×
Ad

ಮಂಗಳೂರು: ರೆಡ್‌ಕ್ರಾಸ್‌ಗೆ 37 ಯುನಿಟ್ ರಕ್ತ ಸಂಗ್ರಹ

Update: 2020-04-16 17:33 IST

ಮಂಗಳೂರು, ಎ.16: ಕೊರೋನ ಸೋಂಕಿನ ಹಿನ್ನೆಲೆಯಲ್ಲಿ ಲಾಕ್‌ಡೌನ್‌ನ ಕಾರಣದಿಂದ ಜಿಲ್ಲೆಯಲ್ಲಿ ತುರ್ತು ಚಿಕಿತ್ಸೆಗಳಿಗೆ ರಕ್ತದ ಕೊರತೆಯ ಕುರಿತಂತೆ ‘ವಾರ್ತಾಭಾರತಿ’ಯಲ್ಲಿ ಇಂದು ಪ್ರಕಟವಾದ ಲೇಖನಕ್ಕೆ ದಾನಿಗಳಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.

ರಕ್ತದಾನ ಮಾಡಲಿಚ್ಚಿಸುವವರು ಸ್ವಯಂ ಪ್ರೇರಿತವಾಗಿ ಮುಂದೆ ಬಂದಲ್ಲಿ ರೆಡ್‌ಕ್ರಾಸ್‌ನಿಂದ ವ್ಯವಸ್ಥೆ ಮಾಡುವುದಾಗಿ ಪತ್ರಿಕೆಯಲ್ಲಿ ನೀಡಲಾಗಿರುವ ದೂರವಾಣಿ, ಮೊಬೈಲ್ ಸಂಖ್ಯೆಗೆ ಇಂದು ಬೆಳಗ್ಗಿನಿಂದ 40ಕ್ಕೂ ಅಧಿಕ ಮಂದಿ ಕರೆ ಮಾಡಿದ್ದು, ಸಂಜೆ ವೇಳೆಗೆ 37 ಮಂದಿ ರಕ್ತದಾನ ಮಾಡಿದ್ದಾರೆ.

‘‘ದುರ್ಲಭವಾಗಿರುವ ನೆಗೆಟಿವ್ ಗ್ರೂಪ್‌ನ ರಕ್ತವೂ ಸಂಗ್ರಹವಾಗಿದೆ. ಇಂದು ಸಂಗ್ರಹವಾದ ರಕ್ತ ಕೆಲದಿನಗಳ ಮಟ್ಟಿಗೆ ಲೇಡಿಗೋಶನ್ ಸೇರಿದಂತೆ ನಗರದ ಖಾಸಗಿ ಆಸ್ಪತ್ರೆಗಳಿಗೆ ಪೂರೈಕೆ ಮಾಡಬಹುದಾಗಿದೆ’’ ಎಂದು ದ.ಕ. ಜಿಲ್ಲಾ ರೆಡ್‌ಕ್ರಾಸ್‌ನ ಸಂಯೋಜಕ ಪ್ರವೀಣ್ ‘ವಾರ್ತಾಭಾರತಿ’ ಕೃತಜ್ಞತೆ ಸಲ್ಲಿಸಿದ್ದಾರೆ.

‘‘ಇಕೋ ವಾಹನದಲ್ಲಿ (ಐದು ಅಥವಾ ಆರು) ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ನಗರದ ವಿವಿಧ ಕಡೆಗಳಿಂದ ಕರೆ ಮಾಡಿದ ದಾನಿಗಳನ್ನು ಕರೆ ತರಲಾಗುತ್ತಿದೆ. ರೆಡ್‌ಕ್ರಾಸ್‌ನ ವಾಹನದಲ್ಲಿ ಸಂಸ್ಥೆಯ ಸ್ವಯಂ ಸೇವಕರ ಮೂಲಕವೇ ಕರೆತಲಾಗುತ್ತಿದೆ. ಆದರೆ ಕೆಲವು ಕಡೆ ಪೊಲೀಸರು ಅಡ್ಡಿಪಡಿಸಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿ ಗಮನಕ್ಕೆ ತರಲಾಗಿದೆ. ನಾಳೆಯಿಂದ ದಾನಿಗಳನ್ನು ಗುರುತಿಸಿ ಅವರಿಗೆ ಪಾಸ್ ಒದಗಿಸಿ ರಕ್ತ ಸಂಗ್ರಹಕ್ಕೆ ವ್ಯವಸ್ಥೆ ಮಾಡುವುದಾಗಿ ಜಿಲ್ಲಾಧಿಕಾರಿ ಕಚೇರಿಯ ಅಧಿಕಾರಿಯೊಬ್ಬರು ಭರವಸೆ ನೀಡಿದ್ದಾರೆ. ರೆಡ್‌ಕ್ರಾಸ್‌ನ ಸ್ವಯಂ ಸೇವಕರು ಇಂತಹ ತುರ್ತು ಪರಿಸ್ಥಿತಿಯಲ್ಲಿ ರಾತ್ರಿ ಹಗಲೆನ್ನದೆ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಉಡುಪಿಯಿಂದಲೂ ರಕ್ತದಾನಕ್ಕೆ ದಾನಿಗಳಿಂದ ಕರೆ ಬಂದಿದೆ. ಅವರಿಗೆ ಅಲ್ಲಿಯೇ ರೆಡ್‌ಕ್ರಾಸ್‌ನಲ್ಲಿ ರಕ್ತದಾನ ಮಾಡುವಂತೆ ಮನವಿ ಮಾಡಲಾಗಿದೆ. ಜನರಿಂದ ಸ್ವಯಂ ಪ್ರೇರಿತರಾಗಿ ಈ ಸಹಕಾರ ನಿಜಕ್ಕೂ ಅಭಿನಂದನೀಯ. ಲೇಡಿಗೋಶನ್ ಆಸ್ಪತ್ರೆಯ ಆವರಣದಲ್ಲಿರುವ ರೆಡ್‌ಕ್ರಾಸ್‌ನ ಕಚೇರಿ ಅತ್ಯಾಧುನಿಕ ಹಾಗೂ ಸುಸಜ್ಜಿತವಾಗಿದೆ. ಕೊರೋನ ಹಿನ್ನೆಲೆಯಲ್ಲಿ ರೆಡ್‌ಕ್ರಾಸ್‌ನ ಸಿಬ್ಬಂದಿ ಹಾಗೂ ಸ್ವಯಂಸೇವಕರ ಹಿತಾಸಕ್ತಿಯನ್ನು ಕಾಪಾಡುವುದು ನಮ್ಮ ಆದ್ಯ ಕರ್ತವ್ಯವಾಗಿದೆ. ಹಾಗಾಗಿ ಸಾಮಾಜಿಕ ಅಂತರದ ಜತೆಗೆ ದಾನಿಗಳ ಆರೋಗ್ಯ ತಪಾಸಣೆಯ ನಂತರವೇ ರಕ್ತವನ್ನು ಸಂಗ್ರಹಿಸಲಾಗುತ್ತಿದೆ’’ ಎಂದು ಪ್ರವೀಣ್ ತಿಳಿಸಿದ್ದಾರೆ.

