ಕ್ಷೌರಿಕ ಸಮುದಾಯದ ಬದುಕು ಕಸಿದ ಲಾಕ್‌ಡೌನ್
ಬೆಂಗಳೂರು: ಕೊರೋನ ನಿಯಂತ್ರಣಕ್ಕಾಗಿ ಮಾಡಿರುವ ಲಾಕ್‌ಡೌನ್ ಕೂಲಿ ಕಾರ್ಮಿಕರ ಜೀವನ ಕಸಿದಿದೆ. ಇದರ ನಡುವೆ ಹಿಂದುಳಿದ ಸವಿತಾ ಸಮುದಾಯ(ಕ್ಷೌರಿಕ) ತಮ್ಮ ಕಸುಬನ್ನು ನಂಬಿ ಜೀವನ ಸಾಗಿಸುತ್ತಿದ್ದರು. ಆದರೆ, ಈ ಲಾಕ್‌ಡೌನ್‌ನಿಂದಾಗಿ ನರಕಯಾತನೆ ಅನುಭವಿಸುವಂತಾಗಿದೆ.
ಲಾಕ್‌ಡೌನ್‌ನಿಂದಾಗಿ ಸಿಲಿಕಾನ್ ಸಿಟಿ ಸೇರಿದಂತೆ ರಾಜ್ಯಾದ್ಯಂತ ಇರುವ ಸವಿತಾ ಸಮುದಾಯದ ಜೀವನವು ಅಕ್ಷರಶಃ ಬೀದಿಗೆ ಬಿದ್ದಿದೆ. ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ಇಂದಿಗೂ ಹಿಂದುಳಿದಿರುವ ಈ ಸಮುದಾಯವು ತಮ್ಮ ಕುಲ ಕಸುಬನ್ನೇ ನಂಬಿಕೊಂಡು ಜೀವನ ನಡೆಸುತ್ತಿದ್ದಾರೆ. ಆದರೆ, ಕೇಂದ್ರ ಸರಕಾರ ಘೋಷಿಸಿರುವ ಲಾಕ್‌ಡೌನ್‌ನಿಂದ ನರಕಯಾತನೆ ಅನುಭವಿಸುವಂತಾಗಿದೆ.
ಸವಿತಾ ಸಮುದಾಯವರು ಕ್ಷೌರಿಕ ವೃತ್ತಿಯನ್ನೇ ಅವಲಂಭಿಸಿದ್ದಾರೆ. ಸಿಲಿಕಾನ್ ಸಿಟಿಯಲ್ಲಿ 50ಸಾವಿರಕ್ಕೂ ಅಧಿಕ ಸ್ಥಳೀಯ ಸವಿತಾ ಸಮುದಾಯದವರು ಇದ್ದರೆ, ಉತ್ತರ ಪ್ರದೇಶ, ಬಿಹಾರ, ಮಧ್ಯಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳಿಂದ ಬಂದಂತಹವರು ಕ್ಷೌರಿಕ ವೃತ್ತಿಯನ್ನು ಮಾಡುತ್ತಿದ್ದರು. ಆದರೆ, ಈಗ ಅಂಗಡಿಗಳಿಗೆ ಜನರು ಬಾರದ ಕಾರಣ ಬದುಕಿನ ಬಂಡಿ ಸಾಗಿಸಲು ಸಂಕಷ್ಟಪಡುತ್ತಿದ್ದಾರೆ.
