ತೇಲ್ತುಂಬ್ಡೆ, ನವ್ಲಾಖ ಬಂಧನಕ್ಕೆ ಎಚ್‌ಆರ್‌ಡಬ್ಲ್ಯು ಖಂಡನೆ

Update: 2020-04-15 17:33 GMT

ಹೊಸದಿಲ್ಲಿ, ಎ. 15: ಮಾನವಹಕ್ಕುಗಳ ಹೋರಾಟಗಾರರಾದ ಆನಂದ್ ತೇಲ್ತುಂಬ್ಡೆ ಮತ್ತು ಗೌತಮ್ ನವ್ಲಾಖ ಅವರ ಬಂಧನವನ್ನು ಅಂತರರಾಷ್ಟ್ರೀಯ ಮಾನವಹಕ್ಕುಗಳ ಸಂಘಟನೆ ಹ್ಯೂಮನ್ ರೈಟ್ಸ್ ವಾಚ್ (ಎಚ್‌ಆರ್‌ಡಬ್ಲು) ಖಂಡಿಸಿದೆ.

‘‘ಸರಕಾರವನ್ನು ಟೀಕಿಸುವವರು ಅಥವಾ ಅನ್ಯಾಯದ ವಿರುದ್ಧ ಧ್ವನಿಯೆತ್ತುವವರ ವಿರುದ್ಧ ಸರಕಾರವು ಭಯೋತ್ಪಾದನೆ ನಿಗ್ರಹ ಕಾನೂನುಗಳನ್ನು ಬಳಸುತ್ತಿದೆ ಎಂದು ಬುಧವಾರ ಬಿಡುಗಡೆ ಮಾಡಿದ ಹೇಳಿಕೆಯೊಂದರಲ್ಲಿ ಅದು ಆರೋಪಿಸಿದೆ.

‘‘2018ರ ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ಕಾನೂನುಬಾಹಿರವಾಗಿ ಬಂಧಿಸಲ್ಪಟ್ಟಿರುವ’’ ತೇಲ್ತುಂಬ್ಡೆ, ನವ್ಲಾಖ ಮತ್ತು ಇತರ ಒಂಬತ್ತು ಜನರನ್ನು ತಕ್ಷಣ ಬಿಡುಗಡೆ ಮಾಡುವಂತೆ ಅದು ಸರಕಾರವನ್ನು ಒತ್ತಾಯಿಸಿದೆ.

ಈ ಹೋರಾಟಗಾರರ ವಿರುದ್ಧ ದಾಖಲಾಗಿರುವ ಪ್ರಕರಣಗಳಲ್ಲಿ ಪೊಲೀಸರು ದುರ್ಬಲ ಪುರಾವೆಗಳನ್ನು ಉಲ್ಲೇಖಿಸಿದ್ದಾರೆ ಹಾಗೂ ಅವರ ವಿರುದ್ಧದ ತನಿಖೆಗಳು ರಾಜಕೀಯ ಪ್ರೇರಿತ ಎಂಬ ಭಾವನೆಗಳನ್ನು ಅವರ ವಿರುದ್ಧದ ಆರೋಪಗಳೇ ಹೇಳುತ್ತಿವೆ’’ ಎಂದು ಅಂತರ್‌ರಾಷ್ಟ್ರೀಯ ಮಾನವಹಕ್ಕುಗಳ ಸಂಸ್ಥೆಯು ಹೇಳಿದೆ.

ಪ್ರಕರಣದಲ್ಲಿ ಬಂಧಿಸಲ್ಪಟ್ಟಿರುವ ಹೋರಾಟಗಾರರಿಗೂ ಭೀಮಾ ಕೋರೆಗಾಂವ್ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಸಮಾರಂಭದ ಸಂಘಟಕರಾದ ಇಬ್ಬರು ನಿವೃತ್ತ ನ್ಯಾಯಾಧೀಶರು ಹೇಳಿದ್ದಾರೆ ಎಂದು ಹೇಳಿಕೆ ತಿಳಿಸಿದೆ.

