×
Ad

ಕೋವಿಡ್-19 ಪರೀಕ್ಷೆಗೆ ಮುಂಬೈ ಪ್ರೊಫೆಸರ್ ರೂಪಿಸಿರುವ ಎಐ ಆಧಾರಿತ ‘ವಾಯ್ಸೊ ಟೂಲ್’ ಪರೀಕ್ಷಾ ಹಂತದಲ್ಲಿ

Update: 2020-04-16 21:49 IST

ಹೊಸದಿಲ್ಲಿ,ಎ.16: ಮುಂಬೈನ ಡಿ.ವೈ. ಪಾಟೀಲ ಇನ್‌ಸ್ಟಿಟ್ಯೂಟ್ ಆಫ್ ಬಯೊಟೆಕ್ನಾಲಜಿ ಆ್ಯಂಡ್ ಬಯೊಇನ್ಫಾರ್ಮೇಟಿಕ್ಸ್‌ನ ಪ್ರೊಫೆಸರ್ ಸಂತೋಷ್ ಬೋಥೆ ಅವರ ಮಾರ್ಗದರ್ಶನದಲ್ಲಿ ಮೂವರು ವಿದ್ಯಾರ್ಥಿನಿಯರು ರೂಪಿಸಿರುವ ಕೃತಕ ಬುದ್ಧಿಮತ್ತೆ (ಎಐ) ಆಧಾರಿತ ಟೂಲ್ ಅಥವಾ ಸಾಧನವನ್ನು ರೋಮ್‌ನಲ್ಲಿಯ ಯುನಿವರ್ಸಿಟಿ ಆಫ್ ಟೋರ್ ವೆರ್ಗಟಾ ಪ್ರಾಯೋಗಿಕ ಪರೀಕ್ಷೆಗೊಳಪಡಿಸಿದೆ. ಈಗಾಗಲೇ ಪೇಟೆಂಟ್ ಪಡೆದುಕೊಂಡಿರುವ ಈ ಟೂಲ್ ಸ್ಮಾರ್ಟ್‌ಫೋನ್ ಬಳಸಿ ಧ್ವನಿ ಆಧಾರಿತ ರೋಗನಿರ್ಣಯದ ಮೂಲಕ ಕೋವಿಡ್-19 ಪರೀಕ್ಷೆಯನ್ನು ನಡೆಸುತ್ತದೆ ಎಂದು ಅನ್ವೇಷಕರು ಹೇಳಿದ್ದಾರೆ. ತಂಡವು ಬಯೊಇನ್ಫಾರ್ಮೇಟಿಕ್ಸ್ ವಿದ್ಯಾರ್ಥಿನಿಯರಾದ ರಷ್ಮಿ ಚಕ್ರವರ್ತಿ,ಪ್ರಿಯಾಂಕಾ ಚೌಹಾಣ್ ಮತ್ತು ಪ್ರಿಯಾ ಗರ್ಗ್ ಅವರನ್ನೊಳಗೊಂಡಿದೆ.

ರೋಮ್‌ನ ವಿವಿಯು ಈಗಾಗಲೇ ಈ ಟೂಲ್ ಅನ್ನು 300 ವ್ಯಕ್ತಿಗಳಲ್ಲಿ ಪರೀಕ್ಷೆಗೊಳಪಡಿಸಿದ್ದು,ಶೇ.99ರಷ್ಟು ನಿಖರ ಫಲಿತಾಂಶಗಳು ದೊರಕಿವೆ.

 ಕೋವಿಡ್-19ನ್ನು ಪತ್ತೆ ಹಚ್ಚಲು ಧ್ವನಿ ಆಧಾರಿತ ಎಐ ಟೂಲ್‌ನ್ನು ರೂಪಿಸಲು ಹಲವಾರು ವಿದೇಶಿ ವಿವಿಗಳು ಪ್ರಯತ್ನಿಸುತ್ತಿದ್ದರೆ ಈ ಭಾರತೀಯ ಟೂಲ್ ಸಂಪೂರ್ಣವಾಗಿ ಸಜ್ಜುಗೊಂಡಿದ್ದು,ಸದ್ಯ ಇಟಲಿಯಲ್ಲಿ ಕೊರೋನ ವೈರಸ್ ರೋಗಿಗಳನ್ನು ಯಶಸ್ವಿಯಾಗಿ ಗುರುತಿಸಲು ಬಳಕೆಯಾಗುತ್ತಿದೆ ಎಂದು ಸುದ್ದಿಸಂಸ್ಥೆಗೆ ತಿಳಿಸಿದ ಬೋಥೆ,ಯಾರಾದರೂ ಆ್ಯಪ್‌ನ ಮೈಕ್ರೋಫೋನ್‌ನಲ್ಲಿ ಮಾತನಾಡಿದಾಗ ಈ ಟೂಲ್ ಧ್ವನಿಯನ್ನು ತರಂಗಾಂತರ ಮತ್ತು ಶಬ್ದ ವಿರೂಪತೆಯಂತಹ ಹಲವಾರು ಮಾನದಂಡಗಳಲ್ಲಿ ವಿಭಜಿಸುತ್ತದೆ. ಬಳಿಕ ಈ ಮೌಲ್ಯಗಳನ್ನು ಸಾಮಾನ್ಯ ವ್ಯಕ್ತಿಯ ಮೌಲ್ಯಗಳೊಡನೆ ಹೋಲಿಸಲಾಗುತ್ತದೆ ಮತ್ತು ಪೇಟೆಂಟ್ ಹೊಂದಿರುವ ತಂತ್ರಜ್ಞಾನವು ರೋಗಿಯಲ್ಲಿ ಕೊರೋನ ವೈರಸ್ ಸೋಂಕು ಇದೆಯೇ ಇಲ್ಲವೇ ಎನ್ನುವುದನ್ನು ನಿರ್ಧರಿಸುತ್ತದೆ ಎಂದು ವಿವರಿಸಿದರು.

ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ)ಯ ತಂಡವೊಂದು ಕೂಡ ಕೆಮ್ಮು ಮತ್ತು ಉಸಿರಾಟದ ಶಬ್ದಗಳ ವಿಶ್ಲೇಷಣೆಯ ಆಧಾರದಲ್ಲಿ ರೋಗನಿರ್ಣಯ ಟೂಲ್ ರೂಪಿಸಲು ಶ್ರಮಿಸುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News