×
Ad

‘‘ಮಂಗಳೂರಿಗೆ ಸದ್ಯಕ್ಕೆ ನೀರಿನ ಸಮಸ್ಯೆ ಎದುರಾಗದು’’

Update: 2020-04-16 12:13 IST

ಮಂಗಳೂರು, ಎ.16: ಕೊರೋನ ನಿಯಂತ್ರಣಕ್ಕೆ ಸಂಬಂಧಿಸಿ ಕಾರ್ಯಾಚರಣೆಯ ಒತ್ತಡದ ನಡುವೆಯೂ ಇಂದು ಮೇಯರ್ ಹಾಗೂ ಮನಪಾದ ಹಿರಿಯ ಅಧಿಕಾರಿಗಳು ತುಂಬೆ ಅಣೆಕಟ್ಟಿಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. 

ಮೇಯರ್ ದಿವಾಕರ್ ಪಾಂಡೇಶ್ವರ, ಪಾಲಿಕೆ ಆಯುಕ್ತ ಶಾನಾಡಿ ಅಜಿತ್ ಕುಮಾರ್ ಹೆಗ್ಡೆ, ಉಪ ಆಯುಕ್ತ ಡಾ. ಸಂತೋಷ್ ಕುಮಾರ್, ಮುಖ್ಯ ಅಭಿಯಂತರ ನರೇಶ್ ಶೆಣೈ ಸೇರಿದಂತೆ ಹಿರಿಯ ಅಧಿಕಾರಿಗಳು ತುಂಬೆ ಅಣೆಕಟ್ಟಿಗೆ ಇಂದು ಬೆಳಗ್ಗೆ ಭೇಟಿ ನೀಡಿದ್ದಾರೆ.

‘‘ಬುಧವಾರ ಎಎಂಆರ್ ಅಣೆಕಟ್ಟಿನಿಂದ ನೀರನ್ನು ತುಂಬೆ ಅಣೆಕಟ್ಟಿಗೆ ಹರಿಸಲಾಗಿದ್ದು, ನೀರು 6 ಮೀಟರ್ ಸಂಗ್ರಹವಿದೆ. ಈ ನೀರು ಮುಂದಿನ 50 ದಿನಗಳವರೆಗೆ ನಗರಕ್ಕೆ ಪೂರೈಸಬಹುದಾಗಿದೆ. ಸದ್ಯ ನೀರಿನ ರೇಶನಿಂಗ್ ಅಗತ್ಯವಿಲ್ಲ. ಈ ಬಾರಿ ರೇಶನಿಂಗ್ ಅಗತ್ಯವಾಗಲಿಲ್ಲ’’ ಎಂದು ಪಾಲಿಕೆ ಆಯುಕ್ತ ಶಾನಾಡಿ ಅಜಿತ್ ಕುಮಾರ್ ಹೆಗ್ಡೆ ‘ವಾರ್ತಾಭಾರತಿ’ಗೆ ತಿಳಿಸಿದ್ದಾರೆ.

ಕಳೆದ ಬಾರಿ ಎಪ್ರಿಲ್ 13ರ ವೇಳೆಗೆ ಎರಡು ಬಾರಿ ಎಎಂಆರ್ ಡ್ಯಾಂನಿಂದ ನೀರು ಹರಿಸಲಾಗಿತ್ತು. ಆದರೆ ಈ ಬಾರಿ ನಿನ್ನೆ ಪ್ರಥಮವಾಗಿ ಎಎಂಆರ್ ಡ್ಯಾಂನಿಂದ ತುಂಬೆಗೆ ನೀರು ಹರಿಸಲಾಗಿದೆ. ಕಳೆದ ಬಾರಿ ರೇಶನಿಂಗ್ ವ್ಯವಸ್ಥೆಯ ಮೂಲಕ ನೀರು ಪೂರೈಕೆ ಮಾಡಲಾಗಿತ್ತು. ಈ ಬಾರಿ ಅಂತಹ ಪರಿಸ್ಥಿತಿ ಎದುರಾಗದು. ಸದ್ಯ ಲಾಕ್‌ಡೌನ್‌ನಿಂದಾಗಿ ಸಾಕಷ್ಟು ಕೈಗಾರಿಕೆಗಳು, ಹೊಟೇಲ್‌ಗಳು ಕಾರ್ಯಾಚರಿಸದಿದ್ದರೂ, ನೀರಿನ ಪಂಪಿಂಗ್ ಹಿಂದಿನಂತೆಯೇ ಆಗುತ್ತಿದೆ. ಬೇಡಿಕೆ ಕಡಿಮೆ ಆಗಿಲ್ಲ’’ ಎಂದು ಅವರು ತಿಳಿಸಿದ್ದಾರೆ.


ಈ ಬಾರಿ ನೀರಿನ ಸಮಸ್ಯೆ ಬಾರದು:  ಮೇಯರ್
ಈ ಬಾರಿ ನಗರದ ಜನತೆಗೆ ನೀರಿನ ಕೊರತೆ ಬಾರದು. ಕಳೆದ ಬಾರಿ ಇದೇ ಅವಧಿಯಲ್ಲಿ ಎರಡು ದಿನಗಳಿಗೊಮ್ಮೆ ನೀರು ಕೊಡುವ ಮೂಲಕ ರೇಶನಿಂಗ್ ವ್ಯವಸ್ಥೆ ನಡೆಸಲಾಗಿತ್ತು. ಬಹುತೇಕ ಕೈಗಾರಿಕೆಗಳು ಬಂದ್ ಇದ್ದರೂ, ಎಲ್ಲರೂ ಮನೆಯಲ್ಲಿದ್ದಾರೆ. ಹಾಗಾಗಿ ನೀರಿನ ಉಪಯೋಗ ಹೆಚ್ಚಾಗಿದೆ. ಜೂನ್ ವೇಳೆಗೆ ಮಳೆ ಬಂದರೆ ಈ ಬಾರಿ ನೀರಿನ ಸಮಸ್ಯೆ ಎದುರಾಗದು’’ ಎಂದು ಮೇಯರ್ ದಿವಾಕರ ಪಾಂಡೇಶ್ವರ ಅಭಿಪ್ರಾಯಿಸಿದ್ದಾರೆ 

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News