ಪ್ರತಿದಿನ ಕೆಲಸ ಮಾಡುವ ಸವಿತಾ ಸಮುದಾಯದವರು, ದಿನದಲ್ಲಿ ದುಡಿ ಯುವುದರಲ್ಲಿ ಇಂತಿಷ್ಟು ಹಣವನ್ನು ಮಾಲಕರಿಗೆ ನೀಡಬೇಕು. ಅಂದರೆ 100 ರೂಪಾಯಿ ಸಂಪಾದನೆ ಮಾಡಿದರೆ 50 ರೂ.ಗಳು ಮಾಲಕರಿಗೆ ನೀಡಬೇಕಿದೆ. ಅದರಿಂದ ಪ್ರತಿನಿತ್ಯ 400-500 ಸಂಪಾದನೆ ಮಾಡುತ್ತಿದ್ದೆವು. ಈ ಹಣದಿಂದಲೇ ಮನೆ ಬಾಡಿಗೆ, ಮಕ್ಕಳ ವಿದ್ಯಾಭ್ಯಾಸ, ಕುಟುಂಬ ನಿರ್ವಹಣೆ ಸೇರಿ ಎಲ್ಲವನ್ನೂ ಸರಿದೂಗಿಸಬೇಕಿದೆ. ಆದರೆ, ಈಗ ನಮ್ಮ ಬದುಕು ಅಕ್ಷರಶಃ ದಿಕ್ಕು ತೋಚದಂತಾಗಿದೆ ಎಂದು ಕ್ಷೌರಿಕ ರಾಮಪ್ಪಅಭಿಪ್ರಾಯಪಟ್ಟಿದ್ದಾರೆ.
ಸರಕಾರ ಲಾಕ್‌ಡೌನ್ ಘೋಷಿಸಿದೆ. ಅಲ್ಲದೆ, ಸಾಮಾಜಿಕ ಅಂತರವನ್ನು ಕಾಪಾಡಬೇಕೆಂದು ಹೇಳಿದೆ. ಆದರೆ, ಜನರಿಗೆ ಕಟಿಂಗ್-ಶೇವಿಂಗ್-ಫೇಷಿಯಲ್ ಮಾಡುವಂತಹ ಸಂದರ್ಭದಲ್ಲಿ ವ್ಯಕ್ತಿಯ ತಲೆ, ಮುಖ, ಮೈ ಮುಟ್ಟಿಯೇ ಕೆಲಸ ಮಾಡಬೇಕಿದೆ. ಈ ಕೊರೋನ ಭಯದಿಂದ, ಅಂತರ ಕಾಪಾಡಿಕೊಳ್ಳಬೇಕಾಗಿರುವುದರಿಂದ ಜನರು ಮನೆಯಿಂದ ಹೊರಬರುತ್ತಿಲ್ಲ. ಅಲ್ಲದೆ, ಮನೆಗಳಲ್ಲಿಯೇ ಸ್ವಂತವಾಗಿ ಕಟಿಂಗ್ ಮಾಡಿಸಿಕೊಳ್ಳುತ್ತಿರುವುದು ವರದಿಯಾಗುತ್ತಿದೆ. ಈ ಹಿಂದೆ ಮನೆಗಳಿಗೆ ಸವಿತಾ ಸಮುದಾಯದವರನ್ನು ಕರೆಸಿಕೊಂಡು ಕಟಿಂಗ್, ಶೇವಿಂಗ್ ಮಾಡಿಸಿಕೊಳ್ಳುತ್ತಿದ್ದ ಸಂದರ್ಭವಿತ್ತು. ಆದರೆ, ಈಗ ಕ್ಷೌರಿಕ ಸಮುದಾಯದವರನ್ನು ನಿಂದಿಸುವುದು, ಅವಮಾನಿಸುವುದು ಅತಿಯಾಗುತ್ತಿದೆ.
ನಮ್ಮ ಸಮಾಜದಲ್ಲಿ ಅಸಂಘಟಿತ ಕಾರ್ಮಿಕರು, ಶೋಷಿತರು, ತಳ ಸಮುದಾಯದವರನ್ನು ಅತ್ಯಂತ ಕೀಳಾಗಿ ಕಾಣುವಂತಹ ಪರಿಪಾಠವಿದೆ. ಸವಿತಾ ಸಮುದಾಯದವರನ್ನು ಅದಕ್ಕಿಂತಲೂ ಕಡೆಯಾಗಿ ಕಾಣುತ್ತಿರುವುದು ನೋಡಿದ್ದೇವೆ. ಇದು ಅತ್ಯಂತ ನೋವಿನ ಸಂಗತಿ ಎಂದು ಸವಿತಾ ಸಮುದಾಯದ ಮುಖಂಡ ವೆಂಕಟೇಶಪ್ಪಬೇಸರ ವ್ಯಕ್ತಪಡಿಸಿದರು.
