ಗೂಗಲ್‌ನಿಂದ ಪತ್ರಿಕೋದ್ಯಮ ಪರಿಹಾರ ನಿಧಿ ಸ್ಥಾಪನೆ!
ವಾಷಿಂಗ್ಟನ್, ಎ.16: ಕೊರೋನ ವೈರಸ್ ಸಾಂಕ್ರಾಮಿಕದಿಂದಾಗಿ ಕಾರ್ಯನಿರ್ವಹಣೆಗೆ ಹೆಣಗಾಡುತ್ತಿರುವ ಸ್ಥಳೀಯ ಸುದ್ದಿಸಂಸ್ಥೆಗಳಿಗೆ ನೆರವಾಗುವ ನಿಟ್ಟಿನಲ್ಲಿ ತುರ್ತು ನಿಧಿಯೊಂದನ್ನು ಸ್ಥಾಪಿಸಿರುವುದಾಗಿ ಗೂಗಲ್ ಪ್ರಕಟಿಸಿದೆ.
ಈ ಇಂಟರ್‌ನೆಟ್ ಸಂಸ್ಥೆ ನಿರ್ದಿಷ್ಟವಾಗಿ ನಿಧಿಯ ಮೊತ್ತವನ್ನು ಪ್ರಕಟಿಸಿಲ್ಲವಾದರೂ, ಅತಿ ಸಣ್ಣ ಪತ್ರಿಕಾ ಸಂಸ್ಥೆಗಳ ಕಾರ್ಯನಿರ್ವಹಣೆಗೆ ಕೆಲವು ಸಾವಿರ ಡಾಲರ್‌ಗಳನ್ನು ನೀಡುವುದಾಗಿ ಹಾಗೂ ದೊಡ್ಡ ಸಂಸ್ಥೆಗಳಿಗೆ ಹಲವು ಸಾವಿರ ಡಾಲರ್‌ಗಳನ್ನು ನೀಡುವುದಾಗಿ ಸ್ಪಷ್ಟಪಡಿಸಿದೆ.
ಜಾಗತಿಕ ಗ್ರಾಹಕ ಲಾಕ್‌ಡೌನ್‌ನಿಂದಾಗಿ ಮಾಧ್ಯಮ ಕ್ಷೇತ್ರದ ಆದಾಯಕ್ಕೆ ತೀವ್ರ ಹೊಡೆತ ಬಿದ್ದಿರುವ ಹಿನ್ನೆಲೆಯಲ್ಲಿ ಮತ್ತು ಜಾಹೀರಾತು ಆದಾಯ ಸ್ಥಗಿತಗೊಂಡಿರುವ ಹಿನ್ನೆಲೆಯಲ್ಲಿ ಪತ್ರಿಕಾ ಸಂಸ್ಥೆಗಳಿಗೆ ನೆರವಾಗಲು ಗೂಗಲ್ ಮುಂದಾಗಿದೆ.
ಸ್ಥಳೀಯ ಜನತೆ ಹಾಗೂ ಸಮುದಾಯಗಳ ಸಂಪರ್ಕವನ್ನು ಉಳಿಸುವ ನಿಟ್ಟಿನಲ್ಲಿ ಸ್ಥಳೀಯ ಸುದ್ದಿಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದು ಗೂಗಲ್ ನ್ಯೂಸ್‌ನ ಉಪಾಧ್ಯಕ್ಷ ರಿಚರ್ಡ್ ಗಿಂಗ್ರಾಸ್ ಹೇಳಿಕೆ ನೀಡಿದ್ದಾರೆ. ಇಂದು ಜನಜೀವನವನ್ನು ಅಸ್ತವ್ಯಸ್ತಗೊಳಿಸಿದ ಕೊರೋನ ವೈರಸ್ ಸಾಂಕ್ರಾಮಿಕದಿಂದಾಗಿ ಜಾರಿಗೆ ಬಂದಿರುವ ಲಾಕ್‌ಡೌನ್, ಹೋಂ ಆರ್ಡರ್, ಶಾಲೆ ಮತ್ತು ಉದ್ಯಾನವನಗಳನ್ನು ಮುಚ್ಚುವ ಬಗೆಗೆ ವರದಿಗಳನ್ನು ನೀಡುವ ಮೂಲಕ ಉತ್ತಮ ಕಾರ್ಯ ಮಾಡುತ್ತಿವೆ ಎಂದು ವಿವರಿಸಿದ್ದಾರೆ. ಆಸಕ್ತ ಸಂಸ್ಥೆಗಳು ಎಪ್ರಿಲ್ 29ರೊಳಗೆ ಅರ್ಜಿ ಸಲ್ಲಿಸುವಂತೆ ಅವರು ಸೂಚಿಸಿದ್ದಾರೆ.
ಫೇಸ್‌ಬುಕ್ ಈಗಾಗಲೇ ಜಾಗತಿಕಮಟ್ಟದಲ್ಲಿ ಕೊರೋನ ಪರಿಣಾಮವಾಗಿ ಸಂಕಷ್ಟಕ್ಕೀಡಾದ ಸುದ್ದಿಸಂಸ್ಥೆಗಳಿಗೆ 100 ದಶಲಕ್ಷ ಡಾಲರ್ ನೆರವನ್ನು ಘೋಷಿಸಿತ್ತು.