ಪಂಜಿಮೊಗರು ಡಿವೈಎಫ್‌ಐನ 19 ಕಾರ್ಯಕರ್ತರಿಂದ ರಕ್ತದಾನ
ರಕ್ತದ ಕೊರತೆಯ ಕುರಿತು ಪತ್ರಿಕೆಯಲ್ಲಿ ಪ್ರಕಟವಾದ ವರದಿಯನ್ನು ಗಮನಿಸಿದ ಡಿವೈಎಫ್‌ಐನ ಪಂಜಿಮೊಗರು ಘಟಕದ 19 ಕಾರ್ಯಕರ್ತರು ರೆಡ್‌ಕ್ರಾಸ್ ಸಹಯೋಗದಲ್ಲಿ ಲೇಡಿಗೋಶನ್ ಆಸ್ಪತ್ರೆಗೆ ಆಗಮಿಸಿ ರಕ್ತದಾನ ಮಾಡಿದರು. ಮಾಜಿ ಕಾರ್ಪೊರೇಟರ್ ದಯಾನಂದ ಸೇರಿದಂತೆ ಧರ್ಮಾತೀತವಾಗಿ ರಕ್ತದಾನದಲ್ಲಿ ಪಾಲ್ಗೊಲ್ಳುವ ಮೂಲಕ ಮಾನವ ಧರ್ಮ ಶ್ರೇಷ್ಠ ಹಾಗೂ ಜೀವ ಉಳಿಸಲು ಇತರರೂ ರಕ್ತದಾನ ಮಾಡಿ ಎಂಬ ಸಂದೇಶ ಸಂದೇಶವನ್ನು ನೀಡಿದ್ದಾರೆ.

ಜಿಲ್ಲಾ ಯುವ ಕಾಂಗ್ರೆಸ್ ಪದಾಧಿಕಾರಿಗಳಿಂದ ರಕ್ತದಾನ
ಇದೇ ವೇಳೆ ರಾಜ್ಯದಲ್ಲಿ ರೋಗಿಗಳಿಗೆ ರಕ್ತದ ತೀವ್ರ ಕೊರತೆ ಎದುರಾಗಿರುವ ಹಿನ್ನೆಲೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಶಿವಕುಮಾರ್, ಎನ್‌ಎಸ್‌ಯುಐ ರಾಜ್ಯಾಧ್ಯಕ್ಷ ಎಚ್. ಮಂಜುನಾಥ್ ಮತ್ತು ದಕ್ಷಿಣ ಕನ್ನಡ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈಯವರು ರಕ್ತದಾನ ಮಾಡುವಂತೆ ಸಲಹೆ ನೀಡಿರುವ ಕಾರಣ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ  ಜಿಲ್ಲಾ ಯುವ ಕಾಂಗ್ರೆಸ್‌ನ ಕಾರ್ಯದರ್ಶಿ ಅನ್ಸಾರುದ್ದೀನ್ ಸಾಲ್ಮರ, ಪ್ರಧಾನ ಕಾರ್ಯದರ್ಶಿ ಸವಾದ್ ಸುಳ್ಯ ಹಾಗೂ ಯುವ ಕಾಂಗ್ರೆಸ್‌ನ ಪಾಧಿಕಾರಿಗಳು ರಕ್ತದಾನ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News