ಉ.ಪ್ರ:ಗುಂಡು ಹಾರಿಸಿ ಮಹಿಳೆಯ ಹತ್ಯೆ: ರಕ್ಷಿಸುವ ಬದಲು ವೀಡಿಯೊ ಚಿತ್ರೀಕರಿಸುತ್ತಿದ್ದ ನೆರೆಕರೆಯವರು!

Update: 2020-04-16 15:19 GMT
ಸಾಂದರ್ಭಿಕ ಚಿತ್ರ

ಲಕ್ನೋ,ಎ.16: ಉತ್ತರ ಪ್ರದೇಶದ ಕಾಸಗಂಜ್‌ನಲ್ಲಿ ವ್ಯಕ್ತಿಯೋರ್ವ 60ರ ಹರೆಯದ ಮಹಿಳೆಯನ್ನು ಅತ್ಯಂತ ಸಮೀಪದಿಂದ ಎರಡು ಬಾರಿ ಗುಂಡು ಹಾರಿಸಿ ಕೊಲೆಗೈದಿರುವ ವೀಡಿಯೊವೊಂದು ವೈರಲ್ ಆಗಿದೆ. ಮೊದಲ ಗುಂಡೇಟು ಬಿದ್ದ ಬಳಿಕ ಮಹಿಳೆ ನೆರವಿಗೆ ಆರ್ತನಾದಗೈಯುತ್ತಿದ್ದರೂ ನೆರೆಕರೆಯವರು ರಕ್ಷಣೆಗೆ ಧಾವಿಸದೆ ಮೊಬೈಲ್‌ನಲ್ಲಿ ವೀಡಿಯೊ ಚಿತ್ರೀಕರಣದಲ್ಲಿ ಮಗ್ನರಾಗಿದ್ದರು.

ಕಟ್ಟಡವೊಂದರ ತಾರಸಿಯಿಂದ ಒಂದು ನಿಮಿಷ ಅವಧಿಯ ಈ ಮೊಬೈಲ್ ವೀಡಿಯೊವನ್ನು ಚಿತ್ರೀಕರಿಸಲಾಗಿದೆ. ರಸ್ತೆಯಲ್ಲಿ ಕಂಟ್ರಿ ಪಿಸ್ತೂಲು ಹಿಡಿದುಕೊಂಡಿದ್ದ ವ್ಯಕ್ತಿಯೋರ್ವ ಮಹಿಳೆಗೆ ಬೆದರಿಕೆಯೊಡ್ಡುತ್ತಿದ್ದ ಮತ್ತು ಆಕೆ ತನ್ನ ಮನೆಯೊಳಗೆ ಓಡಿಹೋಗಲು ಪ್ರಯತ್ನಿಸುತ್ತಿದ್ದಾಗ ಪಿಸ್ತೂಲಿನಿಂದ ಮೊದಲ ಗುಂಡು ಹಾರಿತ್ತು. ನೆಲಕ್ಕೆ ಕುಸಿದು ಬಿದ್ದ ಮಹಿಳೆ ನೋವಿನಿಂದ ಕೂಗಾಡುತ್ತಿದ್ದರೂ ಹಂತಕನನ್ನು ತಡೆಯಲು ಯಾರೂ ಪ್ರಯತ್ನಿಸಿರಲಿಲ್ಲ. ಆತ ಹಾರಿಸಿದ್ದ ಎರಡನೇ ಗುಂಡು ಆಕೆಯ ಜೀವ ತೆಗೆದಿತ್ತು.

ಆರೋಪಿ ಮೋನು ಮತ್ತು ಆತನಿಗೆ ಆಶ್ರಯ ನೀಡಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಕೊಲೆಗೆ ಕಾರಣ ಸ್ಪಷ್ಟವಾಗಿಲ್ಲ.

ವೀಡಿಯೊ ಚಿತ್ರೀಕರಿಸಿದ್ದ ಮಹಿಳೆಯ ನೆರೆಹೊರೆಯವರ ವಿರುದ್ಧ ಕಾನೂನು ಕ್ರಮವನ್ನು ಕೈಗೊಳ್ಳುವುದಾಗಿ ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News