 ‘ವೈರ್’ ಸಂಪಾದಕರ ವಿರುದ್ಧ ಮೊಕದ್ದಮೆಗೆ ಖಂಡನೆ

‘ದ ವೈರ್’ ಸುದ್ದಿ ವೆಬ್‌ಸೈಟ್‌ನ ಸಂಪಾದಕ ಸಿದ್ಧಾರ್ಥ ವರದರಾಜನ್ ವಿರುದ್ಧ ಉತ್ತರಪ್ರದೇಶ ಪೊಲೀಸರು ಮೊಕದ್ದಮೆ ದಾಖಲಿಸಿರುವುದನ್ನೂ ಹ್ಯೂಮನ್ ರೈಟ್ಸ್ ವಾಚ್ ಖಂಡಿಸಿದೆ.

‘‘ಭಿನ್ನಮತಕ್ಕಾಗಿ ಭಾರತದ ಪೊಲೀಸರು ಹೆಚ್ಚೆಚ್ಚು ಜನರನ್ನು ಬಂಧಿಸುತ್ತಿದ್ದಾರೆ. ಹಲವು ಪ್ರಕರಣಗಳಲ್ಲಿ, ಸರಕಾರದ ಟೀಕಾಕಾರರು ಮತ್ತು ಸಾಮಾಜಿಕ ಹೋರಾಟಗಾರರ ವಿರುದ್ಧ ರಾಷ್ಟ್ರದ್ರೋಹ ಅಥವಾ ಭಯೋತ್ಪಾದನೆ ನಿಗ್ರಹ ಪ್ರಕರಣಗಳನ್ನು ಹಾಕಿದ್ದಾರೆ’’ ಎಂದು ಅದು ಹೇಳಿದೆ.

ಸಿಎಎ ಹೋರಾಟಗಾರರ ವಿರುದ್ಧ ದೇಶದ್ರೋಹ ಮೊಕದ್ದಮೆಗೂ ಖಂಡನೆ

ಇದೇ ಸಂದರ್ಭದಲ್ಲಿ, ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ)ಯ ವಿರುದ್ಧ ಹೋರಾಟ ನಡೆಸಿದವರ ಬಂಧನವನ್ನೂ ಎಚ್‌ಆರ್‌ಡಬ್ಲು ಖಂಡಿಸಿದೆ. ಬಂಧನಕ್ಕೊಳಗಾದ ಹೆಚ್ಚಿನವರ ವಿರುದ್ಧ ದೇಶದ್ರೋಹ ಮೊಕದ್ದಮೆ ದಾಖಲಿಸಲಾಗಿದೆ.

 ಸೈದ್ಧಾಂತಿಕ ಬೆಂಬಲ ನೀಡುವುದನ್ನು ಹಿಂಸಾಚಾರದಲ್ಲಿ ಶಾಮೀಲಾತಿ ಎಂಬುದಾಗಿ ಭಾವಿಸಬಾರದು ಎಂದು ಸುಪ್ರೀಂ ಕೋರ್ಟ್ ಹೇಳಿದೆ ಎಂದು ಅದು ತಿಳಿಸಿದೆ.

‘‘ಅವ್ಯವಸ್ಥೆ ಅಥವಾ ಹಿಂಸಾಚಾರವನ್ನು ಪ್ರಚೋದಿಸಿದರೆ ಅಥವಾ ಪ್ರಚೋದಿಸುವಂತಿದ್ದರೆ ಮಾತ್ರ ಅಂಥ ಭಾಷಣ ಅಥವಾ ಕ್ರಿಯೆ ರಾಷ್ಟ್ರದ್ರೋಹ ಆಗುತ್ತದೆ ಎಂದು ನ್ಯಾಯಾಲಯಗಳು ಪದೇ ಪದೇ ಹೇಳಿವೆ. ರಾಷ್ಟ್ರದ್ರೋಹದ ವರ್ಗಕ್ಕೆ ಸೇರದ ಪ್ರಕರಣಗಳಲ್ಲಿಯೂ ವಿವಿಧ ರಾಜ್ಯ ಸರಕಾರಗಳು ಜನರ ವಿರುದ್ಧ ದೇಶದ್ರೋಹದ ಪ್ರಕರಣಗಳನ್ನು ದಾಖಲಿಸುತ್ತಿವೆ’’ ಎಂದು ಅದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News