ದುಬಾರಿ ಬೆಲೆಗೆ ಮೀನು ಮಾರಾಟ ಮಾಡಿದರೆ ದೋಣಿ ಲೈಸನ್ಸ್ ರದ್ದು: ಉಡುಪಿ ಜಿಲ್ಲಾಧಿಕಾರಿ ಎಚ್ಚರಿಕೆ
ಉಡುಪಿ, ಎ.16: ಸರಕಾರ ನೀಡಿರುವ ಅನುಮತಿಯಂತೆ ಈಗಾಗಲೇ ಜಿಲ್ಲೆಯಲ್ಲಿ ಸಾಂಪ್ರದಾಯಿಕ ಹಾಗೂ 10 ಎಚ್‌ಪಿ ಒಳಗಿನ ಇಂಜಿನ್ ಹೊಂದಿರುವ ನಾಡದೋಣಿಗಳಿಂದ ಮೀನುಗಾರಿಕೆ ಆರಂಭವಾಗಿದ್ದು, ದುಬಾರಿ ಬೆಲೆಯಲ್ಲಿ ಮೀನು ಮಾರಾಟ ಮಾಡಿದರೆ ದೋಣಿಯ ಲೈಸನ್ಸ್/ಸಂಘ ಸಂಸ್ಥೆಗಳ ನೋಂದಣಿಯನ್ನು ರದ್ದು ಪಡಿಸುವುದಾಗಿ ಉಡುಪಿ ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ.
ಮೀನಿನ ದರ ನಿರ್ವಹಣೆಯನ್ನು ಮೀನುಗಾರರೇ ಅಥವಾ ಮೀನುಗಾರಿಕೆ ಸಂಘ ಸಂಸ್ಥೆಗಳಿಂದ ಯಾವುದೇ ಗೊಂದಲಕ್ಕೆ ಆಸ್ಪದ ನೀಡದಂತೆ ನಿರ್ವಹಿಸ ಬೇಕು. ಯಾವುದೇ ಸಂದರ್ಭದಲ್ಲಿ ದುಬಾರಿ ಬೆಲೆಯಲ್ಲಿ ಮಾರಾಟ ಮಾಡುವುದು ಹಾಗೂ ಪ್ರಸ್ತುತ ಸ್ಥಿತಿಯ ದುರ್ಲಾಭ ಪಡೆಯುವುದು ಕಂಡುಬಂದಲ್ಲಿ ದೋಣಿಯ ಲೈಸನ್ಸ್ ಹಾಗೂ ಸಂಘ ಸಂಸ್ಥೆಗಳ ನೋಂದಣಿಯನ್ನು ರದ್ದುಪಡಿಸಲಾಗುವುದು ಎಂದು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಆದೇಶದಲ್ಲಿ ಎಚ್ಚರಿಕೆ ನೀಡಿದ್ದಾರೆ.
ಇಳಿದಾಣಗಳಲ್ಲಿ ಖಾಲಿ ಮಾಡಲಾದ ಮೀನನ್ನು ನೇರವಾಗಿ ಸಗಟು ಮಾರಾಟಕ್ಕಾಗಿ ನೀಡಬೇಕು ಅಥವಾ ದೋಣಿ ಮಾಲಕರೇ ನೇರವಾಗಿ ಮನೆ ಗಳಿಗೆ ಮೀನು ಮಾರಾಟ ಮಾಡಬೇಕು. ಯಾವುದೇ ಕಾರಣಕ್ಕೂ ಇಳಿದಾಣ ಕೇಂದ್ರಗಳಲ್ಲಿ ಚಿಲ್ಲರೆ ಮೀನು ಮಾರಾಟ ಮಾಡಬಾರದು. ಮೀನು ಮಾರುಕಟ್ಟೆಗಳಲ್ಲಿ ಮೀನು ಮಾರಾಟ ಮಾಡಲು ಇಚ್ಛಿಸಿದಲ್ಲಿ ಸ್ಥಳೀಯ ಆಡಳಿತ ಗ್ರಾಪಂ ಅನುಮತಿ ಪಡೆದು ಸಾಮಾಜಿಕ ಅಂತರ ಮತ್ತು ವೈಯಕ್ತಿಕ ಶುಚಿತ್ವವನ್ನು ಕಾಪಾಡಿಕೊಂಡು ಮಾರಾಟ ಮಾಡಲು ಸೂಕ್ತ ವ್ಯವಸ್ಥೆ ಯನ್ನು ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.