ಯುಎಇಗೆ ಹೈಡಾಕ್ಸಿಕ್ಲೋರೊಕ್ವೈನ್ ತ್ವರಿತ ಪೂರೈಕೆಗೆ ಭಾರತದ ಸಿದ್ಧತೆ

Update: 2020-04-16 15:02 GMT

ಹೊಸದಿಲ್ಲಿ,ಎ.16: ಕೊರೋನ ವೈರಸ್ ವಿರುದ್ಧ ಹೋರಾಟದಲ್ಲಿ ಪರಿಣಾಮಕಾರಿ ಔಷಧಿ ಎಂದು ಪರಿಗಣಿಸಲಾಗಿರುವ ಹ್ರೈಡ್ರಾಕ್ಸಿಕ್ಲೋರೊಕ್ವೈನ್‌ಗಾಗಿ ಸಂಯುಕ್ತ ಅರಬ್ ಗಣರಾಜ್ಯ (ಯುಎಇ)ದ ಮನವಿಗೆ ಸ್ಪಂದಿಸಿರುವ ಭಾರತವು ಪೂರೈಕೆ ಪ್ರಕ್ರಿಯೆಯನ್ನು ತ್ವರಿತಗೊಳಿಸುತ್ತಿದೆ.

‘ಮಲೇರಿಯಾ ನಿರೋಧಕ ಔಷಧಿಯಾಗಿರುವ ಹ್ರೈಡ್ರಾಕ್ಸಿಕ್ಲೋರೊಕ್ವೈನ್‌ಗೆ ಹಲವಾರು ದೇಶಗಳಿಂದ ಭಾರೀ ಬೇಡಿಕೆಯಿದ್ದು,ಭಾರತವು ಅವುಗಳನ್ನು ಪ್ರತ್ಯೇಕವಾಗಿ ಪರಿಶೀಲಿಸುತ್ತಿದೆ. ಔಷಧಿಯು ನಿರ್ಬಂಧಿತ ಪಟ್ಟಿಯಲ್ಲಿರುವುದ ರಿಂದ ಉಭಯ ರಾಷ್ಟ್ರಗಳ ನಡುವಿನ ಸ್ನೇಹಪರ ಸಂಬಂಧವನ್ನು ಪರಿಗಣಿಸಿ ನಾವು ಯುಎಇಗೆ ವಿನಾಯಿತಿ ನೀಡುತ್ತಿದ್ದೇವೆ ’ ಎಂದು ಸಂಯುಕ್ತ ಅರಬ್ ಗಣರಾಜ್ಯಕ್ಕೆ ಭಾರತೀಯ ರಾಯಭಾರಿ ಪವನ್ ಕುಮಾರ್ ತಿಳಿಸಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.

ಯುಎಇಯಲ್ಲಿಯ ಕೆಲವು ಕಂಪನಿಗಳು ಈ ಔಷಧಿಯನ್ನು ಆಮದು ಮಾಡಿಕೊಳ್ಳುವಂತೆ ತಮ್ಮ ಸರಕಾರವನ್ನು ಕೋರಿಕೊಂಡಿದ್ದವು.

ಹ್ರೈಡ್ರಾಕ್ಸಿಕ್ಲೋರೊಕ್ವೈನ್‌ನ್ನು ಎಝಿಥ್ರೊಮೈಸಿನ್ ಜೊತೆ ನೀಡಿದಾಗ ಕೊರೋನ ವೈರಸ್ ರೋಗಿಗಳಲ್ಲಿ ಸೋಂಕು ಬೇಗನೆ ನಿವಾರಣೆಯಾಗುತ್ತದೆ ಎಂದು ಸಂಶೋಧನೆಗಳು ಬೆಳಕಿಗೆ ತಂದ ಬಳಿಕ ಭಾರತವು ತಯಾರಿಸುವ ಈ ಔಷಧಿಗೆ ಜಾಗತಿಕ ಬೇಡಿಕೆ ಹೆಚ್ಚಿದೆ.

ಯುಎಇಯಲ್ಲಿ ಬುಧವಾರ 432 ಹೊಸ ಕೊರೋನ ವೈರಸ್ ಪ್ರಕರಣಗಳು ವರದಿಯಾಗಿದ್ದು,ಇದರೊಂದಿಗೆ ಒಟ್ಟು ಪ್ರಕರಣಗಳ ಸಂಖ್ಯೆ 5,365ಕ್ಕೇರಿದೆ. ಈವರೆಗೆ ವಿವಿಧ ದೇಶಗಳ ಐವರು ವಲಸಿಗರು ಸೇರಿದಂತೆ 33 ಜನರು ಸಾವನ್ನಪ್ಪಿದ್ದಾರೆ.

ಮಾನವೀಯ ಹೆಜ್ಜೆಯೊಂದರಲ್ಲಿ ಭಾರತವು ಬುಧವಾರ ಕೊರೋನ ವೈರಸ್ ಪಿಡುಗನ್ನು ಎದುರಿಸಲು ನೆರವಾಗುವ ನಿಟ್ಟಿನಲ್ಲಿ ಮಾರಿಷಿಯಸ್ ಮತ್ತು ಸೇಷೆಲ್ಸ್‌ಗಳಿಗೆ ಹ್ರೈಡ್ರಾಕ್ಸಿಕ್ಲೋರೊಕ್ವೈನ್ ಮಾತ್ರೆಗಳು ಸೇರಿದಂತೆ ಜೀವರಕ್ಷಕ ಔಷಧಿಗಳನ್ನು ಉಡುಗೊರೆಯಾಗಿ ನೀಡಿದೆ.

 ಬುಧವಾರ ಸಂಜೆ ಏರ್‌ಇಂಡಿಯಾದ ವಿಶೇಷ ಕಾರ್ಗೊ ವಿಮಾನದ ಮೂಲಕ ಆಗಮಿಸಿದ ಐದು ಲಕ್ಷ ಹ್ರೈಡ್ರಾಕ್ಸಿಕ್ಲೋರೊಕ್ವೈನ್ ಮಾತ್ರೆಗಳನ್ನು ಮಾರಿಷಿಯಸ್‌ನ ಉಪಪ್ರಧಾನಿ ಲೀಲಾದೇವಿ ಲಚೂಮನ್ ದೂಕುನ್ ಅವರು ಸ್ವೀಕರಿಸಿದರು ಎಂದು ಪೋರ್ಟ್ ಲೂಯಿಸ್‌ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಯು ಹೇಳಿಕೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News