸಲ್ಲಿಸಿದ ಅವರು ಪ್ರಾಂಶುಪಾಲರಾಗಿ ಸೇವಾ ನಿವೃತ್ತರಾದರು.
ನಾಡಿನ ಪ್ರಮುಖ ಚಿತ್ರಕಲಾವಿದರಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದ ಇವರಿಗೆ ರಾಜ್ಯ ಲಲಿತಕಲಾ ಅಕಾಡೆಮಿ ಪ್ರಶಸ್ತಿ ಹಾಗೂ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ದೊರಕಿತ್ತು.