ಉಪ ಮುಖ್ಯಮಂತ್ರಿ ಡಾ.ಅಶ್ವತ್ಥ ನಾರಾಯಣ ಕ್ಷೌರಿಕ ಸಮುದಾಯದವರ ನೆರವಿಗೆ ಮುಂದಾಗಿದ್ದು, ಹಲವು ಕಡೆಗಳಲ್ಲಿ ಆಹಾರ ಧಾನ್ಯಗಳನ್ನು ವಿತರಿಸಿದ್ದಾರೆ. ಅಲ್ಲದೆ, ಆಯಾ ವಾರ್ಡ್‌ಗಳಲ್ಲಿ ಈ ಕುರಿತು ಗಂಭೀರವಾಗಿ ಪರಿಗಣಿಸಿ, ಎಲ್ಲರಿಗೂ ಸಹಾಯಹಸ್ತ ನೀಡುವಂತೆ ಕರೆ ನೀಡಿದ್ದಾರೆ.
ಆತ್ಮಹತ್ಯೆಯೇ ದಾರಿ
ವಿವಿಧ ರಾಜ್ಯಗಳಿಂದ ಆಗಮಿಸಿರುವ ನೂರಾರು ಸಂಖ್ಯೆಯ ವಲಸೆ ಕಾರ್ಮಿಕರು ಬೆಂಗಳೂರು ನಗರದಲ್ಲಿ ಕ್ಷೌರಿಕರಾಗಿ ದುಡಿಯುತ್ತಿದ್ದಾರೆ. ಆದರೆ, ಈ ಲಾಕ್‌ಡೌನ್‌ನಿಂದಾಗಿ ಅಂಗಡಿಗಳು ತೆರೆಯಲಾಗದೆ, ತಿನ್ನಲು ಆಹಾರವಿಲ್ಲದೆ ಬದುಕುವುದಕ್ಕಿಂತ ಸಾಯುವುದೇ ಲೇಸು ಎಂಬಂತೆ ಹಲವು ಕಡೆ ಕ್ಷೌರಿಕರು ಆತ್ಮಹತ್ಯೆಯ ದಾರಿ ಹಿಡಿಯುತ್ತಿದ್ದಾರೆ ಎಂದು ಸವಿತಾ ಸಮುದಾಯದ ಮುಖಂಡ ಎನ್.ವಿ.ನರಸಿಂಹಯ್ಯ ಹೇಳಿದ್ದಾರೆ.
ಕ್ಷೌರಿಕ ಸಮುದಾಯದ ಕುರಿತು ಸರಕಾರ ಗಂಭೀರವಾದ ಕ್ರಮ ಕೈಗೊಳ್ಳಬೇಕು. ಸವಿತಾ ಸಮುದಾಯದವರಿಗೆ ಅಗತ್ಯ ಸುರಕ್ಷತಾ ಕ್ರಮ(ಪಿಪಿಪಿ ಕಿಟ್)ಗಳನ್ನು ನೀಡುವ ಮೂಲಕ ಕ್ಷೌರಿಕ ವೃತ್ತಿ ನಿರ್ವಹಿಸಲು ಅವಕಾಶ ನೀಡಬೇಕು. ಅಲ್ಲದೆ, ಎಲ್ಲ ಕ್ಷೌರಿಕ ಸಮುದಾಯದ ಕುಟುಂಬಗಳಿಗೆ ದಿನಸಿ ಹಾಗೂ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ಕ್ರಮ ಕೈಗೊಳ್ಳಬೇಕು. ವಲಸೆ ಬಂದ ಸಮುದಾಯದ ಜನರಿಗೂ ಸರಕಾರದ ಸೌಲಭ್ಯಗಳನ್ನು ವಿಸ್ತರಿಸಲು ಗಂಭೀರವಾಗಿ ಚಿಂತಿಸಬೇಕಿದೆ.
-ಎನ್.ವಿ.ನರಸಿಂಹಯ್ಯ,
ಸವಿತಾ ಸಮಾಜದ ಮುಖಂಡರು